ಚೆನ್ನೈ: 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫೈನಲ್ ಹಂತಕ್ಕೆ ತಲುಪಿದ್ದು, ಇಂದು ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಸನ್ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಎಚ್) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್(ಕೆಕೆಆರ್) ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ. ಎರಡೂ ತಂಡಗಳು ಮಾಜಿ ಚಾಂಪಿಯನ್ಗಳಾಗಿದ್ದು, ಈ ಬಾರಿಯ ಪ್ರಶಸ್ತಿ ಗೆಲ್ಲುವ ತಂಡ ಯಾವುದು ಎಂಬ ಕುತೂಹಲ ಮೂಡಿದೆ.
ಈ ರೋಚಕ ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಶೇನ್ ವ್ಯಾಟ್ಸನ್ ದೊಡ್ಡ ಭವಿಷ್ಯ ನುಡಿದಿದ್ದಾರೆ. ವಾಸ್ತವವಾಗಿ ಐಪಿಎಲ್ 2024 ಟ್ರೋಫಿ ಗೆಲ್ಲುವ ತಂಡವನ್ನು ಹೆಸರಿಸಿದ್ದಾರೆ. ಈ ಕುರಿತು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡಿರುವ ಅವರು ಇದರಲ್ಲಿ ಗೆಲ್ಲುವ ತಂಡವನ್ನು ಘೋಷಿಸಿದ್ದಾರೆ. "ಚೆಪಾಕ್ ಮೈದಾನದಲ್ಲಿ ನಡೆಯುವ ಫೈನಲ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಕೋಲ್ಕತ್ತಾ ನೈಟ್ ರೈಡರ್ಸ್ ಸೋಲಿಸುವ ಮೂಲಕ ಪ್ರಶಸ್ತಿಯನ್ನು ಗೆಲ್ಲಲಿದೆ ಎಂದು ವ್ಯಾಟ್ಸನ್ ಅಭಿಪ್ರಾಯಪಟ್ಟಿದ್ದಾರೆ.
ಪ್ರಸಕ್ತ ಋತುವಿನಲ್ಲಿ ಪ್ರಬಲ ತಂಡವಾಗಿರುವ ಕೆಕೆಆರ್ ಕ್ವಾಲಿಫೈಯರ್ 1 ರಲ್ಲಿ ಅದ್ಭುತ ಬೌಲಿಂಗ್ ಮಾಡಿ, ಹೈದರಾಬದ್ ಅನ್ನು ಮಣಿಸಿತ್ತು. ಅಲ್ಲದೆ ವೇಗಿ ಮಿಚೆಲ್ ಸ್ಟಾರ್ಕ್ ಸೇರಿದಂತೆ ಸುನಿಲ್ ನರೈನ್ ಮತ್ತು ವರುಣ್ ಚಕ್ರವರ್ತಿಯಂತಹ ಶ್ರೇಷ್ಠ ಸ್ಪಿನ್ ಬೌಲರ್‌ಗಳನ್ನು ಹೊಂದಿದೆ. ಆಲ್ರೌಂಡರ್ ಆಂಡ್ರೆ ರಸೆಲ್ರಂತಹ ಸ್ಫೋಟಕ ಆಟಗಾರರನ್ನು ತಂಡ ಹೊಂದಿದೆ. ಅದಕ್ಕಾಗಿಯೇ ಕೆಕೆಆರ್ ಟ್ರೋಫಿ ಗೆಲ್ಲುವ ನನ್ನ ನೆಚ್ಚಿನ ತಂಡವಾಗಿದೆ ಎಂದು ಹೇಳಿದ್ದಾರೆ.
ಕೋಲ್ಕತ್ತಾ ನೈಟ್ ರೈಡರ್ಸ್ ಲೀಗ್ ಹಂತದಲ್ಲಿ 14 ಪಂದ್ಯಗಳನ್ನು ಆಡಿ 9 ಪಂದ್ಯಗಳನ್ನು ಗೆದ್ದಿದೆ ಮತ್ತು ಕೇವಲ 3 ಪಂದ್ಯಗಳಲ್ಲಿ ಸೋತಿದೆ. ಕೆಕೆಆರ್‌ನ 2 ಪಂದ್ಯಗಳು ಮಳೆಯಿಂದಾಗಿ ರದ್ದಾಗಿದ್ದವು. ಇದರ ಹೊರತಾಗಿಯೂ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.
ಕ್ವಾಲಿಫೈಯರ್ 1 ರಲ್ಲೂ ಸನ್ ರೈಸರ್ಸ್ ಮೇಲೆ ಪ್ರಾಬಲ್ಯ ಸಾಧಿಸಿ ಗೆಲುವು ಸಾಧಿಸಿತ್ತು. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದಿದ್ದ ಪಂದ್ಯದಲ್ಲಿ ಸನ್ ರೈಸರ್ಸ್ ತಂಡವನ್ನು 8 ವಿಕೆಟ್ ಗಳಿಂದ ಸೋಲಿಸಿ ಜಯಭೇರಿ ಸಾಧಿಸಿತ್ತು.
ಇದನ್ನೂ ಓದಿ: ಚೆನ್ನೈನಲ್ಲಿಂದು IPL ಫೈನಲ್: ಪೈಪೋಟಿಗೆ ಹೈದರಾಬಾದ್-ಕೋಲ್ಕತ್ತಾ ರೆಡಿ; ಕೌನ್ ಬನೇಗಾ ಚಾಂಪಿಯನ್? - IPL Final