ಲಂಡನ್: ಇಂಗ್ಲೆಂಡ್ನ ಹೆನ್ರಿ ಪ್ಯಾಟನ್ ಮತ್ತು ಫಿನ್‌ಲ್ಯಾಂಡ್‌ನ ಹ್ಯಾರಿ ಹೆಲಿಯೊವಾರಾ ಜೋಡಿ ವಿಂಬಲ್ಡನ್ 2024ರ ಡಬಲ್ಸ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಶ್ರೇಯಾಂಕ ರಹಿತ ಇಂಗ್ಲೆಂಡ್ ಮತ್ತು ಫಿನ್‌ಲ್ಯಾಂಡ್‌ನ ಜೋಡಿಯು ಆಸ್ಟ್ರೇಲಿಯಾದ ಮ್ಯಾಕ್ಸ್ ಪರ್ಸೆಲ್ ಮತ್ತು ಜೋರ್ಡಾನ್ ಥಾಂಪ್ಸನ್ ಅವರನ್ನು 6-7 (7), 7-6 (8), 7-6 (11-9) ಸೆಟ್‌ಗಳಿಂದ ಸೋಲಿಸಿ ಚೊಚ್ಚಲ ಗ್ರ್ಯಾನ್‌ಸ್ಲಾಮ್ ಗೆದ್ದರು.
ಹೆಲಿಯೊವಾರಾ ಅವರು ವಿಂಬಲ್ಡನ್ ಡಬಲ್ಸ್ ಗೆದ್ದ ಮೊದಲ ಫಿನ್ಲ್ಯಾಂಡ್ ಆಟಗಾರ ಎನಿಸಿಕೊಂಡರು. ಇಂಗ್ಲೆಂಡ್ನ ಹೆನ್ರಿ ಪ್ಯಾಟನ್ ಪುರುಷರ ಡಬಲ್ಸ್ ಗೆದ್ದ ಮೂರನೇ ಬ್ರಿಟಿಷ್ ಟೆನಿಸ್ಸಿಗ ಎನಿಸಿಕೊಂಡರು. 2012 ರಲ್ಲಿ ಜೊನಾಥನ್ ಮರ್ರೆ ಮತ್ತು 2023 ರಲ್ಲಿ ನೀಲ್ ಸ್ಕುಪ್ಸ್ಕಿ ಪ್ರಶಸ್ತಿ ಗೆದ್ದಿದ್ದರು.
Heliovaara and Patten edge Gentlemen's Doubles thriller 🏆
— Wimbledon (@Wimbledon) July 14, 2024
Read the full report on the final match:#Wimbledon
ನೀ ಕೊಡೆ ನಾ ಬಿಡೆ ಪಂದ್ಯ: ಪುರುಷರ ಡಬಲ್ಸ್ ಫೈನಲ್ ಪಂದ್ಯ ಭಾರೀ ಜಿದ್ದಾಜಿದ್ದಿನಿಂದ ಕೂಡಿತ್ತು. ಯಾವೊಂದು ಜೋಡಿಯೂ ಬ್ರೇಕ್ ಪಾಯಿಂಟ್ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಪ್ರತಿ ಸೆಟ್ ಅನ್ನು ಟ್ರೈಬ್ರೇಕರ್ ಆಡಬೇಕಾಯಿತು. ಮೊದಲ ಸೆಟ್ 6-6 ರಲ್ಲಿ ಸಮಬಲವಾದಾಗ ಟ್ರೈಬ್ರೇಕರ್ ಆಡಿಸಲಾಯಿತು. ಆಸ್ಟ್ರೇಲಿಯಾದ ಮ್ಯಾಕ್ಸ್ ಪರ್ಸೆಲ್ ಮತ್ತು ಜೋರ್ಡಾನ್ ಥಾಂಪ್ಸನ್ ಗೆದ್ದರು.
ಬಳಿಕದ ಎರಡನೇ ಸೆಟ್ ಕೂಡ ಭಿನ್ನವಾಗಿರಲಿಲ್ಲ. 6-6 ರಲ್ಲಿ ಕೊನೆಗೊಂಡಾಗ ಪ್ಯಾಟನ್ ಮತ್ತು ಹ್ಯಾರಿ ಜೋಡಿ ಟ್ರೈಬ್ರೇಕರ್ ಗೆದ್ದರು. ಇದರಿಂದ 1-1 ರಲ್ಲಿ ಸೆಟ್ ಸಮಬಲವಾಯಿತು. ಅಂತಿಮ ಸೆಟ್ನಲ್ಲಿ ಎರಡೂ ಜೋಡಿಗಳು ಗೆಲ್ಲಲೇಬೇಕೆಂಬ ಹಠಕ್ಕೆ ಬಿದ್ದು ಆಡಿದರು. ಇದು ಕೂಡ 6-6 ಅಂಕದಲ್ಲಿ ಸಮಗೊಂಡಾಗ ಚಾಂಪಿಯನ್ನರ ಘೋಷಣೆಗಾಗಿ ನಡೆದ ಟ್ರೈಬ್ರೇಕರ್ನಲ್ಲಿ ಇಂಗ್ಲೆಂಡ್ ಮತ್ತು ಫಿನ್ಲ್ಯಾಂಡ್ ಜೋಡಿ ಬಿರುಸಿನ ಆಟವಾಡಿ 11-9 ರಲ್ಲಿ ಟ್ರೈಬ್ರೇಕರ್ ಗೆದ್ದು ಪ್ರಶಸ್ತಿಗೆ ಮುತ್ತಿಟ್ಟರು.
ಫೈನಲ್ನಲ್ಲಿ ಗೆಲುವು ಸಾಧಿಸುತ್ತಿದ್ದಂತೆ ಪ್ಯಾಟನ್ ಮೈದಾನದಲ್ಲಿ ಕುಳಿತು ಆನಂದಭಾಷ್ಪ ಸುರಿಸಿದರು. ಬಳಿಕ ಗ್ಯಾಲರಿಯಲ್ಲಿದ್ದ ತಮ್ಮ ಸಂಗಾತಿಯನ್ನು ತಬ್ಬಿಕೊಂಡು ಮತ್ತೆ ಕಣ್ಣೀರಾದರು. ಇತ್ತ ಆಸ್ಟ್ರೇಲಿಯನ್ ಜೋಡಿಯು ನಿರಾಶೆಗೊಂಡಂತೆ ಕಂಡುಬಂದಿತು.