ಹೈದರಾಬಾದ್: "ವಿರಾಟ್ ಕೊಹ್ಲಿಗೆ ಏನಾಗಿದೆ..?" ಇದು ಎಲ್ಲ ಅಭಿಮಾನಿಗಳನ್ನು ಕಾಡುತ್ತಿರುವ ಪ್ರಶ್ನೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ದ ಬ್ಯಾಟಿಂಗ್ ಕಿಂಗ್ ಕೊಹ್ಲಿ ಟಿ20 ವಿಶ್ವಕಪ್ನ ಆರಂಭಿಕ ಪಂದ್ಯಗಳಲ್ಲಿ ಠುಸ್ ಆಗಿದ್ದಾರೆ. ಇದು ತಂಡವನ್ನು ಸಂಕಷ್ಟಕ್ಕೂ ಸಿಲುಕಿಸಿದೆ.
ಐಪಿಎಲ್‌ನಂತೆಯೇ ಐಸಿಸಿ ಟೂರ್ನಿಯಲ್ಲೂ ಕೊಹ್ಲಿ ಮಿಂಚು ಹರಿಸಲಿದ್ದಾರೆ ಎಂದು ಭಾವಿಸಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಅವರ ಸತತ ವೈಫಲ್ಯದಿಂದ ತಂಡವೂ ಇಕ್ಕಟ್ಟಿಗೆ ಸಿಲಕುತ್ತಿದೆ. ವಿರಾಟ್ ಆಟದ ಬಗ್ಗೆ ಮಾಜಿ ಆಟಗಾರರು ಮತ್ತೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
1,4,0: ಇದು ಯಾವುದೋ ಸಹಾಯವಾಣಿಯ ನಂಬರ್ ಅಲ್ಲ. ಟಿ20 ವಿಶ್ವಕಪ್ನಲ್ಲಿ ವಿರಾಟ್ ಕೊಹ್ಲಿ ಈವರೆಗೆ ಆಡಿದ ಮೂರು ಪಂದ್ಯಗಳಲ್ಲಿ ಗಳಿಸಿದ ರನ್ ಸಂಖ್ಯೆ. ಕ್ರಿಕೆಟ್ ಶಿಶು ಐರ್ಲೆಂಡ್ ವಿರುದ್ಧದ ಮೊದಲ ಸೆಣಸಾಟದಲ್ಲಿ ಕೇವಲ 1 ರನ್ ಗಳಿಸಿ ಔಟಾಗಿದ್ದರು. ಹೈವೋಲ್ಟೇಜ್ ಪಂದ್ಯ ಪಾಕಿಸ್ತಾನದ ಎದುರು 4 ರನ್ ಗಳಿಸಿ ಭಾರೀ ನಿರಾಸೆ ಮೂಡಿಸಿದ್ದರು. ಕಳೆದ ವಿಶ್ವಕಪ್ನಲ್ಲಿ ಪಾಕ್ ವಿರುದ್ಧ ಏಕಾಂಗಿಯಾಗಿ ಹೋರಾಡಿ ಗೆಲುವು ತಂದಿದ್ದರು. ಕನಿಷ್ಠ ಪಕ್ಷ ಅಮೆರಿಕ ತಂಡದ ವಿರುದ್ಧವಾದರೂ ರನ್ ಗಳಿಸುತ್ತಾರೆ ಎಂದು ಭಾವಿಸಿದ್ದರೆ, 'ಗೋಲ್ಡನ್ ಡಕ್' ಔಟ್ ಆದರು.
