ನವದೆಹಲಿ: ಶ್ರದ್ದೆ, ಆತ್ಮವಿಶ್ವಾಸಕ್ಕೆ ಛಲವೂ ಜೊತೆಯಾದರೆ ಬದುಕಿನಲ್ಲಿ ಏನನ್ನಾದರೂ ಸಾಧಿಸಬಹುದು ಎಂಬುದನ್ನು ಉತ್ತರ ಪ್ರದೇಶದ ಯುವಕ ಮೊಹಮ್ಮದ್ ಅಮಾನ್ ಜಗತ್ತಿಗೆ ತೋರಿಸಿದ್ದಾರೆ. ಚಿಕ್ಕವಯಸ್ಸಿನಲ್ಲೇ ತಂದೆ, ತಾಯಿಯನ್ನು ಕಳೆದುಕೊಂಡು ಅನಾಥನಾಗಿ, ಅದೆಷ್ಟೋ ರಾತ್ರಿಗಳನ್ನು ಹಸಿವಿನಿಂದ ಕಳೆದಿರುವ ಇವರು ಇಂದು ಭಾರತ ಅಂಡರ್-19 ಕ್ರಿಕೆಟ್ ತಂಡದ ನಾಯಕನಾಗಿ ಹೊರಹೊಮ್ಮಿದ್ದಾರೆ. ಈ ಹಂತ ತಲುಪಲು ಅಮಾನ್ ಪಟ್ಟಿರುವ ಕಷ್ಟಗಳು ಒಂದೆರಡಲ್ಲ. ಈ ಬಗ್ಗೆ ಕೇಳಿದರೆ ಅರೆ ಕ್ಷಣ ಅಯ್ಯೋ ಎನಿಸಿಬಿಡುತ್ತದೆ, ಮರುಕ್ಷಣವೇ ಸಾಧಕನಿಗೊಂದು ಸೆಲ್ಯೂಟ್ ಹೊಡೆದು ಬಿಡೋಣ ಅನ್ನಿಸದಿರದು.!
ಹೌದು, ಉತ್ತರ ಪ್ರದೇಶದ ಸಹರಾನ್ಪುರದ ನಿವಾಸಿ ಮೊಹಮ್ಮದ್ ಅಮಾನ್, ಬಡ ಕುಟುಂಬದಲ್ಲಿ ಅರಳಿದ ಪ್ರತಿಭೆ. ಹುಟ್ಟಿನಿಂದಲೂ ಕ್ರಿಕೆಟ್ ಮೇಲೆ ಅತೀವ ಆಸಕ್ತಿ. ಭವಿಷ್ಯದಲ್ಲಿ ತಾನೂ ಭಾರತ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಬೇಕು ಎಂಬ ಮಹದಾಸೆ. ಇಂಥ ಕನಸು ಕಂಡು ಅಮಾನ್ ಕ್ರಿಕೆಟ್ ಲೋಕವನ್ನು ಪ್ರವೇಶಿಸಿದರು.
ಆದರೆ ತಮ್ಮ 16ನೇ ವಯಸ್ಸು ತಲುಪುವ ವೇಳೆ ಅಮಾನ್ ತನ್ನ ತಂದೆ, ತಾಯಿ ಇಬ್ಬರನ್ನೂ ಕಳೆದುಕೊಂಡರು. ತಾಯಿ ಸಾಯಿಬಾ 2020ರಲ್ಲಿ ಕೋವಿಡ್-19 ಸಾಂಕ್ರಾಮಿಕ ಕಾಯಿಲೆಗೆ ತುತ್ತಾಗಿ ಕೊನೆಯುಸಿರೆಳೆದರೆ, ಟ್ರಕ್ ಡ್ರೈವರ್ ಆಗಿದ್ದ ತಂದೆ ಮೆಹ್ತಾಬ್ 2022ರಲ್ಲಿ ಅನಾರೋಗ್ಯದಿಂದ ಸಾವನ್ನಪ್ಪಿದರು. ಇಂಥ ದುರಂತದ ಮಧ್ಯೆ ಮನೆ ನಿರ್ವಹಣೆಯ ಜೊತೆಗೆ ತಮ್ಮ ಮೂವರು ಕಿರಿಯ ಸಹೋದರರ ಜವಾಬ್ದಾರಿಯನ್ನೂ ಅಮಾನ್ ವಹಿಸಿಕೊಂಡರು. ಪರಿಣಾಮ, ಪ್ರಾಣಕ್ಕಿಂತ ಹೆಚ್ಚು ಇಷ್ಟುಪಡುತ್ತಿದ್ದ ಕ್ರಿಕೆಟ್ಗೆ ವಿದಾಯ ಹೇಳಲು ನಿರ್ಧರಿಸಬೇಕಾಯಿತು.
