Champions Trophy 2025: ಮುಂದಿನ ವರ್ಷ ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿ ನಡೆಯಲಿದೆ. ಮಹತ್ವದ ಪಂದ್ಯಾವಳಿಗೆ ಪಾಕಿಸ್ತಾನ ಆತಿಥ್ಯ ವಹಿಸಿದೆ. ಆದರೆ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಟೀಂ ಇಂಡಿಯಾ ಪಾಕಿಸ್ತಾನಕ್ಕೆ ತೆರಳುವುದಿಲ್ಲ ಎಂದು ಈಗಾಗಲೇ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸ್ಪಷ್ಟಪಡಿಸಿದೆ. ಜೊತೆಗೆ, ಭಾರತದ ಪಂದ್ಯಗಳನ್ನು ಹೈಬ್ರಿಡ್ ಮಾದರಿಯಲ್ಲಿ ದುಬೈ ಅಥವಾ ಶ್ರೀಲಂಕಾದಲ್ಲಿ ನಡೆಸುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಐಸಿಸಿ)ಗೂ ತಿಳಿಸಿದೆ.
2008ರಲ್ಲಿ ಪಾಕಿಸ್ತಾನದಲ್ಲಿ ನಡೆದಿದ್ದ ಏಕದಿನ ಮಾದರಿಯ ಏಷ್ಯಾಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಕೊನೆಯ ಬಾರಿಗೆ ಭಾಗವಹಿಸಿತ್ತು. ಇದಾದ ಬಳಿಕ ಉಭಯ ದೇಶಗಳ ನಡುವಿನ ಸಂಬಂಧ ಹಳಸಿದೆ. ಅಂದಿನಿಂದ ಇಲ್ಲಿಯವರೆಗೂ ಪಾಕಿಸ್ತಾನದಲ್ಲಿ ಟೀಂ ಇಂಡಿಯಾ ಯಾವುದೇ ಪಂದ್ಯಾವಳಿಗಳನ್ನು ಆಡಿಲ್ಲ. ದ್ವಿಪಕ್ಷೀಯ ಸರಣಿಯೂ ನಿಂತು ಹೋಗಿದೆ. ಸದ್ಯ ಐಸಿಸಿ ಆಯೋಜಿತ ಟೂರ್ನಿ ಮತ್ತು ಏಷ್ಯಾಕಪ್ಗಳಲ್ಲಿ ಮಾತ್ರ ಭಾರತ-ಪಾಕ್ ಮುಖಾಮುಖಿಯಾಗುತ್ತಿವೆ.
ಭಾರತ ಕ್ರಿಕೆಟ್ ಪಂದ್ಯಗಳನ್ನು ಆಡಲು ಪಾಕಿಸ್ತಾನಕ್ಕೆ ಹೋಗದಿರಲು ಪ್ರಮುಖ ಕಾರಣವೆಂದರೆ ಭದ್ರತಾ ಸಮಸ್ಯೆ. ಭಯೋತ್ಪಾದಕ ದುಷ್ಕೃತ್ಯಗಳ ಹಿನ್ನೆಲೆಯಲ್ಲಿ ಪಾಕಿಸ್ತಾನದಲ್ಲಿ ಭಾರತೀಯರಿಗೆ ಸೂಕ್ತ ಭದ್ರತೆ ಸಿಗದಿರುವುದರಿಂದ ಅಲ್ಲಿಗೆ ಪ್ರಯಾಣಿಸುವುದನ್ನು ನಿಲ್ಲಿಸಿದೆ. ಇದಕ್ಕೆ ಉದಾಹರಣೆ, 1989ರಲ್ಲಿ ನಡೆದಿದ್ದ ಆ ಒಂದು ಘಟನೆ. ಇಂದಿಗೂ ಅದು ಭಾರತ ತಂಡವನ್ನು ಪಾಕಿಸ್ತಾನಕ್ಕೆ ಪ್ರಯಾಣಿಸದಂತೆ ತಡೆಯುತ್ತಿದೆ.