ನ್ಯೂಯಾರ್ಕ್ ಪಿಚ್ ಬ್ಯಾಟರ್ಗಳಿಗೆ ತುಂಬಾ ಕಷ್ಟಕರವಾಗಿದೆ. ಆದರೆ, ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಇಂತಹ ಅನೇಕ ಪಿಚ್ಗಳಲ್ಲಿ ಬ್ಯಾಟ್ ಝಳಪಿಸಿದ್ದಾರೆ. ವಿಶ್ವಕಪ್ನಂತಹ ಮಹತ್ವದ ಟೂರ್ನಿಯಲ್ಲಿ ಅವರಿಂದ ಇಂತಹ ಕಳಪೆ ಪ್ರದರ್ಶನವನ್ನು ಅಭಿಮಾನಿಗಳು ನಿರೀಕ್ಷಿಸಿರಲಿಲ್ಲ. ಐಪಿಎಲ್ನಲ್ಲಿ ಅತ್ಯುತ್ತಮವಾಗಿ ಆಡಿದ ಕೊಹ್ಲಿಗೆ ವಿಶ್ವಕಪ್ನಲ್ಲಿ ಏನಾಯ್ತು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಚರ್ಚೆ ನಡೆಸುತ್ತಿದ್ದಾರೆ. ಇನ್ನು, ಲೀಗ್ನ ಕೊನೆಯ ಪಂದ್ಯವಾದ ಕೆನಡಾ ವಿರುದ್ಧವಾದರೂ ಚೇಸ್ ಮಾಸ್ಟರ್ ತಮ್ಮ ಲಯಕ್ಕೆ ಮರಳಬೇಕು ಎಂಬುದು ತಂಡ ಮತ್ತು ಅಭಿಮಾನಿಗಳ ಒತ್ತಾಸೆಯಾಗಿದೆ.
ಸೂಪರ್ 8ನಲ್ಲಿ ಪ್ರಬಲ ಸ್ಪರ್ಧೆ: ಇನ್ನು, ಭಾರತ ತಂಡ ಟಿ20 ವಿಶ್ವಕಪ್ನ ಎ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಆಡಿದ ಮೂರು ಪಂದ್ಯಗಳಲ್ಲಿ ಗೆದ್ದು 6 ಅಂಕ ಕಲೆಹಾಕಿದೆ. ಜೊತೆಗೆ ಸೂಪರ್ 8 ಹಂತದಲ್ಲಿ ಸ್ಥಾನ ಭದ್ರ ಮಾಡಿಕೊಂಡಿದೆ. ಈ ಹಂತದಲ್ಲಿ ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಎದುರಾಗಲಿದ್ದು, ಸ್ಪರ್ಧೆ ಕಠಿಣವಾಗಿರಲಿದೆ. ಈ ಹಿನ್ನೆಲೆಯಲ್ಲಿ ವಿರಾಟ್ ಕೊಹ್ಲಿ ಲಯಕ್ಕೆ ಬರುವುದು ಅತ್ಯವಶ್ಯಕವಾಗಿದೆ.
ವಿರಾಟ್ ಐಪಿಎಲ್ ಪ್ರದರ್ಶನ: ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಪರವಾಗಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ರನ್ಗಳ ಸುರಿಮಳೆ ಸುರಿಸಿದ್ದರು. ಆಡಿದ 15 ಪಂದ್ಯಗಳಲ್ಲಿ 741 ರನ್ ಗಳಿಸಿದ್ದರು. ಟೂರ್ನಿಯಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗಾರನಾಗಿ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡರು. ವಿಶ್ವಕಪ್ನಲ್ಲಿ ಕೊಹ್ಲಿ ಬ್ಯಾಟ್ ಮೌನವಾಗಿರುವುದು ನಿರಾಸೆಯ ವಿಷಯವಾಗಿದೆ.
ಇದನ್ನೂ ಓದಿ: 'ನ್ಯೂಯಾರ್ಕ್‌ನಲ್ಲಿ ಆಡುವುದು ಸುಲಭವಲ್ಲ'; ಯುಎಸ್ ವಿರುದ್ಧದ ಗೆಲುವಿನ ಬಗ್ಗೆ ರೋಹಿತ್ ಮಾತು - IND vs USA