ಹೈದರಾಬಾದ್/ಮುಂಬೈ: ಟಿ20 ಕ್ರಿಕೆಟ್ನ ನಂಬರ್ 1 ಬ್ಯಾಟರ್ ಸೂರ್ಯಕುಮಾರ್ ಯಾದವ್ ಗಾಯದ ಸಮಸ್ಯೆಯಿಂದಾಗಿ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನ ಆರಂಭಿಕ ಪಂದ್ಯಗಳಿಂದ ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ. ಪಾದದ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಸೂರ್ಯ ಹಲವು ತಿಂಗಳಿನಿಂದ ಕ್ರಿಕೆಟ್ನಿಂದ ದೂರವಿದ್ದಾರೆ.
ಮುಂಬೈ ತಂಡದ ಮುಖ್ಯ ಕೋಚ್ ಮಾರ್ಕ್ ಬೌಚರ್ ಪತ್ರಿಕಾಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ಶಸ್ತ್ರಚಿಕಿತ್ಸೆಯ ಬಳಿಕ ಚೇತರಿಸಿಕೊಳ್ಳುತ್ತಿರುವ ಸೂರ್ಯಕುಮಾರ್ ಈ ಋತುವಿನಲ್ಲಿ ಗುಜರಾತ್ ವಿರುದ್ಧದ ಮೊದಲ ಪಂದ್ಯದಲ್ಲಿ ಲಭ್ಯರಾಗುವ ಬಗ್ಗೆ ಇನ್ನಷ್ಟೇ ಮಾಹಿತಿ ಸಿಗಬೇಕಿದೆ. ವೈದ್ಯರ ವರದಿಯ ಮೇರೆಗೆ ಅವರು ಕಣಕ್ಕಿಳಿಯಲಿದ್ದಾರೆ ಎಂದು ತಿಳಿಸಿದ್ದಾರೆ.
ಬಿಸಿಸಿಐ ವೈದ್ಯಕೀಯ ತಂಡವು ಬ್ಯಾಟರ್ ಫಿಟ್ನೆಸ್ ಕುರಿತ ಅಂತಿಮ ವರದಿಗಾಗಿ ಕಾಯುತ್ತಿದ್ದೇವೆ. ಆಟಗಾರರ ಫಿಟ್ನೆಸ್ ಪ್ರಮುಖವಾದುದು. ವಿಶ್ವ ದರ್ಜೆಯ ವೈದ್ಯಕೀಯ ತಂಡವನ್ನು ನಾವು ಹೊಂದಿದ್ದೇವೆ. ಹೀಗಾಗಿ ಸೂರ್ಯಕುಮಾರ್ ಆಡುವ ಬಗ್ಗೆ ಅವರ ನಿರ್ಣಯವೇ ಅಂತಿಮವಾಗಿರುತ್ತದೆ ಎಂದು ಹೇಳಿದ್ದಾರೆ.
ವೈದ್ಯರ ಸಲಹೆಯೇ ಅಂತಿಮ: ತಂಡದ ಕೋಚ್ ಆಗಿ ನಾನು ಎಲ್ಲ ಆಟಗಾರರು ಆಡಲಿ ಎಂದು ಬಯಸುತ್ತೇನೆ. ಎಲ್ಲಾ ಪಂದ್ಯಗಳಲ್ಲಿ ಅತ್ಯುತ್ತಮ ಆಟಗಾರರು ಕಣಕ್ಕಿಳಿದರೆ, ಫಲಿತಾಂಶ ತಂಡದ ಪರವಾಗಿರಲಿದೆ. ಆದರೆ, ಗಾಯದ ಸಮಸ್ಯೆ ಆಟಕ್ಕೂ ಮೀರಿದ್ದಾಗಿದೆ. ವೈದ್ಯಕೀಯ ತಂಡದ ಸಲಹೆಯ ಮೇರೆಗೆ ಗಾಯಾಳು ಆಟಗಾರರ ಆಡಿಸುವ ತೀರ್ಮಾನ ಮಾಡಲಾಗುವುದು ಎಂದರು.
ಬಲಗೈ ಬ್ಯಾಟರ್ ಸೂರ್ಯಕುಮಾರ್ ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಆಟಗಾರರಾಗಿದ್ದಾರೆ. 5 ಬಾರಿಯ ಚಾಂಪಿಯನ್ ತಂಡದ ಪರವಾಗಿ ಮತ್ತೊಮ್ಮೆ ನಿರ್ಣಾಯಕ ಪಾತ್ರವನ್ನು ವಹಿಸುವ ನಿರೀಕ್ಷೆಯಿದೆ. ರೋಹಿತ್ ಶರ್ಮಾ ಬದಲಿಗೆ ನೂತನ ನಾಯಕರಾಗಿ ಆಯ್ಕೆಯಾಗಿರುವ ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿ ತಂಡ ಈ ಬಾರಿ ಕಣಕ್ಕಿಳಿಯಲಿದೆ. ಅಗ್ರ ಕ್ರಮಾಂಕದಲ್ಲಿ ರೋಹಿತ್ ಶರ್ಮಾ, ತಿಲಕ್ ವರ್ಮಾ ಮತ್ತು ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಬ್ಯಾಟಿಂಗ್ ಆಧಾರಸ್ತಂಭವಾಗಿದ್ದರೆ, ಮಧ್ಯಮ ಕ್ರಮಾಂದಲ್ಲಿ ಸೂರ್ಯ ಗಟ್ಟಯಾಗಿ ನೆಲೆಯೂರಬೇಕಿದೆ.
ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ನಡುವೆ ಮಾರ್ಚ್ 24 ರಂದು ಗುಜರಾತ್ನ ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಮಾರ್ಚ್ 22 ರಿಂದ 17ನೇ ಆವೃತ್ತಿಯ ಐಪಿಎಲ್ ಆರಂಭವಾಗಲಿದ್ದು, ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ.
ಇದನ್ನೂ ಓದಿ: ಐಪಿಎಲ್ಗೂ ಮುನ್ನ ಮಹಾಕಾಲ್ ದರ್ಶನ ಪಡೆದ ಕೆಎಲ್; ಭಸ್ಮಾರತಿಯಲ್ಲಿ ಪಾಲ್ಗೊಂಡು ಭಾವುಕರಾದ ರಾಹುಲ್