ನ್ಯೂಯಾರ್ಕ್: ಇದೇ ಮೊದಲ ಬಾರಿಗೆ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿ ಆಯೋಜಿಸಿದ್ದ ಅಮೆರಿಕ ಅದರಲ್ಲಿ ಯಶಸ್ಸು ಕೂಡ ಕಂಡಿದೆ. ಟೂರ್ನಿಯ ಪಂದ್ಯಗಳಿಗೆ ಆತಿಥ್ಯ ವಹಿಸಿದ್ದ ರಾಷ್ಟ್ರ ಇದಕ್ಕಾಗಿ ನ್ಯೂಯಾರ್ಕ್ನಲ್ಲಿ ಅಂತಾರಾಷ್ಟ್ರೀಯ ಮಟ್ಟದ ನೂತನ ಕ್ರೀಡಾಂಗಣವನ್ನೇ ನಿರ್ಮಾಣ ಮಾಡಿತ್ತು. ಇದೀಗ ಆ ಸ್ಟೇಡಿಯಂ ತೆರವು ಮಾಡಲು ಮುಂದಾಗಿದೆ.
ಟಿ20 ವಿಶ್ವಕಪ್ಗಾಗಿ ತಾತ್ಕಾಲಿಕವಾಗಿ ಕೇವಲ 4 ತಿಂಗಳಲ್ಲಿ ರೂಪಿಸಿದ್ದ ಡ್ರಾಪ್ ಪಿಚ್ ಕ್ರೀಡಾಂಗಣ ತೆರವಾಗಲಿದೆ. ಸ್ಟೇಡಿಯಂ ಹೊರಭಾಗದಲ್ಲಿ ದೊಡ್ಡ ಗಾತ್ರದ ಬುಲ್ಡೋಜರ್ಗಳು ಕಾರ್ಯಾಚರಣೆಗೆ ಸಿದ್ಧವಾಗಿವೆ. ಇದರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಜೂನ್ 14ರಂದು ನೆಲಕ್ಕುರುಳಿಸುವ ಕೆಲಸ ಶುರುವಾಗಲಿದೆ.
ನ್ಯೂಯಾರ್ಕ್‌ನ ಲಾಂಗ್ ಐಲ್ಯಾಂಡ್‌ನ ಐಸೆನ್‌ಹೋವರ್ ಪಾರ್ಕ್‌ನಲ್ಲಿ 40 ಎಕರೆ ಪ್ರದೇಶದಲ್ಲಿ ನಾಸೌ ಕೌಂಟಿ ಇಂಟರ್‌ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಂ 250 ಕೋಟಿ ರೂಪಾಯಿ ವೆಚ್ಚದಲ್ಲಿ ತಲೆ ಎತ್ತುವಂತೆ ಮಾಡಲಾಗಿತ್ತು. ಇದಕ್ಕೆ ಹಿಡಿದ ಸಮಯ ಕೇವಲ ನಾಲ್ಕು ತಿಂಗಳು. ಅತ್ಯಂತ ವೇಗವಾಗಿ ಅಂತಾರಾಷ್ಟ್ರೀಯ ಕ್ರೀಡಾಂಗಣವನ್ನು ರೂಪಿಸಲಾಗಿತ್ತು. ಆಸ್ಟ್ರೇಲಿಯಾದಲ್ಲಿ ನಿರ್ಮಿಸಲಾಗಿದ್ದ ಡ್ರಾಪ್ ಪಿಚ್ಗಳನ್ನು ಇಲ್ಲಿ ತಂದು ಅಳವಡಿಸಲಾಗಿತ್ತು.
