ಬಾಗಲಕೋಟೆ: ಜಿಲ್ಲೆಯ ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ 23ನೇ ರಾಜ್ಯ ವುಶು ಚಾಂಪಿಯನ್ ಶಿಪ್ಗೆ ಅದ್ಧೂರಿಯಾಗಿ ತೆರೆ ಎಳೆಯಲಾಯಿತು. ನಾಲ್ಕು ದಿನಗಳ ಕಾಲ ನಡೆದ ಈ ಕ್ರೀಡಾಕೂಟದಲ್ಲಿ ಬಾಗಲಕೋಟೆ ಜಿಲ್ಲೆ ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಸಮಾರೋಪ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಶ್ರೀಮತಿ ಜಾನಕಿ ಕೆ.ಎಂ ಅವರು ಚಾಂಪಿಯನ್ ಶಿಪ್ ಸೇರಿದಂತೆ ವಿವಿಧ ಪ್ರಶಸ್ತಿ ಪಡೆದ ಕ್ರೀಡಾಪಟುಗಳಿಗೆ ಬಹುಮಾನ ವಿತರಣೆ ಮಾಡಿದರು. ರಾಜ್ಯದ ಒಟ್ಟು 24 ಜಿಲ್ಲೆಗಳಿಂದ ಕ್ರೀಡಾಪಟುಗಳು ಭಾಗವಹಿಸಿದ್ದರು. ಥವಲು ವಿಭಾಗದಲ್ಲಿ 83 ಅಂಕಗಳನ್ನು ಪಡೆದು ಬಾಗಲಕೋಟೆ ಪ್ರಥಮ ಸ್ಥಾನ, 57 ಅಂಕಗಳನ್ನು ಪಡೆದು ಬೆಂಗಳೂರು ಪೂರ್ವ ತಂಡ ದ್ವಿತೀಯ ಸ್ಥಾನ, 25 ಅಂಕಗಳನ್ನು ಪಡೆದು ಬೆಂಗಳೂರು ಅರ್ಬನ್ ತೃತೀಯ ಸ್ಥಾನ ಪಡೆದುಕೊಂಡಿದೆ.
ಇನ್ನು, ಸಾಂಡಾ ವಿಭಾಗದಲ್ಲಿ 96 ಅಂಕಗಳನ್ನು ಪಡೆದು ಬಾಗಲಕೋಟೆ ಜಿಲ್ಲೆ ಪ್ರಥಮ ಸ್ಥಾನ, 80 ಅಂಕಗಳನ್ನು ಪಡೆದ ಮೈಸೂರು ಜಿಲ್ಲೆ ದ್ವಿತೀಯ ಸ್ಥಾನ, 31 ಅಂಕಗಳನ್ನು ಪಡೆದ ಬೆಂಗಳೂರು ನಗರ ತೃತೀಯ ಸ್ಥಾನ ಪಡೆದುಕೊಂಡಿದೆ. ಸಮಗ್ರ ಚಾಂಪಿಯನ್ ಟ್ರೋಫಿಯನ್ನು ಬಾಗಲಕೋಟೆ ಜಿಲ್ಲೆ ಪಡೆದುಕೊಂಡಿದೆ.
ಪ್ರಶಸ್ತಿ ಪ್ರದಾನ ಮಾಡಿದ ಬಳಿಕ ಜಿಲ್ಲಾಧಿಕಾರಿ ಜಾನಕಿ ಕೆ ಎಂ ಮಾತನಾಡಿ, ಕ್ರೀಡಾಪಟುಗಳು ಸೋಲನ್ನೇ ಗೆಲುವಿನ ಸೋಪಾನವಾಗಿ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ಕ್ರೀಡಾಪಟುಗಳು ಸಹ ತಮ್ಮ ಅಭಿಪ್ರಾಯ ಹಂಚಿಕೊಂಡರು.
ಇದನ್ನೂ ಓದಿ: ನ್ಯೂಜಿಲ್ಯಾಂಡ್ - ಅಪ್ಘಾನಿಸ್ತಾನ ನಡುವಿನ ಏಕೈಕ ಟೆಸ್ಟ್ ಪಂದ್ಯಕ್ಕೆ ಭಾರತ ಆತಿಥ್ಯ - New Zealand Afghanistan test