1989 :: Pakistani Citizen Attacks Indian Captain Srikant During India Pakistan Cricket Match In Karachi , Pakistan pic.twitter.com/MXg6FI7nsV
— indianhistorypics (@IndiaHistorypic) July 11, 2024
1989ರಲ್ಲಿ ಭಾರತ ಮತ್ತು ಪಾಕಿಸ್ತಾನ ಮಧ್ಯೆ ಟೆಸ್ಟ್ ಸರಣಿ ನಡೆದಿತ್ತು. ಈ ಸರಣಿಗೆ ಪಾಕಿಸ್ತಾನ ಆತಿಥ್ಯ ವಹಿಸಿತ್ತು. ಮಾರ್ಚ್ 5ರಂದು ಕರಾಚಿ ಮೈದಾನದಲ್ಲಿ ಮೊದಲ ಪಂದ್ಯ ನಡೆದಿತ್ತು. ಸಚಿನ್ ತೆಂಡೂಲ್ಕರ್ ಕೂಡ ಈ ಪಂದ್ಯದ ಮೂಲಕವೇ ಅಂತಾರಾಷ್ಟ್ರೀಯ ಪಂದ್ಯಕ್ಕೆ ಪಾದರ್ಪಣೆ ಮಾಡಿದ್ದರು. ಕೃಷ್ಣಮಾಚಾರಿ ಶ್ರೀಕಾಂತ್ ನಾಯಕತ್ವದ ಜವಾಬ್ದಾರಿ ವಹಿಸಿಕೊಂಡಿದ್ದರು. ಆದರೆ ಪಂದ್ಯದ ನಡುವೆ ಭಾರತೀಯರು ಎಂದು ಮರೆಯಲಾಗದ ಕಹಿ ಘಟನೆ ನಡೆದಿತ್ತು.
ಪಾಕಿಸ್ತಾನ ಬ್ಯಾಟಿಂಗ್ ಮಾಡುತ್ತಿದ್ದಾಗ ಏಕಾಏಕಿ ಮೈದಾನಕ್ಕೆ ನುಗ್ಗಿದ ದುಷ್ಕರ್ಮಿಯೊಬ್ಬ ಫೀಲ್ಡಿಂಗ್ ಮಾಡುತ್ತಿದ್ದ ಕೃಷ್ಣಮಾಚಾರಿ ಶ್ರೀಕಾಂತ್ ಮೇಲೆ ಹಲ್ಲೆ ನಡೆಸಿದ್ದ. ಅಲ್ಲದೇ ಅಲ್ಲಿದ್ದ ಭಾರತೀಯ ಫೀಲ್ಡರ್ಗಳಿಗೂ ಧಮ್ಕಿ ಹಾಕಿದ್ದ. ಈ ಘಟನೆಯ ಬಳಿಕ ಟೀಂ ಇಂಡಿಯಾದ ಆಟಗಾರರು ಭಯಭೀತರಾಗಿದ್ದರು. ಅಲ್ಲದೇ ಮೊಹ್ಮದ್ ಅಜರುದ್ದೀನ್ ಮೇಲೂ ದಾಳಿ ನಡೆಸಿದ್ದರು. ಈ ಎಲ್ಲಾ ವಿವಾದಗಳನ್ನು ಎದುರಿಸಿ 4 ಪಂದ್ಯಗಳ ಸರಣಿಯನ್ನಾಡಿ ತಂಡ ತವರಿಗೆ ವಾಪಸ್ಸಾಗಿತ್ತು. ಸರಣಿ ಡ್ರಾದಲ್ಲಿ ಕೊನೆಗೊಂಡಿತ್ತು.
ಇದನ್ನೂ ಓದಿ: Border Gavaskar Trophy: ಚೇತೇಶ್ವರ ಪೂಜಾರಗೆ ಸಿಕ್ಕಿತು ಬಿಗ್ ಆಫರ್, ಆಸ್ಟ್ರೇಲಿಯಾಗೆ ಹಾರಿದ ಕ್ರಿಕೆಟರ್!