ಲಂಡನ್: ವಿಂಬಲ್ಡನ್ ಗ್ರಾನ್ಸ್ಲ್ಯಾಮ್ನ ಪುರುಷರ ಫೈನಲ್ನಲ್ಲಿ ಎರಡು ಮದಗಜಗಳು ಬಂದು ನಿಂತಿವೆ. 7 ಬಾರಿಯ ಚಾಂಪಿಯನ್ ನೊವಾಕ್ ಜೊಕೊವಿಕ್ ಮತ್ತು ಹಾಲಿ ಚಾಂಪಿಯನ್ ಕಾರ್ಲೊಸ್ ಅಲ್ಕರಜ್ ನಾಳೆ (ಜುಲೈ 14) ನಡೆಯುವ ಅಂತಿಮ ಹಂತದ ಹೋರಾಟದಲ್ಲಿ ಸೆಣಸಾಡಲಿದ್ದಾರೆ.
ಟೆನಿಸ್ ಕೋರ್ಟ್ನ ಹಳೆಯ ಹುಲಿ ಜೊಕೊವಿಕ್ 25ನೇ ಗ್ರಾನ್ಸ್ಲ್ಯಾಮ್ ಮೇಲೆ ಕಣ್ಣಿಟ್ಟಿದ್ದರೆ, ಸತತ 2ನೇ ವಿಂಬಲ್ಡನ್ ಪ್ರಶಸ್ತಿಯನ್ನು ತನ್ನದಾಗಿಸಿಕೊಳ್ಳಲು ಅಲ್ಕರಜ್ ಸಜ್ಜಾಗಿದ್ದಾರೆ. 2023ರ ಫೈನಲ್ನಲ್ಲಿ ಇಬ್ಬರೂ ಸೆಣಸಾಡಿದ್ದರು. ಟೆನಿಸ್ನ ಹೊಸ ಸೂಪರ್ಸ್ಟಾರ್ ಆಗಿ ಹೊರಹೊಮ್ಮಿರುವ ಅಲ್ಕರಜ್ ಎದುರು ನೊವಾಕ್ ಸೋಲು ಕಂಡಿದ್ದರು.
Carlos Alcaraz vs Novak Djokovic: The Sequel#Wimbledon pic.twitter.com/8uiFg5qGn5
— Wimbledon (@Wimbledon) July 12, 2024
ಪುರುಷರ ಮೊದಲ ಸೆಮಿಫೈನಲ್ ಹಣಾಹಣಿಯಲ್ಲಿ 21 ವರ್ಷದ ಅಲ್ಕರಜ್, 5ನೇ ಶ್ರೇಯಾಂಕಿತ ರಷ್ಯಾದ ಡೇನಿಯಲ್ ಮೆಡ್ವೆಡೆವ್ರನ್ನು 6-7(1/7), 6-3, 6-4, 6-4 ಸೆಟ್ಗಳಿಂದ ಸೋಲಿಸಿದ್ದರು. ಟ್ರೈ ಬ್ರೇಕರ್ಗೆ ತೆರಳಿದ್ದ ಮೊದಲ ಸೆಟ್ನಲ್ಲಿ ಅಲ್ಕರಜ್ ಸೋಲು ಕಾಣಬೇಕಾಯಿತು. ಬಳಿಕ ಪುಟಿದೆದ್ದ ಯುವ ತಾರೆ, ಮುಂದಿನ ಮೂರು ಸೆಟ್ಗಳನ್ನು ಬಾಚಿಕೊಂಡರು. ಮೂರನೇ ಸೆಟ್ನಲ್ಲಿ ತುಸು ಜಿದ್ದಾಜಿದ್ದಿನ ಹೋರಾಟ ಕಂಡುಬಂದಿತು. ಸೆಮೀಸ್ನಲ್ಲಿ ಸೋಲುವ ಮೂಲಕ ಮೆಡ್ವೆಡೆವ್ ಸತತ ಎರಡನೇ ಬಾರಿಗೆ ನಾಲ್ಕರ ಘಟ್ಟದಿಂದ ಅಲ್ಕರಜ್ ವಿರುದ್ಧವೇ ಹೊರದಬ್ಬಿಸಿಕೊಂಡರು. 2023 ರ ಟೂರ್ನಿಯಲ್ಲೂ ಇದೇ ಫಲಿತಾಂಶ ಬಂದಿತ್ತು.
ಜೋಕೋಗೆ ಸವಾಲಾಗದ ಮುಸೆಟ್ಟಿ: ಇನ್ನು ಎರಡನೇ ಸೆಮೀಸ್ನಲ್ಲಿ ನೊವಾಕ್ ಜೊಕೊವಿಕ್, ಇಟಲಿಯ ಲೊರೆನ್ಜೊ ಮುಸೆಟ್ಟಿ ಅವರನ್ನು ಸೋಲಿಸಿ ಅಂತಿಮ ಹಂತಕ್ಕೆ ತಲುಪಿದರು. ಅತಿಹೆಚ್ಚು ಗ್ರಾನ್ಸ್ಲ್ಯಾಮ್ ಗೆದ್ದ ಆಟಗಾರನ ಹೊಡೆತಗಳಿಗೆ ಮುಸೆಟ್ಟಿ ತಬ್ಬಿಬ್ಬಾದರು. ಇದರಿಂದ 6-4, 7-6, 6-4 ರ ನೇರ ಸೆಟ್ಗಳಿಂದ ಸೋಲಬೇಕಾಯಿತು.
