ಬ್ರಿಡ್ಜ್‌ಟೌನ್(ಬಾರ್ಬಡೋಸ್): ಟಿ20 ವಿಶ್ವಕಪ್‌ನ ಸೂಪರ್ 8 ಘಟ್ಟದಲ್ಲಿ ಇತ್ತೀಚಿಗೆ ಭಾರತ ತಂಡ ಅಫ್ಘಾನಿಸ್ತಾನವನ್ನು ಮಣಿಸಿದೆ. ಬ್ಯಾಟಿಂಗ್, ಬೌಲಿಂಗ್ ಜೊತೆಗೆ ಫೀಲ್ಡಿಂಗ್ನಲ್ಲೂ ಆಟಗಾರರು ಮಿಂಚು ಹರಿಸಿದ್ದರು. ಪ್ರತಿ ಪಂದ್ಯದ ನಂತರ ಡ್ರೆಸ್ಸಿಂಗ್ ರೂಂನಲ್ಲಿ ಟೀಂ ಇಂಡಿಯಾ ಆಟಗಾರರ ಪೈಕಿ ಒಬ್ಬರಿಗೆ 'ಬೆಸ್ಟ್ ಫೀಲ್ಡರ್' ಪದಕ ನೀಡುದ ಪದ್ಧತಿ ಇದೆ.
ಈ ಪದಕವನ್ನು ಪ್ರತಿ ಬಾರಿ ವಿಶೇಷ ಅತಿಥಿಯ ಮೂಲಕ ಹಸ್ತಾಂತರಿಸುವುದು ವಾಡಿಕೆ. ಈ ಬಾರಿ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಪದಕ ಪ್ರದಾನ ಮಾಡಿದ್ದು ವಿಶೇಷವಾಗಿತ್ತು. ಇದಕ್ಕೂ ಮುನ್ನ ಪದಕ ಪಡೆದವರು ಯಾರು ಎಂದು ಫೀಲ್ಡಿಂಗ್ ಕೋಚ್ ದಿಲೀಪ್ ವಿವರಣೆ ನೀಡುತ್ತಿದ್ದರು.
ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಎಲ್ಲರೂ ಉತ್ತಮವಾಗಿ ಫೀಲ್ಡಿಂಗ್ ಮಾಡಿದರು. ಮೈದಾನದಲ್ಲಿ ಆಕ್ರಮಣಕಾರಿ ಆಟ ಪ್ರದರ್ಶಿಸಿದರು. ಅಭ್ಯಾಸದ ಅವಧಿಯಲ್ಲಿ ಹೇಗೆ ಪ್ರದರ್ಶನ ನೀಡಿದ್ದರೂ ಅದರಂತೆಯೇ ಪಂದ್ಯಗಳಲ್ಲೂ ಎದುರಾಳಿಗಳ ಮೇಲೆ ಪ್ರಾಬಲ್ಯ ಮೆರೆದರು. ಈ ಬಾರಿ ನಾಲ್ವರು ಆಟಗಾರರು ಮೈದಾನದಲ್ಲಿ ತುಂಬೆಲ್ಲಾ ಕ್ರಿಯಾಶೀಲರಾಗಿದ್ದರು. ಅವರಷ್ಟೇ ಅಲ್ಲದೇ ಉಳಿದವರೂ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು ಎಂದುದಿಲೀಪ್ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಪೈಕಿ ನಮ್ಮ ಮೊದಲ ಸ್ಪರ್ಧಿ ಅರ್ಷದೀಪ್ ಸಿಂಗ್. ತಮ್ಮ ಕರ್ತವ್ಯಗಳನ್ನು ಅವರು ಬಹಳ ಶಿಸ್ತಿನಿಂದ ನಿರ್ವಹಿಸಿದ್ದಾರೆ. ಎರಡನೇ ಆಟಗಾರ ರವೀಂದ್ರ ಜಡೇಜಾ. ನಿರಂತರವಾಗಿ ಮೈದಾನದಲ್ಲಿ ಸಕ್ರಿಯರು. ಮೂರನೇ ಆಟಗಾರ ಅಕ್ಷರ್ ಪಟೇಲ್. ಅತ್ಯುತ್ತಮ ಕ್ಯಾಚ್ ಪಡೆದ ಆಟಗಾರ. ಅಂತಿಮವಾಗಿ, ನಾಲ್ಕು ವರ್ಷಗಳ ನಂತರ ಮೈದಾನಕ್ಕೆ ಕಾಲಿಟ್ಟ ರಿಷಬ್ ಪಂತ್ ಸರಣಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅವರು ಉತ್ತಮ ಕ್ಯಾಚ್‌ಗಳನ್ನು ಪಡೆದಿದ್ದಾರೆ ಎಂದು ಪ್ರೋತ್ಸಾಹಿಸಿದರು.
