ಹೈದರಾಬಾದ್: ಆಸ್ಟ್ರೇಲಿಯಾ ಟೆಸ್ಟ್ ಸರಣಿಗೆ ಆಯ್ಕೆಯಾಗಿದ್ದ ಬ್ಯಾಟಿಂಗ್ ಕಿಂಗ್ ವಿರಾಟ್ ಕೊಹ್ಲಿ ಅವರು ಕುಟುಂಬದ ಸಲುವಾಗಿ 2 ತಿಂಗಳು ಕಾಲ ಕ್ರಿಕೆಟ್ನಿಂದ ದೂರವುಳಿದಿದ್ದರು. ಇದೀಗ ಐಪಿಎಲ್‌ನಲ್ಲಿ ಪಾಲ್ಗೊಂಡಿರುವ ಅವರು ಕೆಲ ದಿನಗಳ ಕಾಲ ಕುಟುಂಬದ ಜೊತೆ ಕಳೆದ ಸಂತಸದ ಸಮಯವನ್ನು ಹಂಚಿಕೊಂಡಿದ್ದಾರೆ.
ವೀಕ್ಷಕ ವಿವರಣೆಗಾರ ಹರ್ಷಾ ಭೋಗ್ಲೆ ಅವರ ಜೊತೆಗಿನ ಸಂದರ್ಶನದಲ್ಲಿ ವಿರಾಟ್ ಕೊಹ್ಲಿ ತಮ್ಮ ವಿರಾಮದ ಸಮಯದಲ್ಲಿ ಕುಟುಂಬದೊಂದಿಗಿನ ಬಾಂಧವ್ಯದ ಬಗ್ಗೆ ವಿವರಿಸಿದ್ದಾರೆ. ವೃತ್ತಿಜೀವನದ ಜತೆಗೆ ಕುಟುಂಬ ಅಷ್ಟೇ ಮಹತ್ವದ್ದು. ಕೆಲ ವಿಶೇಷ ಸಂದರ್ಭಗಳಲ್ಲಿ ಅವರೊಂದಿಗೆ ಇರುವುದು ಅನಿವಾರ್ಯವಾಗುತ್ತದೆ. ನಾನು ಸರಿಸುಮಾರು 2 ತಿಂಗಳ ಕಾಲ ಕ್ರಿಕೆಟ್ನಿಂದ ವಿರಾಮ ಪಡೆದು ಅಂತಹ ಅನುಭೂತಿ ಪಡೆದುಕೊಂಡಿದ್ದೇನೆ ಎಂದು ಹೇಳಿದ್ದಾರೆ.
ನಾವು ಆ ಸಮಯದಲ್ಲಿ ವಿದೇಶದಲ್ಲಿ ಇದ್ದೆವು. ಮಕ್ಕಳು ಮತ್ತು ಪತ್ನಿಯ ಜೊತೆಗಿನ ಬಾಂಧವ್ಯ ಪದಗಳಲ್ಲಿ ಹೇಳಲಾಗದು. ಅನುಷ್ಕಾ ಮತ್ತು ನಾನು ಇಬ್ಬರು ಮಕ್ಕಳನ್ನು ಹೊಂದಿದ್ದೇವೆ. ಪುತ್ರ ಅಕಾಯ್ಗಾಗಿ ನಾನು ವಿಶೇಷ ಸಮಯ ಕಳೆಯಬೇಕಾಯಿತು. ಕುಟುಂಬದ ಜವಾಬ್ದಾರಿಯ ಹಿನ್ನೆಲೆಯಲ್ಲಿ ನಾನು ಕ್ರಿಕೆಟ್ನಿಂದ ದೂರವಿರಬೇಕಾಗಿ ಬಂತು. ಕುಟುಂಬದೊಂದಿಗೆ ಕಳೆದ ಸಮಯವನ್ನು ನಾನು ಮರೆಯುವುದಿಲ್ಲ. ಅದಕ್ಕೆ ಅವಕಾಶ ಮಾಡಿಕೊಟ್ಟ ದೇವರಿಗೆ ನಾನು ಎಂದಿಗೂ ಕೃತಜ್ಞ ಎಂದು ಹೇಳಿದ್ದಾರೆ.