ಮರುಕಳಿಸಲಿರುವ 2023 ರ ಫೈನಲ್ ಪಂದ್ಯ: ಜೋಕೋವಿಕ್ ಮತ್ತು ಅಲ್ಕರಜ್ ವಿಂಬಲ್ಡನ್ ಫೈನಲ್ಗೆ ಸತತ ಎರಡನೇ ಬಾರಿಗೆ ಲಗ್ಗೆ ಇಟ್ಟಿದ್ದಾರೆ. 2023 ರ ಫೈನಲ್ನಲ್ಲೂ ಇಬ್ಬರೂ ಸೆಣಸಾಟ ನಡೆಸಿದ್ದರು. ಜೋಕೋ ವಿರುದ್ಧ ಗೆದ್ದಿದ್ದ 21 ರ ಸೂಪರ್ಸ್ಟಾರ್ ಟೆನಿಸ್ಸಿಗ ಪ್ರಶಸ್ತಿಗೆ ಮುತ್ತಿಕ್ಕಿದ್ದರು. ಇದೀಗ ಮತ್ತೆ ಇಬ್ಬರು ಫೈನಲ್ನಲ್ಲಿ ಮುಖಾಮುಖಿಯಾಗಲಿದ್ದಾರೆ. ನೊವಾಕ್ 8ನೇ ಬಾರಿಗೆ, ಅಲ್ಕರಜ್ 2ನೇ ವಿಂಬಲ್ಡನ್ ಮೇಲೆ ಕಣ್ಣಿಟ್ಟಿದ್ದಾರೆ.
The women's final preview show will be live from @Wimbledon at 11am BST 🎬
— The Tennis Podcast (@TennisPodcast) July 13, 2024
This will not be available as a pod, so if you want to hear some instantly regrettable takes on Jasmine Paolini v Barbora Krejcikova, this is your one & only chance! 👇https://t.co/IJzeTBr7om pic.twitter.com/BIi8ZGMKjs
25ನೇ ಪ್ರಶಸ್ತಿ ಗೆಲ್ತಾರಾ ಜೋಕೋ?: 24 ಗ್ರಾನ್ಸ್ಲ್ಯಾಮ್ ಗೆದ್ದಿರುವ ನೊವಾಕ್ ಜೊಕೊವಿಕ್ 25ನೇ ಪ್ರಶಸ್ತಿ ಗೆಲ್ಲಲು ಕಾತುರರಾಗಿದ್ದಾರೆ. ಈ ಗ್ರಾನ್ಸ್ಲಾಮ್ ಗೆಲ್ಲುವ ಮೂಲಕ ಅತಿಹೆಚ್ಚು ಪ್ರಶಸ್ತಿ ಗೆದ್ದ ವಿಶ್ವದ ಏಕೈಕ ಟೆನಿಸ್ಸಿಗ ಎಂಬ ದಾಖಲೆಯನ್ನು ಬರೆಯಲಿದ್ದಾರೆ.
ಇಂದು ಮಹಿಳಾ ಫೈನಲ್: ವಿಂಬಲ್ಡನ್ ಮಹಿಳಾ ಫೈನಲ್ ಪಂದ್ಯ ಇಂದು (ಶನಿವಾರ) ಸಂಜೆ 6.30ಕ್ಕೆ ನಡೆಯಲಿದೆ. ಇಟಲಿಯ ಜ್ಯಾಸ್ಮಿನ್ ಪೌಲಿನಿ, ಹಾಗೂ ಜೆಕ್ ಗಣರಾಜ್ಯದ ಬಾರ್ಬೊರಾ ಕ್ರೇಜಿಕೋವಾ ಮುಖಾಮುಖಿಯಾಗಲಿದ್ದಾರೆ. 2021 ರ ಫ್ರೆಂಚ್ ಓಪನ್ ಗೆದ್ದಿರುವ ಕ್ರೇಜಿಕೋವಾಗೆ ಇದು ಮೊದಲ ವಿಂಬಲ್ಡನ್ ಫೈನಲ್ ಆಗಿದೆ. ಗೆದ್ದು ಎರಡನೇ ಗ್ರಾನ್ಸ್ಲ್ಯಾಮ್ ಮುಡಿಗೇರಿಸಿಕೊಳ್ಳುವ ಗುರಿ ಹೊಂದಿದ್ದರೆ, ಇತ್ತ ಜಾಸ್ಮಿನ್ ಪೌಲಿನಿ ಚೊಚ್ಚಲ ಪ್ರಶಸ್ತಿ ಗೆಲ್ಲುವ ನಿರೀಕ್ಷೆ ಹೊಂದಿದ್ದಾರೆ.