ಬಾರ್ಬಡೋಸ್: ಬ್ರಿಡ್ಜ್ಟೌನ್ನ ಕೆನ್ಸಿಂಗ್ಟನ್ ಓವಲ್ ಮೈದಾನಲ್ಲಿ ನಡೆದ ಟಿ20 ವಿಶ್ವಕಪ್ ಟೂರ್ನಿಯ ಇಂದಿನ ಪಂದ್ಯದ ರೋಚಕ ಸೂಪರ್ ಓವರ್ ಹಣಾಹಣಿಯಲ್ಲಿ ಓಮನ್ ವಿರುದ್ಧ ನಮೀಬಿಯಾ ತಂಡ ಗೆಲುವಿನ ನಗೆ ಬೀರಿದೆ. 2012ರ ಬಳಿಕ ಚುಟುಕು ವಿಶ್ವಕಪ್ನಲ್ಲಿ ಮೂಡಿ ಬಂದ ಮೊದಲ ಸೂಪರ್ ಓವರ್ ಪಂದ್ಯ ಇದಾಗಿದೆ.
ಟಾಸ್ ಗೆದ್ದ ನಮೀಬಿಯಾ ಮೊದಲು ಓಮನ್ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನಿಸಿತು. ಆದರೆ, ಕಳಪೆ ಆರಂಭ ಪಡೆದ ಓಮನ್ ಖಾತೆ ತೆರೆಯುವ ಮುನ್ನವೇ ಎರಡು ವಿಕೆಟ್ ಕಳೆದುಕೊಂಡಿತು. ಬಳಿಕವೂ ಚೇತರಿಸಿಕೊಳ್ಳದ ತಂಡ, 37 ರನ್ ಆಗುವಷ್ಟರಲ್ಲೇ 4 ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು. ಕಶ್ಯಪ್ 0, ವಿಕೆಟ್ ಕೀಪರ್ ನಸೀಮ್ ಖುಷಿ 6, ನಾಯಕ ಅಕಿಬ್ ಇಲ್ಯಾಸ್ 0 ಹಾಗೂ ಝೀಸನ್ ಮಕ್ಸೂಸ್ 22 ರನ್ ಬಾರಿಸಿ ಔಟಾಗಿದ್ದರು.
ಬಳಿಕ ಖಾಲಿದ್ ಖಾನ್ (34) ಹಾಗೂ ಅಯಾನ್ ಖಾನ್ (15) ತಂಡದ ರನ್ ಗತಿ ಹೆಚ್ಚಿಸಲು ಕೊಂಚ ಹೋರಾಟ ನಡೆಸಿದರು. ಆದರೂ ಇವರಿಬ್ಬರ ವಿಕೆಟ್ ಪತನದ ಬಳಿಕ ಓಮನ್ ಮತ್ತೆ ವಿಕೆಟ್ ಕಳೆದುಕೊಳ್ಳುವತ್ತ ಸಾಗಿತು. ಕೊನೆಯಲ್ಲಿ ಶಕೀಲ್ ಅಹ್ಮದ್ 11 ರನ್ ಗಳಿಸಿ ನೆರವಾದರು. ಅಂತಿಮವಾಗಿ ಓಮನ್ 19.4 ಓವರ್ಗಳಲ್ಲಿ ಕೇವಲ 109 ರನ್ಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು.
110 ರನ್ ಬೆನ್ನಟ್ಟಿದ ನಮೀಬಿಯಾ ಕೂಡ ಶೂನ್ಯ ರನ್ಗೆ ಮೊದಲ ವಿಕೆಟ್ ಕಳೆದುಕೊಂಡಿತು. ಮೈಕಲ್ ವಾನ್ ಲಿಂಗೆನ್ ಖಾತೆ ತೆರೆಯದೇ ಔಟಾದರು. ತದನಂತರ ಒಂದಾದ ನಿಕೋಲಸ್ ಡೆವಿನ್ 24 ಹಾಗೂ ಜಾನ್ ಫ್ರೈಲಿಂಕ್ 45 ರನ್ ಬಾರಿಸಿ ನಮೀಬಿಯಾ ಸ್ಕೋರ್ಗೆ ಚೇತರಿಕೆ ನೀಡಿದರು. ಈ ಹಂತದಲ್ಲಿ ಅಕಿಬ್ ಬೌಲಿಂಗ್ನಲ್ಲಿ ಡೆವಿನ್ ವಿಕೆಟ್ ಒಪ್ಪಿಸಿದರು. ಬಳಿಕ ನಾಯಕ ಗರ್ಹರ್ಡ್ ಎರಸ್ಮಸ್ ಕೂಡ 13 ರನ್ ಗಳಿಸಿ ಪೆವಿಲಿಯನ್ಗೆ ಮರಳಿದರು.
