ಹೊಸದಿಲ್ಲಿ: ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಭಾನುವಾರ ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಸೋಲನುಭವಿಸಿತು. ಈ ಬೇಸರದಲ್ಲಿ ಪಾಕ್ ಯುವ ವೇಗಿ ನಸೀಮ್ ಶಾ ಕಣ್ಣೀರು ಹಾಕಿದರು. ಪಂದ್ಯ ಸೋತ ನಂತರ ಅವರು ಅಳುತ್ತಲೇ ಮೈದಾನದಿಂದ ಹೊರಹೋಗುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪೆವಿಲಿಯನ್‌ಗೆ ಹಿಂತಿರುಗುವ ಸಂದರ್ಭದಲ್ಲಿ ಶಾಹೀನ್ ಶಾ ಅಫ್ರಿದಿ ಮತ್ತು ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಆ ಯುವ ವೇಗಿಯನ್ನು ಸಮಾಧಾನಪಡಿಸಿದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರೋಹಿತ್ ನೇತೃತ್ವದ ಭಾರತ, 19 ಓವರ್ಗಳಲ್ಲಿ 119 ರನ್ಗಳಿಗೆ ಆಲೌಟ್ ಆಯಿತು. ಈ ಸಾಧಾರಣ ಗುರಿ ಬೆನ್ನತ್ತಿದ ಪಾಕಿಸ್ತಾನ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 113 ರನ್ ಗಳಿಸಿ ಸೋಲು ಕಂಡಿತು.
ಅಂತಿಮ ಓವರ್‌ನಲ್ಲಿ ಪಾಕಿಸ್ತಾನಕ್ಕೆ ಗೆಲ್ಲಲು 18 ರನ್ ಬೇಕಿತ್ತು. ಅರ್ಷದೀಪ್ ಸಿಂಗ್ ಎಸೆದ ಈ ಓವರ್‌ನಲ್ಲಿ ನಸೀಮ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಈ ಬಲಗೈ ಆಟಗಾರ ಓವರ್‌ನ 4 ಮತ್ತು 5ನೇ ಎಸೆತವನ್ನು ಬೌಂಡರಿಗಟ್ಟಿ ತಂಡವನ್ನು ಗೆಲುವಿನ ಸನಿಹ ತಂದರು. ಆದರೆ, ಅರ್ಷದೀಪ್ ಅದ್ಭುತ ಬೌಲಿಂಗ್ ಅವರನ್ನು ಹೆಚ್ಚು ಹೊತ್ತು ಕ್ರೀಸಿನಲ್ಲಿ ಇರಲು ಬಿಡಲಿಲ್ಲ. ಕೊನೆಯ ಎರಡು ಎಸೆತಗಳಲ್ಲಿ ತಂಡದ ಗೆಲುವಿಗೆ 12 ರನ್‌ಗಳ ಅಗತ್ಯವಿತ್ತು. ಇದರಲ್ಲಿ ಪಾಕಿಸ್ತಾನ ಕೇವಲ 6 ರನ್ ಗಳಿಸಲಷ್ಟೇ ಶಕ್ತವಾಯಿತು. ನಸೀಮ್ 4 ಎಸೆತಗಳಲ್ಲಿ 10 ರನ್ ಗಳಿಸಿದರೂ ಗೆಲುವು ದಕ್ಕಲಿಲ್ಲ.
ಪಾಕ್ ಬಿಗು ಬೌಲರ್: ಹೈವೋಲ್ಟೇಜ್ ಪಂದ್ಯದಲ್ಲಿ ಪಾಕ್ ಬೌಲರ್ಗಳು ಉತ್ತಮ ಪ್ರದರ್ಶನ ನೀಡಿದರು. ನಸೀಮ್ ಶಾ 4 ಓವರ್ಗಳಲ್ಲಿ 23 ರನ್ ನೀಡಿ ಭಾರತ ತಂಡವನ್ನು ಕಟ್ಟಿ ಹಾಕಿದರು. ಇನ್ನುಳಿದಂತೆ ಹ್ಯಾರಿಸ್ ರೌಫ್ 3, ಮೊಹಮ್ಮದ್ ಅಮೀರ್ 2, ಶಾಹೀನ್ ಶಾ ಅಫ್ರಿದಿ 1 ವಿಕೆಟ್ ಪಡೆದರು. ತಾನಾಡಿರುವ ಎರಡೂ ಪಂದ್ಯಗಳನ್ನು ಕಳೆದುಕೊಂಡಿರುವ ಪಾಕಿಸ್ತಾನ ಗ್ರೂಪ್ ಹಂತದಲ್ಲೇ ಲೀಗ್ನಿಂದ ಹೊರಬೀಳುವ ಸಾಧ್ಯತೆ ಹೆಚ್ಚಿದೆ. ಈಗ ಸೂಪರ್ 8ಗೆ ಅರ್ಹತೆ ಪಡೆಯಲು ಪಾಕ್ ತಂಡ ಇತರ ತಂಡಗಳ ಫಲಿತಾಂಶಗಳನ್ನು ಅವಲಂಬಿಸಲೇಬೇಕಿದೆ.
ಇದನ್ನೂ ಓದಿ: ಪಂದ್ಯದ ಟಿಕೆಟ್ಗಾಗಿ ಟ್ರ್ಯಾಕ್ಟರ್ ಮಾರಿದ ಪಾಕ್ ಅಭಿಮಾನಿ: ಸೋಲಿನಿಂದ ತೀವ್ರ ಆಘಾತ - IND vs PAK