ಪ್ಯಾರಿಸ್, ಫ್ರಾನ್ಸ್: 50 ಕೆಜಿ ವಿಭಾಗದ ಒಲಿಂಪಿಕ್ಸ್‌ನ ಅನರ್ಹತೆಯ ವಿರುದ್ಧ ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಅವರು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ ಸಿಎಸ್ಎದಲ್ಲಿ ಮೇಲ್ಮನವಿ ಸಲ್ಲಿಕೆ ಮಾಡಿದ್ದಾರೆ. 100 ಗ್ರಾಂ ತೂಕದ ವಿಚಾರದ ನಂತರ ತಮಗೆ ಜಂಟಿ ಬೆಳ್ಳಿ ಪದಕವನ್ನು ನೀಡಬೇಕು ಎಂದು ಒತ್ತಾಯಿಸಿ ಬುಧವಾರ ಮೇಲ್ಮನವಿ ಸಲ್ಲಿಸಿದ್ದಾರೆ.
ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (IOA) ಮೂಲವು ಫೋಗಟ್ ಮೇಲ್ಮನವಿ ಸಲ್ಲಿಸಿರುವ ವಿಚಾರವನ್ನು ಪಿಟಿಐಗೆ PTI ಗೆ ದೃಢಪಡಿಸಿದೆ. ಈ ಬಗ್ಗೆ ಮಾತನಾಡಿರುವ ಐಒಸಿ "ಹೌದು ನಾವು ಅದರ ಬಗ್ಗೆ ತಿಳಿದುಕೊಂಡಿದ್ದೇವೆ. ಇದನ್ನು ನಮ್ಮ ತಂಡ ಮಾಡಿದೆ" ಎಂದು ಮೂಲಗಳು ತಿಳಿಸಿವೆ ಎಂದು ತಿಳಿದು ಬಂದಿದೆ. ಫೈನಲ್ಗೂ ಮುನ್ನ 100 ಗ್ರಾಂ ಅಧಿಕ ತೂಕ ಕಂಡು ಬಂದ ಹಿನ್ನೆಲೆಯಲ್ಲಿ ವಿನೇಶ್ ಅವರನ್ನು ಪ್ಯಾರಿಸ್ ಒಲಿಂಪಿಕ್ಸ್ನಿಂದ ಅನರ್ಹಗೊಳಿಸಲಾಗಿತ್ತು.
ತೂಕ ಇಳಿಕೆ ಮಾಡುವ ದೃಷ್ಟಿಯಿಂದ ಫೋಗಟ್ ಅವರ ಕೂದಲನ್ನು ಕೂಡಾ ಕಟ್ ಮಾಡಲಾಗಿತ್ತು. ಆ ಬಳಿಕ ಡಿಹೈಡ್ರೇಶನ್ಗೆ ಒಳಗಾಗಿದ್ದ ಅವರರನ್ನು ಕ್ರೀಡಾಗ್ರಾಮದಲ್ಲಿನ ಪಾಲಿಕ್ಲಿನಿಕ್‌ಗೆ ಕರೆದೊಯ್ಯಬೇಕಾಯಿತು. ಹಸಿವಿನಿಂದ ಬಳಲಿರುವುದು, ದ್ರವ ಪದಾರ್ಥ ಸೇವನೆ ಮಾಡದಿರುವುದು ಹಾಗೂ ರಾತ್ರಿ ಇಡೀ ಅವರು ಬೆವರು ಹರಿಸಿದ್ದರಿಂದ ಡಿಹೈಡ್ರೇಶನ್ಗೆ ಒಳಗಾಗಿ ಅಸ್ವಸ್ಥಗೊಂಡಿದ್ದರು ಎಂದು ತಿಳಿದು ಬಂದಿದೆ.
ಒಲಿಂಪಿಕ್ ಕ್ರೀಡಾಕೂಟದಲ್ಲಿ ಅಥವಾ ಉದ್ಘಾಟನಾ ಸಮಾರಂಭದ ಹಿಂದಿನ 10 ದಿನಗಳ ಅವಧಿಯಲ್ಲಿ ಉದ್ಭವಿಸುವ ಯಾವುದೇ ವಿವಾದಗಳನ್ನು ಪರಿಹರಿಸಲು CAS ನ ತಾತ್ಕಾಲಿಕ ವಿಭಾಗವನ್ನು ಪ್ಯಾರಿಸ್ನ ಕ್ರೀಡಾಗ್ರಾಮದಲ್ಲಿ ತೆರೆಯಲಾಗಿದೆ. ಇಂದು ಈ ದೂರಿನ ಬಗ್ಗೆ ವಿಚಾರಣೆ ನಡೆಯಲಿದೆ.
ಸೆಮಿಫೈನಲ್‌ನಲ್ಲಿ ವಿನೇಶ್ ಎದುರು ಸೋತ ಕ್ಯೂಬಾದ ಕುಸ್ತಿಪಟು ಯುಸ್ನೆಲಿಸ್ ಗುಜ್ಮನ್ ಲೋಪೆಜ್, ಅಮೆರಿಕದ ಸಾರಾ ಆನ್ ಹಿಲ್ಡೆಬ್ರಾಂಡ್ ವಿರುದ್ಧ ಫೈನಲ್‌ನಲ್ಲಿ ಸೋಲನುಭವಿಸಿದ್ದಾರೆ. ಅಮೆರಿಕದ ಹಿಡೆಬ್ರಾಂಡ್ ಚಿನ್ನದ ಪದಕ ಪಡೆದುಕೊಂಡಿದ್ದಾರೆ. ವಿನೇಶ್ ಈಗ CAS ನಲ್ಲಿ ಲೋಪೆಜ್ ಅವರೊಂದಿಗೆ ಜಂಟಿ ಬೆಳ್ಳಿ ಪದಕ ವಿಜೇತ ಎಂದು ಘೋಷಿಸಬೇಕು ಎಂದು ದೂರು ದಾಖಲಿಸಿದ್ದಾರೆ.
ಕ್ರೀಡೆಯ ಅಂತಾರಾಷ್ಟ್ರೀಯ ಆಡಳಿತ ಮಂಡಳಿ, ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್ (UWW) IOA ಗೆ ವಿನೇಶ್ ಅನರ್ಹತೆಗೆ ಕಾರಣವಾದ ಪ್ರಸ್ತುತ ತೂಕದ ನಿಯಮವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ. ವಿನೇಶ್ ಈ ವಿಭಾಗದಲ್ಲಿ ಫೈನಲ್ ತಲುಪಿದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎಂಬ ಇತಿಹಾಸವನ್ನು ಬರೆದಿದ್ದರು. ಅನರ್ಹತೆಗೂ ಮುನ್ನ ಅವರಿಗೆ ಕನಿಷ್ಠ ಬೆಳ್ಳಿ ಪದಕ ಖಚಿತವಾಗಿತ್ತು.