ಸೇಂಟ್ ಲೂಸಿಯಾ: ಇಲ್ಲಿನ ಡರೆನ್ ಸಮಿ ರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿಂದು ಟಿ20 ವಿಶ್ವಕಪ್ ಪಂದ್ಯಾವಳಿಯ ಸೂಪರ್-8 ಪಂದ್ಯದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ಮುಖಾಮುಖಿಯಾಗಲಿವೆ. ಸೆಮಿಫೈನಲ್ ತಲುಪಲು ಎರಡೂ ತಂಡಗಳಿಗೆ ಗೆಲುವು ಅನಿವಾರ್ಯವಾಗಿದೆ. 2013ರ ಬಳಿಕ ಐಸಿಸಿ ಟ್ರೋಫಿ ಬರ ಎದುರಿಸುತ್ತಿರುವ ಟೀಂ ಇಂಡಿಯಾ, ಚಾಂಪಿಯನ್ ಆಗುವ ನಿಟ್ಟಿನಲ್ಲಿ ಮುನ್ನುಗ್ಗುತ್ತಿದೆ.
ವರುಣನ ಆತಂಕ: ಚುಟುಕು ವಿಶ್ವಕಪ್ ಟೂರ್ನಿಯ ರೋಚಕ ಕದನಗಳಲ್ಲೊಂದಾದ ಇಂದಿನ ಇಂಡೋ-ಆಸೀಸ್ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದೆ. ಹವಾಮಾನ ವರದಿಗಳ ಪ್ರಕಾರ, ಪಂದ್ಯದ ವೇಳೆ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇದೆ. ಈಗಾಗಲೇ ಭಾನುವಾರ ಸೇಂಟ್ ಲೂಸಿಯಾ ಪ್ರದೇಶದಲ್ಲಿ ಭಾರಿ ಮಳೆಯಾಗಿದೆ. ಇಂದಿನ ಪಂದ್ಯಕ್ಕೂ ವರುಣ ಅಡ್ಡಿಪಡಿಸುವ ಸಾಧ್ಯತೆ ದಟ್ಟವಾಗಿದೆ.
#WATCH | ICC Men's T20 World Cup 2024 | Saint Lucia: rain lashes the island ahead of the India Vs Australia match tomorrow.
— ANI (@ANI) June 23, 2024
(Visuals from Daren Sammy National Cricket Stadium) pic.twitter.com/B3D8Mnz1Za
ಮಳೆಯಿಂದ ಪಂದ್ಯ ರದ್ದಾದರೆ ಏನಾಗಲಿದೆ?: ಟಿ20 ವಿಶ್ವಕಪ್ ಟೂರ್ನಿಯ ಸೂಪರ್-8 ಪಂದ್ಯಗಳಿಗೆ ಯಾವುದೇ ಮೀಸಲು ದಿನವಿಲ್ಲ. ಹೀಗಾಗಿ, ಪಂದ್ಯಗಳು ಮಳೆಯಿಂದಾಗಿ ರದ್ದಾದರೆ, ಎರಡೂ ತಂಡಗಳಿಗೆ ತಲಾ ಒಂದು ಪಾಯಿಂಟ್ ಹಂಚಿಕೆ ಮಾಡಲಾಗುತ್ತದೆ. ಸೇಂಟ್ ಲೂಸಿಯಾ ಪಂದ್ಯವು ಮಳೆಗೆ ಆಹುತಿಯಾದರೆ, ಭಾರತ ಮತ್ತು ಆಸ್ಟ್ರೇಲಿಯಾ ತಲಾ ಒಂದು ಅಂಕ ಪಡೆಯಲಿವೆ. ಇದರಿಂದಾಗಿ ಈಗಾಗಲೇ 4 ಅಂಕ ಹೊಂದಿರುವ ಭಾರತವು ಸತತ ಎರಡನೇ ಬಾರಿಗೆ ಟಿ20 ವಿಶ್ವಕಪ್ ಸೆಮಿಫೈನಲ್ ತಲುಪಲಿದೆ.