ಆದರೆ, ಈ ಸಂದರ್ಭದಲ್ಲಿ ಇವರ ಬೆನ್ನಿಗೆ ನಿಂತ ಕೆಲವು ಮಹನೀಯರು, ಕ್ರಿಕೆಟ್ನಲ್ಲಿ ಮುಂದುವರೆಯುವಂತೆ ಮತ್ತು ಕೈಲಾದ ಸಹಾಯ ಮಾಡುವುದಾಗಿ ಪ್ರೋತ್ಸಾಹಿಸಿದರು. ಶ್ರದ್ಧೆ, ನಂಬಿಕೆಯಿಂದ ಆಟ ಮುಂದುವರೆಸಿದ ಅಮಾನ್ ಪರಿಶ್ರಮಕ್ಕೆ ಕೊನೆಗೂ ಪ್ರತಿಫಲ ಸಿಕ್ಕಿದೆ. ಇಂದು ಇವರು ಭಾರತ ಅಂಡರ್-19 ತಂಡದ ನಾಯಕನಾಗಿ ಆಯ್ಕೆಯಾಗಿದ್ದಾರೆ. ಇದಕ್ಕೂ ಮೊದಲು ಕಳೆದ ವರ್ಷದ ನವೆಂಬರ್ನಲ್ಲಿ ನಡೆದ ಅಂಡರ್-19 ಏಷ್ಯಾಕಪ್ನಲ್ಲೂ ಭಾರತ ತಂಡ ಪ್ರತಿನಿಧಿಸಿದ್ದರು. ಅಮಾನ್ ಒಳ್ಳೆಯ ಬ್ಯಾಟರ್ ಮಾತ್ರವಲ್ಲದೇ ಬೌಲರ್ ಕೂಡ ಹೌದು.
ಈ ಕುರಿತು 'ಈಟಿವಿ ಭಾರತ'ದ ವರದಿಗಾರರ ಜೊತೆ ಮಾತನಾಡಿರುವ ಅಮಾನ್ ಸಹೋದರಿ ಶೀವಾ, "ಹಿರಿಯ ಸಹೋದರ ಮೊಹಮ್ಮದ್ ಅಮಾನ್ ಕಠಿಣ ಪರಿಶ್ರಮಿ. ಸಮರ್ಪಣಾ ಮನೋಭಾವದವರು. ಮನೆ ಸಮೀಪದ ಖಾಲಿ ನಿವೇಶನಗಳಲ್ಲಿ ಮರದ ಕಟ್ಟಿಗೆಯೊಂದಿಗೆ ಕ್ರಿಕೆಟ್ ಆಡುತ್ತಿದ್ದರು. ಇಂದು ಈ ಹಂತಕ್ಕೆ ತಲುಪಲು ಅವರು ಅನೇಕ ಕಷ್ಟದ ಪರಿಸ್ಥಿತಿಗಳನ್ನು ಎದುರಿಸಬೇಕಾಯಿತು. ಕೆಲವು ಸಂದರ್ಭಗಳಲ್ಲಿ ಕುಟುಂಬದ ಬಡತನವು ಅವರ ವೃತ್ತಿಜೀವನಕ್ಕೆ ಅಡ್ಡಿಯಾಗಿತ್ತು. ಆದರೂ ಉತ್ಸಾಹ ಕಳೆದುಕೊಂಡಿರಲಿಲ್ಲ. ನಮ್ಮ ಪೋಷಕರು ಸಾಲದ ಹಣದಲ್ಲಿ ಹೇಗೋ ಅಮಾನ್‌ನನ್ನು ಕ್ರಿಕೆಟ್ ಅಕಾಡೆಮಿಗೆ ಸೇರಿಸಿದ್ದರು. ತರಬೇತಿಯ ಸಮಯದಲ್ಲಿ ಅಮಾನ್ ತಮ್ಮ ಪ್ರತಿಭೆ ಪ್ರದರ್ಶಿಸಿದ್ದರು. ಜಿಲ್ಲಾ ಮಟ್ಟದಿಂದ ರಾಜ್ಯ ಮಟ್ಟದ ಪಂದ್ಯಾವಳಿಗಳಲ್ಲಿ ಅತ್ಯುತ್ತಮ ಬ್ಯಾಟಿಂಗ್ನಿಂದಲೇ ಸುದ್ಧಿಯಾಗುತ್ತಿದ್ದರು. ಇಂದು ಅಂಡರ್ 19 ತಂಡಕ್ಕೆ ಆಯ್ಕೆಯಾಗಿ ಯಶಸ್ವಿಯಾಗಿರುವುದು ಅವರು ಪಟ್ಟ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲ" ಎಂದು ಹೇಳಿದರು.