ತದನಂತರ ನಮೀಬಿಯಾ ದಿಢೀರ್ ಕುಸಿತ ಕಂಡಿತು. 105 ರನ್ ಗಳಿಸುವಷ್ಟರಲ್ಲಿ 5 ವಿಕೆಟ್ ಉರುಳಿದ್ದವು. ಫ್ರೈಲಿಂಕ್ ವಿಕೆಟ್ ಪತನದ ಬಳಿಕ ಪಂದ್ಯವು ರೋಚಕತೆಯತ್ತ ಸಾಗಿತು. 20ನೇ ಓವರ್ನಲ್ಲಿ ಗೆಲುವಿಗೆ 5 ರನ್ ಅಗತ್ಯವಿತ್ತು. ಆದರೆ, ಎರಡು ವಿಕೆಟ್ ಪತನದೊಂದಿಗೆ ನಮೀಬಿಯಾ 4 ರನ್ ಮಾತ್ರ ಗಳಿಸಿದ್ದರಿಂದ ಪಂದ್ಯವು ರೋಚಕ ಟೈನಲ್ಲಿ ಅಂತ್ಯಗೊಂಡಿತ್ತು.
ಸೂಪರ್ ಓವರ್ ಫೈಟ್: ಸೂಪರ್ ಓವರ್ನಲ್ಲಿ ನಮೀಬಿಯಾ ಭರ್ಜರಿ ಬ್ಯಾಟಿಂಗ್ ತೋರಿತು. ಬಿಲಾಲ್ ಖಾನ್ ಎಸೆತ ಓವರ್ನಲ್ಲಿ ಮೂರು ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 21 ರನ್ಗಳು ಹರಿದುಬಂದವು. ವೈಸ್ 13 ಹಾಗೂ ಎರಾಸ್ಮಸ್ 8 ರನ್ ಚಚ್ಚಿದರು.
ಬಳಿಕ 22 ರನ್ ಬೆನ್ನಟ್ಟಿದ ಓಮನ್ ಮೊದಲ ಎಸೆತದಲ್ಲಿ 2 ಹಾಗೂ ಎರಡನೇ ಬೌಲ್ನಲ್ಲಿ ರನ್ ಗಳಿಸುವಲ್ಲಿ ವಿಫಲವಾಯಿತು. ನಂತರ ಮೂರನೇ ಎಸೆತದಲ್ಲಿ ವೈಸ್, ನಸೀಮ್ ಖುಷಿರನ್ನು ಬೌಲ್ಡ್ ಮಾಡಿದರು. ನಾಲ್ಕು ಹಾಗೂ 5ನೇ ಬಾಲ್ಗಳಲ್ಲಿ ತಲಾ ಒಂದು ರನ್ ಮಾತ್ರ ಬಂದವು. ಕೊನೆಯ ಎಸೆತದಲ್ಲಿ ಆಕಿಬ್ ಸಿಕ್ಸರ್ ಸಿಡಿಸಿದರೂ ಕೂಡ ನಮೀಬಿಯಾ ಭರ್ಜರಿಯಾಗಿ ಗೆದ್ದು ಬೀಗಿತು.
ಇದನ್ನೂ ಓದಿ: ಟಿ20 ವಿಶ್ವಕಪ್: ಚೇಸ್ ಅಜೇಯ ಆಟ; ನ್ಯೂಗಿನಿಯಾ ವಿರುದ್ಧ ಸೋಲಿನಿಂದ ಪಾರಾದ ವಿಂಡೀಸ್ - WI vs PNG