ನವದೆಹಲಿ: ಇತ್ತೀಚೆಗೆ ಚೀನಾದಲ್ಲಿ ನಡೆದ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಚೀನಾವನ್ನು ಸೋಲಿಸುವ ಮೂಲಕ ಭಾರತ 5ನೇ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಟೂರ್ನಿಯಲ್ಲಿ ಪಾಕಿಸ್ತಾನ ಮೂರನೇ ಸ್ಥಾನ ತಲುಪಿ ಕಂಚಿನ ಪದಕಕ್ಕೆ ತೃಪ್ತಿಪಡಬೇಕಾಯಿತು. ಪಂದ್ಯಾವಳಿಯ ಬಳಿಕ ಪಾಕಿಸ್ತಾನ ಹಾಕಿ ಫೆಡರೇಶನ್ ತನ್ನ ತಂಡದ ಆಟಗಾರರಿಗೆ ಬಹುಮಾನ ಘೋಷಿಸಿದೆ. ಆದರೆ ಈ ನಗದು ಬಹುಮಾನ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟ್ರೋಲ್ ಆಗುತ್ತಿದೆ.
ಪಾಕಿಸ್ತಾನ ಹಾಕಿ ಫೆಡರೇಶನ್ (PHF) ತಂಡದ ಪ್ರತಿ ಆಟಗಾರನಿಗೆ 100 ಡಾಲರ್ ಘೋಷಿಸಿದೆ. ಇದು ಭಾರತೀಯ ರೂಪಾಯಿಗೆ ಹೋಲಿಸಿದರೆ 8,300 ರೂ. ಆಗುತ್ತದೆ. ಈ ಬೆಲೆಯಲ್ಲಿ ಒಂದೊಳ್ಳೆಯ ಫ್ರಿಜ್ ಖರೀದಿಸುವುದು ಕೂಡಾ ಕಷ್ಟ. ಇದೇ ಮೊತ್ತವನ್ನು ಪಾಕಿಸ್ತಾನಿ ರೂಪಾಯಿಗಳಲ್ಲಿ ಲೆಕ್ಕ ಹಾಕಿದರೆ 28,000 ರೂ. ಆಗುತ್ತದೆ.
ಭಾರತೀಯ ಆಟಗಾರರಿಗೆ ಸಿಕ್ಕ ಬಹುಮಾನವೆಷ್ಟು?: ಚಿನ್ನ ಗೆದ್ದ ಭಾರತೀಯ ಹಾಕಿ ತಂಡಕ್ಕೆ ಬಂಪರ್ ಮೊತ್ತವನ್ನು ಘೋಷಿಸಲಾಗಿದೆ. ತಂಡದ ಪ್ರತಿ ಆಟಗಾರನಿಗೆ ತಲಾ 3 ಲಕ್ಷ ರೂಪಾಯಿ ಮತ್ತು ಕೋಚ್‌ಗೆ 1.5 ಲಕ್ಷ ರೂಪಾಯಿ ನಗದು ಬಹುಮಾನ ಪ್ರಕಟಿಸಲಾಗಿದೆ. ಭಾರತೀಯ ಆಟಗಾರರು ಪಡೆದ ಈ ಮೊತ್ತವನ್ನು ಪಾಕಿಸ್ತಾನಿ ರೂಪಾಯಿಗೆ ಹೋಲಿಸಿದರೆ 10 ಲಕ್ಷ ರೂಪಾಯಿಗೂ ಹೆಚ್ಚಾಗುತ್ತದೆ.
ವಿಮಾನ ಟಿಕೆಟ್ಗೆ ಸಾಲ ಪಡೆದಿದ್ದ ಪಾಕ್: ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿರುವ ಪಾಕಿಸ್ತಾನ, ಹಾಕಿ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗಿಯಾಗಲು ಚೀನಾಗೆ ತೆರಳಲು ವಿಮಾನ ಟಿಕೆಟ್ ಖರೀದಿಗಾಗಿ ಸಾಲ ಪಡೆದಿತ್ತು. ಕನಿಷ್ಠ ವಿಮಾನ ಟಿಕೆಟ್ ದರ ಪಾವತಿಸುವಷ್ಟು ಬಹುಮಾನವನ್ನೂ ಪಾಕ್ ಆಟಗಾರರು ಪಡೆದಿಲ್ಲ. ಪಾಕಿಸ್ತಾನದಿಂದ ಚೀನಾದ ಯಾವುದೇ ರಾಜ್ಯಕ್ಕೆ ವಿಮಾನದ ಮೂಲಕ ತಲುಪಬೇಕಾದರೆ ಕನಿಷ್ಠ 31ರಿಂದ 35 ಸಾವಿರ ರೂಪಾಯಿ ಟಿಕೆಟ್ ದರವಿದೆ.
ಇದನ್ನೂ ಓದಿ: ಚೆನ್ನೈ ಟೆಸ್ಟ್: ಭಾರತ ವಿರುದ್ಧ ಟಾಸ್ ಗೆದ್ದ ಬಾಂಗ್ಲಾ ಬೌಲಿಂಗ್ ಆಯ್ಕೆ - India Bangladesh 1st Test