ಹೈದರಾಬಾದ್: ಟಿ-20 ವಿಶ್ವಕಪ್ ಗೆಲುವಿನ ಬಳಿಕ ಜಿಂಬಾಬ್ವೆ ಪ್ರವಾಸದಲ್ಲಿರುವ ಭಾರತ ಕ್ರಿಕೆಟ್ ತಂಡ, ಈ ತಿಂಗಳ ಕೊನೆಯಲ್ಲಿ ಟಿ-20 ಮತ್ತು ಏಕದಿನ ಸರಣಿ ಆಡಲು ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ಪಂದ್ಯಗಳ ಆತಿಥ್ಯ ವಹಿಸಲು ಪಲ್ಲಕೆಲೆ ಮತ್ತು ಕೊಲಂಬೊ ಕ್ರೀಡಾಂಗಣಗಳನ್ನು ಆಯ್ಕೆ ಮಾಡಲಾಗಿದೆ.
🚨 NEWS 🚨
— BCCI (@BCCI) July 11, 2024
Fixtures for the upcoming India tour of Sri Lanka announced! 📢#TeamIndia | #SLvIND pic.twitter.com/oBCZn0PlmK
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಜುಲೈ 26 ರಿಂದ ಪ್ರಾರಂಭವಾಗುವ ವೈಟ್ ಬಾಲ್ ಸರಣಿಗೆ ಗುರುವಾರ ಕ್ರೀಡಾಂಗಣಗಳನ್ನು ಅಖೈರು ಮಾಡಲಾಗಿದೆ ಎಂದು ಪ್ರಕಟಿಸಿದೆ. ಪಲ್ಲಕೆಲೆಯಲ್ಲಿ ಮೂರು ಪಂದ್ಯಗಳ ಟಿ-20 ಸರಣಿ ನಡೆಯಲಿದೆ. ಮೊದಲ ಪಂದ್ಯ ಜುಲೈ 26 ರಂದು ನಡೆಯಲಿದೆ. ಎರಡನೇ ಪಂದ್ಯ ಜುಲೈ 27, ಮೂರನೇ ಮತ್ತು ಕೊನೆಯ ಪಂದ್ಯ ಜುಲೈ 29 ರಂದು ನಡೆಯಲಿದೆ. ಎಲ್ಲವೂ ಭಾರತೀಯ ಕಾಲಮಾನ ರಾತ್ರಿ 7 ಗಂಟೆಗೆ ಪ್ರಾರಂಭವಾಗಲಿವೆ.
ಕೊಲಂಬೋದಲ್ಲಿ ಏಕದಿನ ಸರಣಿ: ಟಿ20 ಸರಣಿ ಬಳಿಕ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಆಗಸ್ಟ್ 1 ರಂದು ಮೊದಲ ಏಕದಿನ, ಆಗಸ್ಟ್ 4 ರಂದು ಎರಡನೇ, ಆಗಸ್ಟ್ 7 ರಂದು ಮೂರನೇ ಪಂದ್ಯ ಆಯೋಜಿಸಲಾಗಿದೆ. ಎಲ್ಲವೂ ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯಲಿವೆ. ಪಂದ್ಯಗಳು ಮಧ್ಯಾಹ್ನ 2.30 ಕ್ಕೆ ಪ್ರಾರಂಭವಾಗಲಿವೆ. ತಂಡದ ಸ್ಟಾರ್ ಬ್ಯಾಟರ್‌ಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಿಗೆ ಏಕದಿನ ಪ್ರವಾಸಕ್ಕೆ ವಿಶ್ರಾಂತಿ ನೀಡಬಹುದು ಎಂದು ಹೇಳಲಾಗಿದೆ. ಟೆಸ್ಟ್ ಪಂದ್ಯಗಳಿಗೆ ಹೆಚ್ಚಿನ ಮಹತ್ವ ನೀಡಬೇಕಿರುವ ಕಾರಣ ಅವರಿಗೆ ಸರಣಿಯಿಂದ ಹೊರಗಿಡುವ ಸಾಧ್ಯತೆ ಇದೆ.
ಹೊಸ ಕೋಚ್ ಗಂಭೀರ್‌ಗೆ ಮೊದಲ ಪರೀಕ್ಷೆ: ಶ್ರೀಲಂಕಾ ಪ್ರವಾಸದಲ್ಲಿ ತಂಡವನ್ನು ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಮುನ್ನಡೆಸುವ ಸಾಧ್ಯತೆ ಇದೆ. ಅವರು ಟಿ-20 ವಿಶ್ವಕಪ್ ಗೆದ್ದ ಭಾರತ ತಂಡದ ಉಪನಾಯಕರಾಗಿದ್ದರು. ಹೀಗಾಗಿ ಈ ಸರಣಿಗೆ ಹಾರ್ದಿಕ್ ನಾಯಕತ್ವ ವಹಿಸುವ ಸುಳಿವಿದೆ.
ಇತ್ತ ಮಾಜಿ ಕೋಚ್ ರಾಹುಲ್ ದ್ರಾವಿಡ್ ಬಳಿಕ ಭಾರತ ತಂಡದ ಹೊಸ ಮುಖ್ಯ ಕೋಚ್ ಆಗಿ ಆಯ್ಕೆಯಾಗಿರುವ ಗೌತಮ್ ಗಂಭೀರ್‌ಗೆ ಇದು ಮೊದಲ ಸರಣಿಯಾಗಿದೆ. ಅಧಿಕೃತವಾಗಿ ಅವರು ಈ ಸರಣಿಯ ಮೂಲಕ ಕೋಚ್ ಹುದ್ದೆಯನ್ನು ಅಲಂಕರಿಸಲಿದ್ದಾರೆ. ಟೀಮ್ ಇಂಡಿಯಾದ ಮೇಲಿನ ಬೆಟ್ಟದಂಥ ನಿರೀಕ್ಷೆಗಳನ್ನು ಅವರು ಈಡೇರಿಸಬೇಕಿದೆ.
ಸದ್ಯ ಭಾರತ ಯುವ ತಂಡವು ಜಿಂಬಾಬ್ವೆ ಪ್ರವಾಸದಲ್ಲಿದ್ದು, ಐದು ಪಂದ್ಯಗಳ ಟಿ20 ಸರಣಿ ಆಡುತ್ತಿದೆ. ಈ ಸರಣಿಯಲ್ಲಿ ಹಾರ್ದಿಕ್, ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್ ಸೇರಿದಂತೆ ಎಲ್ಲಾ ಹಿರಿಯ ಆಟಗಾರರಿಗೆ ಆಯ್ಕೆ ಸಮಿತಿ ವಿಶ್ರಾಂತಿ ನೀಡಿದೆ. ಮುಂದಿನ ವಾರ ಶ್ರೀಲಂಕಾ ಸರಣಿಗೆ ತಂಡವನ್ನು ಪ್ರಕಟವಾಗಲಿದೆ.
ಇದನ್ನೂ ಓದಿ: 'ಟೆಸ್ಟ್‌ನಲ್ಲಿ 400 ರನ್ ಗಳಿಸುವ ಸಾಮರ್ಥ್ಯ ಇವರಿಬ್ಬರಲ್ಲಿದೆ': ರೋಹಿತ್, ವಿರಾಟ್ ಅಲ್ಲ! - Brian Lara