ನವದೆಹಲಿ: ಭಾರತ ಫುಟ್ಬಾಲ್ ತಂಡದ ಸ್ಟಾರ್ ಆಟಗಾರ ಮತ್ತು ನಾಯಕ ಸುನಿಲ್ ಛೆಟ್ರಿ ಅಂತಾರಾಷ್ಟ್ರೀಯ ಫುಟ್ಬಾಲ್ಗೆ ನಿವೃತ್ತಿ ಘೋಷಿಸಿದ್ದಾರೆ. ಇದೇ ಜೂ.6ರಂದು ಕುವೈತ್ ವಿರುದ್ಧದ ಫಿಫಾ ವಿಶ್ವಕಪ್ ಅರ್ಹತಾ ಪಂದ್ಯದ ನಂತರ ಅವರು ಅಂತಾರಾಷ್ಟ್ರೀಯ ಫುಟ್ಬಾಲ್ಗೆ ವಿದಾಯ ಹೇಳಲಿದ್ದಾರೆ.
ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ವಿಡಿಯೋ ಮೂಲಕ ಮಾಹಿತಿ ಹಂಚಿಕೊಂಡಿರುವ ಅವರು, ಕುವೈತ್ ವಿರುದ್ಧ ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಲಿದೆ ಎಂದು ತಿಳಿಸಿ ನಿವೃತ್ತಿ ಬಗ್ಗೆ ಮಾತನಾಡಿದ್ದಾರೆ.
39 ವರ್ಷದ ಛೆಟ್ರಿ ಭಾರತಕ್ಕಾಗಿ 150 ಪಂದ್ಯಗಳನ್ನು ಆಡಿದ್ದಾರೆ. ತಮ್ಮ 20 ವರ್ಷಗಳ ಸುಧೀರ್ಘವಾದ ಫುಟ್ಬಾಲ್ ಪ್ರಯಾಣದಲ್ಲಿ 94 ಗೋಲುಗಳನ್ನು ಗಳಿಸಿದ್ದಾರೆ. 150ನೇ ಪಂದ್ಯ ಅಫ್ಘಾನಿಸ್ತಾನ ವಿರುದ್ಧ ಆಡಿದ್ದ ಛೆಟ್ರಿ 1 ಗೋಲು ಗಳಿಸಿದ್ದರು. ಆದರೆ ಆ ಪಂದ್ಯದಲ್ಲಿ ಭಾರತ 1-2 ಅಂತರದಿಂದ ಸೋಲನುಭವಿಸಿತ್ತು.
ಪ್ರಸ್ತುತ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತೀ ಹೆಚ್ಚು ಗೋಲು ಗಳಿಸಿದವರ ಪಟ್ಟಿಯಲ್ಲಿ ಛೆಟ್ರಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಇವರ ಮುಂಚಿತ ಸ್ಥಾನಗಳಲ್ಲಿ ಕ್ರಿಸ್ಟಿಯಾನೋ ರೊನಾಲ್ಡೊ (128), ಅಲಿ ದಾಯಿ (108), ಲಿಯೊನೆಲ್ ಮೆಸ್ಸಿ (106) ಇದ್ದಾರೆ.
ಛೆಟ್ರಿ ವೃತ್ತಿ ಜೀವನ: ಸುನಿಲ್ ಛೆಟ್ರಿ 12 ಜೂನ್ 2005 ರಂದು ಅಂತಾರಾಷ್ಟ್ರೀಯ ಫುಟ್ಬಾಲ್ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ್ದರು. ತಮ್ಮ ಮೊದಲ ಪಂದ್ಯವನ್ನು ಪಾಕಿಸ್ತಾನದ ವಿರುದ್ಧ ಆಡಿದ್ದರು. ಈ ಪಂದ್ಯದಲ್ಲಿಯೇ ಅವರು ತಮ್ಮ ಮೊದಲ ಅಂತಾರಾಷ್ಟ್ರೀಯ ಗೋಲು ಕೂಡ ಗಳಿಸಿದ್ದರು.
ಪ್ರಶಸ್ತಿ: ಛೆಟ್ರಿ ಅವರು ತಮ್ಮ ವೃತ್ತಿಜೀವನದಲ್ಲಿ ಆರು ಬಾರಿ AIFF ವರ್ಷದ ಆಟಗಾರ ಪ್ರಶಸ್ತಿಯನ್ನು ಪಡೆದಿದ್ದಾರೆ. ಇದಲ್ಲದೆ, 2011 ರಲ್ಲಿ ಅರ್ಜುನ ಪ್ರಶಸ್ತಿ ಮತ್ತು 2019 ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಗಿದೆ.
ಇದನ್ನೂ ಓದಿ: ಟಿ20 ವಿಶ್ವಕಪ್: ಸ್ಕಾಟ್ಲೆಂಡ್ ಕ್ರಿಕೆಟಿಗರ ತೋಳಿನಲ್ಲಿ ನಂದಿನಿ ಲಾಂಛನ, ಜೆರ್ಸಿ ಬಿಡುಗಡೆ - Nandini