ಮತ್ತೊಂದೆಡೆ, ಪಂದ್ಯ ರದ್ದಾದರೆ ಆಸ್ಟ್ರೇಲಿಯಾವು ಸಂಕಷ್ಟಕ್ಕೆ ಸಿಲುಕಿಕೊಳ್ಳಲಿದೆ. ಆಸೀಸ್ ತಂಡವು ಬಳಿಕ ನಡೆಯಲಿರುವ ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನ ನಡುವಿನ ಕೊನೆಯ ಸೂಪರ್-8 ಪಂದ್ಯದ ಮೇಲೆ ಅವಲಂಬಿತವಾಗಬೇಕಾಗುತ್ತದೆ. ಈ ಪಂದ್ಯದಲ್ಲಿ ಬಾಂಗ್ಲಾ ಗೆಲುವಿಗಾಗಿ ಕಾಂಗರೂ ಪಡೆ ಪ್ರಾರ್ಥಿಸಬೇಕಾಗಲಿದೆ. ಅಫ್ಘಾನಿಸ್ತಾನ ಸೋತರೆ ಆಸೀಸ್ಗೆ ಸೆಮೀಸ್ ಹಾದಿ ಸರಳವಾಗಲಿದೆ. ಒಂದು ವೇಳೆ ಅಫ್ಘಾನಿಸ್ತಾನ ಗೆದ್ದರೆ, 4 ಅಂಕಗಳೊಂದಿಗೆ ಮುಂದಿನ ಹಂತಕ್ಕೆ ಲಗ್ಗೆ ಇಡಲಿದೆ. ಈ ಪಂದ್ಯವೂ ಕೂಡ ಮಳೆಯಿಂದ ರದ್ದುಗೊಂಡರೆ, ತಲಾ ಮೂರು ಅಂಕಗಳಿದ್ದರೂ ಕೂಡ ರನ್ರೇಟ್ ಆಧಾರದಲ್ಲಿ ಅಫ್ಘನ್ನರನ್ನು ಹಿಂದಿಕ್ಕಿ ಆಸ್ಟ್ರೇಲಿಯನ್ನರು ಸೆಮಿಫೈನಲ್ಗೆ ತಲುಪಲಿದ್ದಾರೆ.
#TeamIndia have arrived in St. Lucia! 🛬
— BCCI (@BCCI) June 24, 2024
Today they take on Australia in the their last Super 8 match 💪#T20WorldCup | #INDvAUS pic.twitter.com/mhwABUIEkD
ಭಾರತ ಸೋತು, ಅಫ್ಘಾನಿಸ್ತಾನ ಗೆದ್ದರೆ ಏನಾಗುತ್ತೆ?: ಒಂದು ವೇಳೆ ಭಾರತ ತಂಡ ಆಸೀಸ್ ವಿರುದ್ಧ ಸೋತು, ಅತ್ತ ಅಫ್ಘಾನಿಸ್ತಾನವೂ ಬಾಂಗ್ಲಾವನ್ನು ಮಣಿಸಿದರೆ, ಮತ್ತೆ ರನ್ರೇಟ್ ಲೆಕ್ಕಾಚಾರ ಶುರುವಾಗಲಿದೆ. ಯಾಕೆಂದರೆ, ಈ ಮೂರು ತಂಡಗಳು ತಲಾ 4 ಅಂಕ ಪಡೆಯಲಿವೆ. ಇದರಿಂದಾಗಿ ರನ್ ದರದಲ್ಲಿ ಅಗ್ರಸ್ಥಾನದಲ್ಲಿದ್ದವರು ಸೆಮೀಸ್ಗೆ ಎಂಟ್ರಿ ಕೊಡಲಿದ್ದಾರೆ.
