ಲಂಡನ್ (ಇಂಗ್ಲೆಂಡ್): ಜೆಕ್ನ ಬಾರ್ಬೊರಾ ಕ್ರೆಜ್ಸಿಕೋವಾ ಅವರು ವಿಂಬಲ್ಡನ್ ಮಹಿಳಾ ಸಿಂಗಲ್ಸ್ ಪ್ರಶಸ್ತಿ ಜಯಿಸಿದ ಬೆನ್ನಲ್ಲೇ, ಟೂರ್ನಿಯ ಮಹಿಳಾ ಡಬಲ್ಸ್ನಲ್ಲಿ ಕಟೆರಿನಾ ಸಿನಿಯಾಕೋವಾ ಹಾಗೂ ಟೇಲರ್ ಟೌನ್ಸೆಂಡ್ ಜೋಡಿಯು ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಮೂಲಕ ಜೆಕ್ನ ಬಾರ್ಬೊರಾ ಕ್ರೆಜ್ಸಿಕೋವಾ ಹಾಗೂ ಕಟೆರಿನಾ ಸಿನಿಯಾಕೋವಾ ಇಬ್ಬರೂ ಕೂಡ ಪ್ರಸ್ತುತ ವಿಂಬಲ್ಡನ್ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಂತಾಗಿದೆ.
ವಿಂಬಲ್ಡನ್ ಮಹಿಳಾ ಡಬಲ್ಸ್ನಲ್ಲಿ ಜೆಕ್ನ ಕಟೆರಿನಾ ಸಿನಿಯಾಕೋವಾ ಹಾಗೂ ಅಮೆರಿಕದ ಟೇಲರ್ ಟೌನ್ಸೆಂಡ್ ಜೋಡಿಯು ಚಾಂಪಿಯನ್ ಪಟ್ಟ ಅಲಂಕರಿಸಿತು. ಈ ಜೋಡಿಯು ಗೇಬ್ರಿಯೆಲಾ ದಬ್ರೊವ್ಸ್ಕಿ ಮತ್ತು ಎರಿನ್ ರೌಟ್‌ಲಿಫ್ ವಿರುದ್ಧ 7-6 (5), 7-6 (1) ಸೆಟ್‌ಗಳಿಂದ ಜಯ ದಾಖಲಿಸಿತು.
Katerina Siniakova and Taylor Townsend are the Ladies’ Doubles Champions 🏆 #Wimbledon pic.twitter.com/WLbp4aZjLn
— Wimbledon (@Wimbledon) July 13, 2024
ಇದಕ್ಕೂ ಮುನ್ನ ನಡೆದ ಮಹಿಳಾ ಸಿಂಗಲ್ಸ್ ಕಾದಾಟದಲ್ಲಿ ಬಾರ್ಬೊರಾ ಕ್ರೆಜ್ಸಿಕೋವಾ ಅವರು ಇಟಲಿಯ ಜಾಸ್ಮಿನ್ ಪಯೋಲಿನಿ ವಿರುದ್ಧ 6-2, 2-6, 6-4 ಸೆಟ್‌ಗಳಿಂದ ಜಯ ಗಳಿಸಿ ಎರಡನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. ಈ ಹಿಂದೆ 2021ರಲ್ಲಿ ಫ್ರೆಂಚ್ ಓಪನ್ ಗೆದ್ದಿದ್ದ ಕ್ರೆಜ್ಸಿಕೋವಾ, ಅನಾರೋಗ್ಯ ಮತ್ತು ಬೆನ್ನುನೋವು ಸೇರಿದಂತೆ ಸವಾಲುಗಳ ಹೊರತಾಗಿಯೂ ಗೆಲುವಿನ ನಗೆ ಬೀರಿದ್ದರು.
ಗೆಲುವಿನ ಬಳಿಕ ಮಾತನಾಡಿದ ಕಟೆರಿನಾ ಸಿನಿಯಾಕೋವಾ, ''ಅದ್ಭುತ.. ಬಾರ್ಬೊರಾ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ನಾವೂ ಅದನ್ನೇ ಸಾಧಿಸಿರುವುದು ನನಗೆ ಬಹಳ ಸಂತೋಷವಾಗಿದೆ'' ಎಂದರು.
ಸಿನಿಯಾಕೋವಾ ಅವರು ಈ ವರ್ಷದ ಫ್ರೆಂಚ್ ಓಪನ್ ಸೇರಿದಂತೆ ಕ್ರೆಜ್ಸಿಕೋವಾ ಅವರೊಂದಿಗೆ ಏಳು ಪ್ರಮುಖ ಡಬಲ್ಸ್ ಪ್ರಶಸ್ತಿಗಳು ಹಾಗೂ ಕೊಕೊ ಗೌಫ್ ಅವರೊಂದಿಗೆ ಒಂದು ಪ್ರಶಸ್ತಿ ಗೆದ್ದಿದ್ದಾರೆ. ಇದೀಗ ಅಮೆರಿಕದ ಜೊತೆಗಾರ್ತಿ ಟೇಲರ್ ಟೌನ್ಸೆಂಡ್ ಜೊತೆ ಗೆದ್ದ ಮೊದಲ ಗ್ರ್ಯಾಂಡ್ ಸ್ಲಾಮ್ ಕಿರೀಟ ಇದಾಗಿದೆ.
''ವಿಂಬಲ್ಡನ್‌ನಲ್ಲಿ ಇಬ್ಬರೂ ಒಟ್ಟಿಗೆ ಆಡಿರುವುದು ಸಿನಿಯಾಕೋವಾ ಅವರ ಆಲೋಚನೆಯಾಗಿದೆ. ಗೆದ್ದಿರುವುದು ತುಂಬಾ ಸಂತಸ ತಂದಿದೆ'' ಎಂದು ಟೇಲರ್ ಟೌನ್ಸೆಂಡ್ ಗೆಲುವಿನ ಖುಷಿ ವ್ಯಕ್ತಪಡಿಸಿದರು.