ಹೈವೋಲ್ಟೇಜ್ ಪಂದ್ಯಕ್ಕೆ ಸಾಕ್ಷಿ: ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅಮೆರಿಕ 8 ಪಂದ್ಯಗಳಿಗೆ ಆತಿಥ್ಯ ವಹಿಸಿತ್ತು. ಅದರಲ್ಲಿ ಹೈವೋಲ್ಟೇಜ್ ಪಂದ್ಯವಾದ ಭಾರತ ಮತ್ತು ಪಾಕಿಸ್ತಾನ ಪಂದ್ಯವನ್ನೂ ಇಲ್ಲಿ ನಡೆಸಲಾಗಿತ್ತು. ಜೊತೆಗೆ ಇಲ್ಲಿ ದಕ್ಷಿಣ ಆಫ್ರಿಕಾ, ಭಾರತ, ಆಸ್ಟ್ರೇಲಿಯಾದಂತಹ ದೈತ್ಯ ತಂಡಗಳ ಪಂದ್ಯ ನಡೆದಿವೆ. ಜೂನ್ 12 ರಂದು ಭಾರತ ಮತ್ತು ಅಮೆರಿಕ ನಡುವಿನ ಪಂದ್ಯವೇ ಇಲ್ಲಿ ಕೊನೆಯಾಗಿತ್ತು.
ಕ್ರೀಡಾಂಗಣವನ್ನು ತೆರವು ಮಾಡಿ ಕ್ರಿಕೆಟ್ ಕ್ಲಬ್ಗೆ ಅವಕಾಶ ಮಾಡಿಕೊಡಲಾಗುತ್ತದೆ. ದೇಶದಲ್ಲಿ ಕ್ರಿಕೆಟ್ ಅನ್ನು ಬೆಳೆಸಲು ಶ್ರಮಿಸಲಾಗುವುದು. ಜೊತೆಗೆ, ಇನ್ನಿತರ ಕ್ರೀಡೆಗಳಿಗೂ ಇಲ್ಲಿ ಅವಕಾಶ ಸಿಗಲಿದೆ. ಸ್ಟೇಡಿಯಂನ ವಸ್ತುಗಳನ್ನು ಮರುಬಳಕೆ ಮಾಡಲಾಗುವುದು. ಇಲ್ಲಿ ಪಾಕಿಸ್ತಾನ ತಂಡದ ವಿರುದ್ಧ ಅನನುಭವಿ ಆಟಗಾರರ ಹೊಂದಿರುವ ಅಮೆರಿಕ ತಂಡ ಐತಿಹಾಸಿಕ ಗೆಲುವು ಸಾಧಿಸಿದ್ದು ಸ್ಮರಣೀಯ ಎಂದು ಅಲ್ಲಿನ ಕ್ರಿಕೆಟ್ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.
ಬ್ಯಾಟರ್ಗಳಿಗೆ ಭಾರೀ ಸವಾಲಾಗಿದ್ದ ಪಿಚ್ನಲ್ಲಿ ಭಾರತ ಮೂರು ಪಂದ್ಯಗಳಲ್ಲಿ ಆಡಿ ಗೆದ್ದು 6 ಪಾಯಿಂಟ್ಸ್ ಮೂಲಕ ಎ ಗುಂಪಿನಲ್ಲಿ ಅಗ್ರಸ್ಥಾನದ ಜೊತೆಗೆ ಸೂಪರ್ 8 ಹಂತಕ್ಕೆ ತಲುಪಿದೆ. ಈಗಾಗಲೇ ಆಸ್ಟ್ರೇಲಿಯಾ ವಿರುದ್ಧ ಜೂನ್ 24 ರಂದು ಪಂದ್ಯ ನಿಗದಿಯಾಗಿವೆ. ಇನ್ನೆರಡು ಪಂದ್ಯಗಳಿಗೆ ತಂಡಗಳು ಘೋಷಣೆಯಾಗಬೇಕಿದೆ.
ಇದನ್ನೂ ಓದಿ: ಹೀಗೆ ಮಾಡಿದ್ದಕ್ಕೆ ಯುಎಸ್ ತಂಡಕ್ಕೆ 5 ರನ್ ದಂಡ; ಏನಿದು ಸ್ಟಾಪ್-ಕ್ಲಾಕ್ ನಿಯಮ? - Penalty For USA