ಪಾಯಿಂಟ್ ಲೆಕ್ಕಾಚಾರ: ಸೂಪರ್-8 ಹಂತದ ಎರಡೂ ಪಂದ್ಯ ಗೆದ್ದ ಭಾರತ 4 ಅಂಕಗಳೊಂದಿಗೆ +2.425 ರನ್ರೇಟ್ ಹೊಂದಿದೆ. ಇನ್ನೊಂದೆಡೆ ಒಂದೊಂದು ಪಂದ್ಯಗಳನ್ನು ಗೆದ್ದಿರುವ ಆಸ್ಟ್ರೇಲಿಯಾ (+0.223) ಹಾಗೂ ಅಫ್ಘಾನಿಸ್ತಾನ (-0.650) ತಂಡಗಳು ತಲಾ 2 ಪಾಯಿಂಟ್ಸ್ ಗಳಿಸಿದ್ದು, ರನ್ ರೇಟ್ನಲ್ಲಿ ಭಾರೀ ಅಂತರವಿದೆ. ಹೀಗಾಗಿ, ಅಫ್ಘಾನಿಸ್ತಾನಕ್ಕೆ ಬಾಂಗ್ಲಾ ವಿರುದ್ಧ ದೊಡ್ಡ ಅಂತರದ ಗೆಲುವು ಅನಿವಾರ್ಯವಿದೆ.
ಈಗಾಗಲೇ ಗ್ರೂಪ್ 2ರಿಂದ ಹಾಲಿ ಚಾಂಪಿಯನ್ ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಸೆಮಿಫೈನಲ್ ತಲುಪಿವೆ. ಗ್ರೂಪ್ 1ರಲ್ಲಿಯೂ ಕೂಡ ಇಂದಿನ ಪಂದ್ಯಗಳ ಫಲಿತಾಂಶಗಳಲ್ಲೇ ಸ್ಪಷ್ಟ ಚಿತ್ರಣ ಸಿಗಲಿದೆ.
ಪಂದ್ಯದ ಆರಂಭ: ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ
ಸ್ಥಳ: ಡರೆನ್ ಸಮಿ ರಾಷ್ಟ್ರೀಯ ಕ್ರಿಕೆಟ್ ಮೈದಾನ, ಗ್ರಾಸ್ ಐಲೆಟ್, ಸೇಂಟ್ ಲೂಸಿಯಾ
ಭಾರತದ ಸಂಭಾವ್ಯ 11ರ ಬಳಗ: ರೋಹಿತ್ ಶರ್ಮಾ(ನಾಯಕ), ವಿರಾಟ್ ಕೊಹ್ಲಿ, ರಿಷಭ್ ಪಂತ್(ವಿ.ಕೀ), ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ಅರ್ಷದೀಪ್ ಸಿಂಗ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ.
ಆಸ್ಟ್ರೇಲಿಯಾ ಸಂಭಾವ್ಯ ತಂಡ: ಟ್ರಾವಿಸ್ ಹೆಡ್, ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್ (ನಾಯಕ), ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯ್ನಿಸ್, ಟಿಮ್ ಡೇವಿಡ್, ಮ್ಯಾಥ್ಯೂ ವೇಡ್ (ವಿ.ಕೀ), ಪ್ಯಾಟ್ ಕಮಿನ್ಸ್, ಆಡಮ್ ಝಂಪಾ, ಜೋಶ್ ಹ್ಯಾಜಲ್‌ವುಡ್, ಮಿಚೆಲ್ ಸ್ಟಾರ್ಕ್
ಇದನ್ನೂ ಓದಿ: ಇಂದು ಭಾರತ vs ಆಸ್ಟ್ರೇಲಿಯಾ: ವಿಶ್ವಕಪ್ ಸೋಲಿನ ಸೇಡು ತೀರಿಸಿಕೊಳ್ಳುತ್ತಾ ಟೀಂ ಇಂಡಿಯಾ? - India vs Australia