2007ರ ಟಿ-20 ವಿಶ್ವಕಪ್ ಅನ್ನು ಎಂ.ಎಸ್.ಧೋನಿ ನಾಯಕತ್ವದಲ್ಲಿ ಗೆದ್ದ ನಂತರ, ಭಾರತಕ್ಕೆ ಎರಡನೇ ಕಪ್ ಗೆಲ್ಲಲು 17 ವರ್ಷಗಳು ಬೇಕಾಯಿತು. ನಿನ್ನೆ ನಡೆದ ರೋಚಕ ಹಣಾಹಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿದ ಟೀಂ ಇಂಡಿಯಾ ಕಪ್ ಎತ್ತಿ ಹಿಡಿದು ಸಂಭ್ರಮಿಸಿತು.
ರಾಷ್ಟ್ರಪತಿ, ಪ್ರಧಾನಿ, ವಿವಿಧ ರಾಜ್ಯಗಳ ಮುಖ್ಯಮಂತ್ರಿ ಸೇರಿದಂತೆ ದೇಶದ ಗಣ್ಯಾತಿಗಣ್ಯರು ತಂಡದ ಈ ಸಾಧನೆಗೆ ಪ್ರಶಂಸೆಯ ಸುರಿಮಳೆಗೈದಿದ್ದಾರೆ. 2007ರ ಚೊಚ್ಚಲ ಟಿ20 ವಿಶ್ವಕಪ್ ಗೆದ್ದ 'ಕ್ಯಾಪ್ಟನ್ ಕೂಲ್' ಖ್ಯಾತಿಯ ಎಂ.ಎಸ್.ಧೋನಿ ಪ್ರತಿಕ್ರಿಯಿಸಿ, 'ವಿಶ್ವಕಪ್ ಚಾಂಪಿಯನ್ಸ್. ಈ ಪಂದ್ಯ ನನ್ನ ಹೃದಯಬಡಿತ ಹೆಚ್ಚಿಸಿತ್ತು. ಹೆಮ್ಮೆಯ ಕ್ಷಣ. ಅಭಿನಂದನೆಗಳು. ನನಗೆ ಹುಟ್ಟುಹಬ್ಬದ ಉಡುಗೊರೆ ನೀಡಿದ್ದಕ್ಕಾಗಿ ಧನ್ಯವಾದಗಳು" ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಜುಲೈ 7ರಂದು ಧೋನಿ ಹುಟ್ಟುಹಬ್ಬ. ಈ ಕುರಿತು ಪ್ರಸ್ತಾಪಿಸಿ ಪೋಸ್ಟ್ ಹಾಕಿದ್ದಾರೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ ಭಾರತ 7 ರನ್‌ಗಳಿಂದ ಜಯ ಸಾಧಿಸಿದೆ. ಇದೂ ಕೂಡ ಧೋನಿಗೋಸ್ಕರ ಎಂಬಂತಹ ಚರ್ಚೆಗಳು ಶುರುವಾಗಿದೆ. ಏಕೆಂದರೆ ಧೋನಿ ಜೆರ್ಸಿ ಸಂಖ್ಯೆ 7.
'ಪ್ರತಿಯೊಬ್ಬ ಆಟಗಾರನೂ ಟೀಂ ಇಂಡಿಯಾದ ಈ ಯಶಸ್ಸಿಗೆ ಶ್ರಮಿಸಿದ್ದು, ರಾಷ್ಟ್ರ ಹೆಮ್ಮೆಪಡುವಂತೆ ಮಾಡಿದ್ದಾರೆ. ವೆಸ್ಟ್ ಇಂಡೀಸ್‌ನಲ್ಲಿ 2007ರ ಏಕದಿನ ವಿಶ್ವಕಪ್ ವೈಫಲ್ಯದ ನಂತರ 2024ರಲ್ಲಿ ಟಿ-20 ಕಪ್ ಗೆದ್ದಿದ್ದೇವೆ. ಭಾರತೀಯ ಕ್ರಿಕೆಟ್ ಶಕ್ತಿಶಾಲಿಯಾಗಿ ಹೊರಹೊಮ್ಮಿದೆ. ನನ್ನ ಸ್ನೇಹಿತ ದ್ರಾವಿಡ್ ನಾಯಕತ್ವದಲ್ಲಿ ಕಪ್ ಗೆದ್ದಿರುವುದು ಸಂತೋಷ ತಂದಿದೆ" ಎಂದು ಸಚಿನ್ ತೆಂಡೂಲ್ಕರ್ ಪೋಸ್ಟ್ ಮಾಡಿದ್ದಾರೆ. ಭಾರತ 1983, 2011ರ ಏಕದಿನ ವಿಶ್ವಕಪ್ ಮತ್ತು 2007ರ ಟಿ20 ವಿಶ್ವಕಪ್ ಗೆದ್ದಿರುವುದು ಗೊತ್ತೇ ಇದೆ.
ಇದನ್ನೂ ಓದಿ: ಫೈನಲ್‌ನಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್; ದ್ರಾವಿಡ್-ರೋಹಿತ್ ನಂಬಿಕೆ ಉಳಿಸಿಕೊಂಡ ಕೊಹ್ಲಿ - Virat Kohli