ಮಗಳು ವಾಮಿಕಾ ಮತ್ತು ಅನುಷ್ಕಾ ಜೊಗೆ ಸಂತಸದ ದಿನಗಳನ್ನು ಹಂಚಿಕೊಂಡಿದ್ದೇನೆ. ಅವರೊಂದಿಗೆ ಇರುವುದನ್ನು ನಾನು ಇಷ್ಟಪಡುತ್ತೇನೆ ಎಂದು ಚೇಸಿಂಗ್ ಮಾಸ್ಟರ್ ಕೊಹ್ಲಿ ಹೇಳಿದ್ದಾರೆ.
ಐಪಿಎಲ್‌ನಲ್ಲಿ ಗುಡುಗು: ಇನ್ನು, ವಿರಾಮದ ಬಳಿಕ ಐಪಿಎಲ್‌ನಲ್ಲಿ ಪಾಲ್ಗೊಂಡಿರುವ ಕೊಹ್ಲಿ ಮಿಂಚು ಹರಿಸುತ್ತಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಆರಂಭಿಕ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದರೂ, ಪಂಜಾಬ್ ಕಿಂಗ್ಸ್ ಎದುರು ಅಬ್ಬರಿಸಿದರು. 49 ಎಸೆತಗಳಲ್ಲಿ 77 ರನ್ ಸಿಡಿಸುವ ಮೂಲಕ ವಿರಾಟ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಗೆಲುವು ತಂದುಕೊಟ್ಟರು. ತಾವು ಎಂದಿಗೂ ಚೇಸಿಂಗ್ ಮಾಸ್ಟರ್ ಎಂಬುದನ್ನ ಮತ್ತೆ ಮತ್ತೆ ಸಾಬೀತು ಮಾಡಿದರು.
ಆಡಿದ ಎರಡನೇ ಪಂದ್ಯದಲ್ಲೇ ಅರ್ಧಶತಕ ಬಾರಿಸಿದ ವಿರಾಟ್, ಅದ್ಭುತ ಪ್ರದರ್ಶನದ ಮೂಲಕ ಕ್ರಿಕೆಟ್‌ಗೆ ಕಮ್ಬ್ಯಾಕ್ ಮಾಡಿದ್ದಾರೆ. 11 ಬೌಂಡರಿಗಳು ಮತ್ತು 2 ಸಿಕ್ಸರ್‌ಗಳನ್ನು ಬಾರಿಸಿದ ಅವರು, ಕೌಟುಂಬಿಕ ಜವಾಬ್ದಾರಿಯ ಜೊತೆಗೆ ವೃತ್ತಿಪರತೆಯನ್ನೂ ಎತ್ತಿಹಿಡಿದರು.
ಇತ್ತ, ನಟಿ ಅನುಷ್ಕಾ ಶರ್ಮಾ ಅವರು ತಿಂಗಳುಗಳ ಬಳಿಕ ಕಾಣಿಸಿಕೊಂಡಿದ್ದು, ಅಭಿಮಾನಿಗಳಿಗೆ ಹೋಳಿ ಶುಭಾಶಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ತಿಳಿಸಿದ್ದಾರೆ. ಅವರು ನಟಿಸಿರುವ 'ಚಕ್ಡಾ ಎಕ್ಸ್‌ಪ್ರೆಸ್'ನ ಚಿತ್ರೀಕರಣ ಮುಗಿದಿದ್ದು, ಚಿತ್ರ ಇನ್ನಷ್ಟೇ ಬಿಡುಗಡೆ ಕಾಣಬೇಕಿದೆ.
ಇದನ್ನೂ ಓದಿ: ಕಿಂಗ್ಸ್ ಮಣಿಸಿದ 'ಕಿಂಗ್': ಕೊಹ್ಲಿ ಅಬ್ಬರಕ್ಕೆ ಶರಣಾದ ಪಂಜಾಬ್, ಗೆಲುವಿನ ಖಾತೆ ತೆರೆದ ಆರ್ಸಿಬಿ - RCB Victory