ಆದರೆ ಈ ಆಟಗಾರರಲ್ಲಿ ಒಬ್ಬರನ್ನು ಮಾತ್ರ ಆರಿಸಿಕೊಳ್ಳಬೇಕಾಗಿದೆ. ಹೀಗಾಗಿ ಈ ಪದಕ ರವೀಂದ್ರ ಜಡೇಜಾ ಅವರಿಗೆ ಪ್ರದಾನ ಮಾಡಲಾಗುತ್ತದೆ ಎಂದರು. ಈ ಘೋಷಣೆಯ ತಕ್ಷಣವೇ, ಪ್ರಶಸ್ತಿಯನ್ನು ಯಾರು ನೀಡುತ್ತಾರೆ ಎಂಬ ಕುತೂಹಲ ನಿಮ್ಮೆಲ್ಲರಿಗೂ ಇದೆಯಲ್ಲವೇ ಎಂದು ದಿಲೀಪ್ ಕೇಳಿದರು. ಇದಕ್ಕೆ ತಮಾಷೆ ಮಾಡಿದ ಆಟಗಾರರೊಬ್ಬರು, ಅಕ್ಷರ್ ಪಟೇಲ್ ಹೆಸರು ಹೇಳಿದಾಗ ಪಕ್ಕದಲ್ಲಿದ್ದ ವಿರಾಟ್ ಕೊಹ್ಲಿ ಬೆಚ್ಚಿ ಬೀಳುವಂತೆ ಫನ್ನಿ ಎಕ್ಸ್‌ಪ್ರೆಶನ್ ಕೊಟ್ಟರು.
ಹೊಸ ಅತಿಥಿ ಯಾರೆಂದು ಎಲ್ಲರೂ ಕಾಯುತ್ತಿದ್ದರು. ಆದರೆ 'ಅಲ್ಲಿ ಯಾರೂ ಇಲ್ಲ'. ಸದಾ ನಮ್ಮೊಂದಿಗಿರುವ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರೇ ಪದಕ ಪ್ರದಾನ ಮಾಡುತ್ತಾರೆ ಎಂದು ದಿಲೀಪ್ ಹೇಳಿದಾಗ, ಎಲ್ಲರೂ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. ಜಡ್ಡು, ದ್ರಾವಿಡ್ ಅವರಿಂದ ಪದಕ ಪಡೆದರು. ಈ ಸಂದರ್ಭದಲ್ಲಿ ಜಡೇಜಾ ಕೋಚ್ ಅವರನ್ನು ಮೇಲೆತ್ತಿ ಸಂಭ್ರಮಿಸಿದರು. ಫೀಲ್ಡಿಂಗ್ನಲ್ಲಿ ಸಿರಾಜ್ ಅವರೇ ನನಗೆ ಸ್ಫೂರ್ತಿ ಎಂದು ಜಡೇಜಾ ಹೇಳಿದರು.
ಇದನ್ನೂ ಓದಿ: ಭಾರತ - ಅಫ್ಘಾನಿಸ್ತಾನ್ ಪಂದ್ಯ: ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಸೂರ್ಯಕುಮಾರ್ ಯಾದವ್ - Unique Record Equals