ಹೈದರಾಬಾದ್: ಟೀಂ ಇಂಡಿಯಾದ ಇಬ್ಬರು ಹಿರಿಯ ಬ್ಯಾಟರ್ಗಳಾದ ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ ಮತ್ತು ನಾಯಕ ರೋಹಿತ್ ಶರ್ಮಾ ಅವರ ನಿವೃತ್ತಿ ಬಗ್ಗೆ ಪ್ರಶ್ನೆಗಳು ತೂರಿ ಬರುತ್ತಿವೆ. ಮೈದಾನದಲ್ಲಿ ಲೀಲಾಜಾಲವಾಗಿ ಬ್ಯಾಟಿಂಗ್ ಮಾಡುತ್ತಿದ್ದರೂ, ಅವರ ಮೇಲೆ ಟೀಕೆಗಳು ಕೇಳಿಬರುತ್ತಿವೆ.
ಇತ್ತೀಚೆಗೆ ರೋಹಿತ್ ಶರ್ಮಾ ಅವರು ಸಂದರ್ಶನವೊಂದರಲ್ಲಿ ಮಾತನಾಡಿ "ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಿದ ಬಳಿಕವೇ ಕ್ರಿಕೆಟ್ನಿಂದ ನಿವೃತ್ತಿ ತೆಗೆದುಕೊಳ್ಳುವೆ" ಎಂದು ಖಡಕ್ ಮಾತನ್ನಾಡಿದ್ದರು. ಇದರ ಬೆನ್ನಲ್ಲೇ ವಿರಾಟ್ ಕೊಹ್ಲಿ ಅವರಿಗೆ ಎದುರಾದ ಇದೇ ಪ್ರಶ್ನೆಗೆ ಅಷ್ಟೇ ಖಡಕ್ ಆಗಿ ಉತ್ತರಿಸಿದ್ದಾರೆ.
ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಇತ್ತೀಚೆಗೆ ಆರ್ಸಿಬಿಯ ರಾಯಲ್ ಗಾಲಾ ಡಿನ್ನರ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಾಗ, ನಿವೃತ್ತಿಯ ಬಗ್ಗೆ ಪ್ರಶ್ನಿಸಲಾಗಿದೆ. ಇದಕ್ಕೆ ಆಸಕ್ತಿದಾಯಕವಾಗಿ ವಿರಾಟ್ ಕೊಹ್ಲಿ ಉತ್ತರಿಸಿದ್ದಾರೆ.
- " class="align-text-top noRightClick twitterSection" data="">
"ಎಲ್ಲ ಕ್ರೀಡಾಪಟುಗಳಿಗೆ ವೃತ್ತಿಜೀವನವನ್ನು ಕೊನೆಗೊಳಿಸಬೇಕಾದ ದಿನ ಬಂದೇ ಬರುತ್ತದೆ. ಅದರಂತೆ ನಾನೂ ವಿದಾಯ ಹೇಳಲೇಬೇಕು. ಕೊನೆಯವರೆಗೂ ಹೀಗೆಯೇ ನಾನು ಆಡಲಾರೆ. ಈವರೆಗಿನ ನನ್ನ ವೃತ್ತಿಜೀವನದಲ್ಲಿ ಪಶ್ಚಾತ್ತಾಪಪಡುವ ಸಂದರ್ಭ ಬಂದಿಲ್ಲ. ಹೀಗೆ ಮಾಡಿದ ಬಳಿಕ ಕ್ರಿಕೆಟ್ಗೆ ನಿವೃತ್ತಿ ಹೇಳಬೇಕು ಎಂದು ಅಂದುಕೊಂಡಿಲ್ಲ. ನನ್ನಿಂದ ಏನೆಲ್ಲಾ ಮಾಡಲು ಸಾಧ್ಯವೋ ಅದನ್ನೆಲ್ಲಾ ಮಾಡುತ್ತಿದ್ದೇನೆ. ಮಾಡಲಾಗದ ಬಗ್ಗೆ ಯೋಚಿಸುತ್ತಾ ಕುಳಿತುಕೊಳ್ಳಲ್ಲ. ಒಂದಲ್ಲಾ ಒಂದು ದಿನ ನಾನು ಕೂಡ ನಿವೃತ್ತಿ ಘೋಷಿಸುವೆ. ಬಳಿಕ, ನಿಮ್ಮ ಮುಂದೆ ನಾನು ಕೆಲ ದಿನಗಳವರೆಗೆ ಕಾಣಿಸಿಕೊಳ್ಳುವುದಿಲ್ಲ. ಹೀಗಾಗಿ ನಾನು ಆಡುವಷ್ಟು ದಿನ ಉತ್ತಮ ಪ್ರದರ್ಶನ ನೀಡಲು ಬಯಸುತ್ತೇನೆ ಎಂದು ಹೇಳಿದ್ದಾರೆ.
ವಿರಾಟ್ರ ಈ ಹೇಳಿಕೆ ವೈರಲ್ ಆಗಿದ್ದು, ಅಭಿಮಾನಿಗಳಲ್ಲಿ ಆತಂಕ ಶುರುವಾಗಿದೆ. ಚೇಸ್ ಮಾಸ್ಟರ್ ಯಾವುದೇ ದಿಢೀರ್ ನಿರ್ಧಾರ ಕೈಗೊಳ್ಳಬೇಡಿ ಎಂದು ಮನವಿ ಮಾಡಿದ್ದಾರೆ. ವೃತ್ತಿ ಜೀವನದ ಉತ್ತುಂಗದಲ್ಲಿರುವ ವಿರಾಟ್ ಕೊಹ್ಲಿಯ ಮುಂದೆ ನಿವೃತ್ತಿಯ ಮಾತುಗಳು ಕೇಳಿಬರುತ್ತಿರುವುದು ಅಭಿಮಾನಿಗಳಲ್ಲಿ ಬೇಸರ ತರಿಸಿದೆ.
35ರ ಹರೆಯದ ವಿರಾಟ್ ಫಿಟ್ನೆಸ್ ಸಮಸ್ಯೆಗೆ ಒಳಗಾಗಿ ಈವರೆಗೂ ತಂಡದಿಂದ ಹೊರಬಿದ್ದಿಲ್ಲ. 2008ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ ಬಳಿಕ ಭಾರತಕ್ಕೆ ಹಲವು ವಿಜಯಗಳನ್ನು ತಂದುಕೊಟ್ಟಿದ್ದಾರೆ. ಮೂರು ಮಾದರಿಯ ಕ್ರಿಕೆಟ್ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಏಕದಿನದಲ್ಲಿ ಅತಿ ಹೆಚ್ಚು ಶತಕಗಳು (50) ಸೇರಿದಂತೆ ಅನೇಕ ದಾಖಲೆಗಳನ್ನು ತಮ್ಮ ಹೆಸರಿನಲ್ಲಿ ಬರೆಸಿಕೊಂಡಿದ್ದಾರೆ. ನಡೆಯುತ್ತಿರುವ ಐಪಿಎಲ್ನಲ್ಲೂ ಅತ್ಯಧಿಕ ರನ್ ಗಳಿಸಿದ ಪಟ್ಟಿಯಲ್ಲಿ ಮೊದಲಿದ್ದಾರೆ.