ಹೈದರಾಬಾದ್: ಸೆಪ್ಟೆಂಬರ್ 19ರಿಂದ ಬಾಂಗ್ಲಾದೇಶದ ವಿರುದ್ಧ ಆರಂಭವಾಗಲಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಗಾಗಿ ಟೀಂ ಇಂಡಿಯಾ ಆಟಾಗರರು ಸಜ್ಜಾಗಿದ್ದಾರೆ. ಮೊದಲ ಪಂದ್ಯ ಚೆನ್ನೈನಲ್ಲಿ ನಡೆಯಲಿದ್ದು, ಈಗಾಗಲೇ ಭಾರತ ತಂಡದ ಆಟಗಾರರು ಅಲ್ಲಿಗೆ ತಲುಪಿ ಚೆಪಾಕ್ ಮೈದಾನದಲ್ಲಿ ಅಭ್ಯಾಸವನ್ನು ನಡೆಸುತ್ತಿದ್ದಾರೆ. ಉಭಯ ತಂಡಗಳ ಪಾಲಿಗೆ ಈ ಸರಣಿ ಮಹತ್ವದಾಗಿದ್ದು, ಅದರಲ್ಲೂ ಭಾರತಕ್ಕೆ ಅಪರೂಪದ ದಾಖಲೆ ಬರೆಯಲು ಇದು ಸುವರ್ಣವಕಾಶವಾಗಿದೆ.
ಹೌದು, ಬಾಂಗ್ಲಾ ವಿರುದ್ಧ ಮೊದಲ ಟೆಸ್ಟ್ ಪಂದ್ಯ ಭಾರತ ಗೆದ್ದದ್ದೇ ಆದದಲ್ಲಿ ದೊಡ್ಡ ದಾಖಲೆ ಬರೆಯಲಿದೆ. 1932ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ನಂತರ ಭಾರತ ಇದೂವರೆಗೂ ಒಟ್ಟು 579 ಪಂದ್ಯಗಳನ್ನು ಆಡಿದೆ. ಇದರಲ್ಲಿ 178 ಪಂದ್ಯಗಳಲ್ಲಿ ಗೆಲುವು ಸಾಧಿಸಿದರೇ, 178 ಪಂದ್ಯಗಳನ್ನು ಸೋಲನುಭವಿಸಿದೆ. ಉಳಿದ 223 ಪಂದ್ಯಗಳ ಪೈಕಿ 222 ಪಂದ್ಯಗಳು ಡ್ರಾನಲ್ಲಿ ಕೊನೆಗೊಂಡಿದ್ದು, ಒಂದು ಪಂದ್ಯ ರದ್ದಾಗಿದೆ.
ಸೆ.19 ರಿಂದ ಬಾಂಗ್ಲಾದೇಶ ವಿರುದ್ಧ ಚೆನ್ನೈನಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯವನ್ನು ಭಾರತ ಗೆದ್ದರೆ, ಟೆಸ್ಟ್ ಕ್ರಿಕೆಟ್‌ನಲ್ಲಿ ಸೋಲಿಗಿಂತ ಹೆಚ್ಚು ಗೆಲುವು ಸಾಧಿಸಿದ ನಾಲ್ಕನೇ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಭಾರತ ಇದುವರೆಗೂ ಈ ದಾಖಲೆಯನ್ನು ಮುಟ್ಟಿಲ್ಲ. ಈ ಮೈಲಿಗಲ್ಲನ್ನು ತಲುಪಿದರೇ 1932ರ ನಂತರ ಇದೇ ಮೊದಲ ಬಾರಿಗೆ ಅಂದರೆ 92 ವರ್ಷಗಳ ನಂತರ ಟೆಸ್ಟ್ನಲ್ಲಿ ಸೋಲಿಗಿಂತ ಹೆಚ್ಚಿನ ಗೆಲುವು ಸಾಧಿಸಿದ ತಂಡವಾಗಲಿದೆ.
ಪ್ರಸ್ತುತ, ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಕೇವಲ ನಾಲ್ಕು ತಂಡಗಳು ಸೋಲಿಗಿಂತ ಹೆಚ್ಚು ಗೆಲುವುಗಳನ್ನು ಸಾಧಿಸಿವೆ. ಇದರಲ್ಲಿ ಆಸ್ಟ್ರೇಲಿಯಾ 866 ಟೆಸ್ಟ್ ಪಂದ್ಯಗಳನ್ನು ಆಡಿ, 414ರಲ್ಲಿ ಗೆದ್ದು 232ರಲ್ಲಿ ಸೋತು ಮೊದಲ ಸ್ಥಾನದಲ್ಲಿದೆ. ನಂತರ ಇಂಗ್ಲೆಂಡ್ 1077 ಟೆಸ್ಟ್ ಪಂದ್ಯಗಳನ್ನು ಆಡಿ 397 ಪಂದ್ಯಗಳಲ್ಲಿ ಗೆಲುವು ಮತ್ತು 325 ಸೋಲುಗಳನ್ನು ದಾಖಲಿಸಿ ಎರಡನೇ ಸ್ಥಾನದಲ್ಲಿದೆ. ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾ ಇದ್ದು, ಇದುವರೆಗೂ 466 ಟೆಸ್ಟ್‌ಗಳನ್ನು ಆಡಿರುವ ಈ ತಂಡ 179 ಪಂದ್ಯಗಳಲ್ಲಿ ಗೆದ್ದು 161ರಲ್ಲಿ ಸೋಲನುಭವಿಸಿದೆ. ಉಳಿದಂತೆ ನಾಲ್ಕನೇ ಸ್ಥಾನದಲ್ಲಿ ಪಾಕಿಸ್ತಾನ ಇದ್ದು 458 ಟೆಸ್ಟ್ ಪಂದ್ಯಗಳ ಪೈಕಿ 148ರಲ್ಲಿ ಗೆಲುವು ಮತ್ತು 144ರಲ್ಲಿ ಸೋಲನುಭವಿಸಿದೆ.