ಪ್ಯಾರಿಸ್ (ಫ್ರಾನ್ಸ್): ಭಾರತದ ಪುರುಷರ ಹಾಕಿ ತಂಡವು ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಅದ್ಭುತ ಪ್ರದರ್ಶನ ನೀಡಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದೆ. ಮುಂದಿನ ಪಂದ್ಯದಲ್ಲಿ ಭಾರತ ಯಾವ ತಂಡವನ್ನು ಎದುರಿಸಲಿದೆ ಎಂಬುದರ ಬಗ್ಗೆ ಈ ಸುದ್ದಿಯಲ್ಲಿ ತಿಳಿಯಿರಿ.
ತನ್ನ ಕೊನೆಯ ಪೂಲ್-ಬಿ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾವನ್ನು 3-2 ಅಂತರದಿಂದ ಸೋಲಿಸಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿತ್ತು. 52 ವರ್ಷಗಳ ನಂತರ ಒಲಿಂಪಿಕ್ಸ್‌ನಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾವನ್ನು ಮಣಿಸಿ ಈ ಸಾಧನೆ ಮಾಡಿತ್ತು. ಈ ಬಾರಿಯೂ ಉತ್ತಮ ಪ್ರದರ್ಶನ ತೋರುತ್ತಿರುವ ಭಾರತ ಚಿನ್ನದ ಪದಕ ನಿರೀಕ್ಷೆಯಲ್ಲಿದೆ. ಕಳೆದ ಟೋಕಿಯೊ ಒಲಿಂಪಿಕ್ನಲ್ಲಿ ಭಾರತ ತಂಡ ಕಂಚಿನ ಪದಕ ಜಯಿಸಿತ್ತು.
ಕ್ವಾರ್ಟರ್ ಫೈನಲ್ ಪಂದ್ಯದ ವಿವರ
- ಆಗಸ್ಟ್ 4 ಭಾನುವಾರ (ನಾಳೆ), ಪೂಲ್ ಎ ಟಾಪರ್ ಜರ್ಮನಿಯು ಕ್ವಾರ್ಟರ್ ಫೈನಲ್‌ನಲ್ಲಿ ಪೂಲ್ ಬಿ ಯ ನಾಲ್ಕನೇ ಸ್ಥಾನದ ಅರ್ಜೆಂಟೀನಾವನ್ನು ಎದುರಿಸಲಿದೆ.
- ಪೂಲ್ ಬಿ ಟೇಬಲ್-ಟಾಪ್ಪರ್ಸ್ ಮತ್ತು ಹಾಲಿ ಒಲಿಂಪಿಕ್ ಚಾಂಪಿಯನ್ ಬೆಲ್ಜಿಯಂ ಪೂಲ್ ಎ ನಾಲ್ಕನೇ ಸ್ಥಾನದಲ್ಲಿರುವ ಸ್ಪೇನ್ ತಂಡವನ್ನು ಎದುರಿಸಲಿದೆ.
- ನೆದರ್ಲ್ಯಾಂಡ್ಸ್ ಪೂಲ್ ಎ ನಲ್ಲಿ ಎರಡನೇ ಸ್ಥಾನ ಗಳಿಸಿತು ಮತ್ತು ಕ್ವಾರ್ಟರ್ ಫೈನಲ್‌ನಲ್ಲಿ ಪೂಲ್ ಬಿ ಯಲ್ಲಿ ಮೂರನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾವನ್ನು ಎದುರಿಸಲಿದೆ.
- ಪೂಲ್ ಬಿ ರನ್ನರ್ ಅಪ್ ಆಗಿರುವ ಭಾರತ ತಂಡವು ಪೂಲ್ ಎ ನಲ್ಲಿ ಮೂರನೇ ಸ್ಥಾನದಲ್ಲಿರುವ ಗ್ರೇಟ್ ಬ್ರಿಟನ್ ತಂಡವನ್ನು ಎದುರಿಸಲಿದೆ.
1980ರಲ್ಲಿ ಚಿನ್ನ ಗೆದ್ದಿದ್ದ ಭಾರತ: ಭಾರತೀಯ ಪುರುಷರ ಹಾಕಿ ತಂಡ ಕೊನೆಯದಾಗಿ 1980ರಲ್ಲಿ ಮಾಸ್ಕೋ ಒಲಿಂಪಿಕ್ನಲ್ಲಿ ಮೊದಲ ಚಿನ್ನದ ಪದಕ ಗೆದ್ದಿತ್ತು. ಇದೀಗ ಪ್ಯಾರಿಸ್‌ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ 2 ಗೋಲುಗಳನ್ನು ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಭಾರತ ಹಾಕಿ ತಂಡದ ನಾಯಕ ಹರ್ಮನ್ಪ್ರೀತ್ ಸಿಂಗ್, 'ಒಲಿಂಪಿಕ್ನಲ್ಲಿ ನಾವು ನಮ್ಮ ಅಭಿಯಾನವನ್ನು ಗೆಲುವಿನೊಂದಿಗೆ ಪ್ರಾರಂಭಿಸಿದ್ದು, ಪದಕ ಗೆಲುವಿನೊಂದಿಗೆ ಅಭಿಯಾನ ಮುಕ್ತಾಯಗೊಳಿಸಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಆಗಸ್ಟ್ 6 ರಂದು ಸೆಮಿ-ಫೈನಲ್ ಪಂದ್ಯಗಳು: ಪ್ಯಾರಿಸ್ ಒಲಿಂಪಿಕ್ನ ಪುರುಷರ ಹಾಕಿ ಸೆಮಿಫೈನಲ್ ಪಂದ್ಯಗಳು ಆಗಸ್ಟ್ 6 ರಂದು ನಡೆಯಲಿವೆ. ಕ್ವಾರ್ಟರ್ ಫೈನಲ್‌ನಲ್ಲಿ ಗೆದ್ದ ತಂಡಗಳು ಸೆಮಿ ಫೈನಲ್ ಪ್ರವೇಶಿಸಲಿವೆ.