ರಾಜ್‌ಕೋಟ್(ಗುಜರಾತ್): ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಭಾರತದ ಯುವ ಆಟಗಾರ ಸರ್ಫರಾಜ್ ಖಾನ್ ಇಂದು ಪಾದಾರ್ಪಣೆ ಮಾಡಿದ್ದಾರೆ. ಇದರೊಂದಿಗೆ ತಮ್ಮ ಬಹುದಿನಗಳ ಕಾಯುವಿಕೆಗೆ ಕೊನೆ ಹಾಡಿರುವ ಈ ಬ್ಯಾಟರ್ ಚೊಚ್ಚಲ ಪಂದ್ಯವನ್ನೇ ಸ್ಮರಣೀಯವಾಗಿಸಿಕೊಂಡರು. ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಮೂಲಕ ಮೊದಲ ಪಂದ್ಯವನ್ನಾಡಿದ ಬಲಗೈ ದಾಂಡಿಗ ವೇಗದ ಅರ್ಧಶತಕ ಸಿಡಿಸಿ ದಾಖಲೆಯ ಪುಟದಲ್ಲಿ ತಮ್ಮ ಹೆಸರು ಸೇರಿಸಿದರು.
ಇಲ್ಲಿನ ಸೌರಾಷ್ಟ್ರ ಕ್ರಿಕೆಟ್ ಮೈದಾನದಲ್ಲಿ ಭಾರತ-ಇಂಗ್ಲೆಂಡ್ ನಡುವೆ ಮೂರನೇ ಟೆಸ್ಟ್ ನಡೆಯುತ್ತಿದೆ. ಭಾರತ ತಂಡದಲ್ಲಿ ಅವಕಾಶ ಸಿಗದೇ ಹೊರಗುಳಿದಿದ್ದ ಸರ್ಫರಾಜ್ ಖಾನ್ ಕೊನೆಗೂ ಎಂಬಂತೆ ಹನ್ನೊಂದರ ಬಳಗದ ಸದಸ್ಯರಾಗಿ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಬೆಳಗ್ಗೆ ಟೀಂ ಇಂಡಿಯಾ ಪರ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ ಸರ್ಫರಾಜ್, ಮಾಜಿ ನಾಯಕ ಅನಿಲ್ ಕುಂಬ್ಳೆ ಅವರಿಂದ ತಂಡದ ಕ್ಯಾಪ್ ಧರಿಸಿಕೊಂಡರು.
ಭಾರತ ತಂಡದ ಕ್ಯಾಪ್ ಸ್ವೀಕರಿಸುತ್ತಿದ್ದಂತೆ ಸರ್ಫರಾಜ್ ಭಾವುಕರಾದರು. ಮೈದಾನದಿಂದ ಹೊರಗೆ ನಿಂತಿದ್ದ ತಮ್ಮ ತಂದೆ ಬಳಿಗೆ ಓಡಿ ಹೋದರು. ಮಗನ ಚೊಚ್ಚಲ ಕ್ಯಾಪ್ಗೆ ಮುತ್ತಿಟ್ಟು ಕಣ್ಣೀರಾದ ಅಪ್ಪ, ಮಗನನ್ನು ತಬ್ಬಿಕೊಂಡು ಅಭಿನಂದಿಸಿ ಹೆಮ್ಮೆಪಟ್ಟರು. ಈ ಕ್ಷಣ ಉಭಯ ತಂಡಗಳ ಆಟಗಾರರು ಹಾಗೂ ಮೈದಾನದಲ್ಲಿ ನೆರೆದಿದ್ದ ಕ್ರಿಕೆಟ್‌ಪ್ರಿಯರ ಮನ ಗೆದ್ದಿತ್ತು. ಹೀಗೆ ಭಾವನಾತ್ಮಕ ಕ್ಷಣದೊಂದಿಗೆ ಮೊದಲ ಪಂದ್ಯಕ್ಕೆ ಅಡಿಯಿಟ್ಟ ಸರ್ಫರಾಜ್ ದಿನದಾಟ ಮುಗಿಯುವ ವೇಳೆಗೆ ತಮ್ಮ ಬ್ಯಾಟಿಂಗ್ ಮೂಲಕವೂ ಕ್ರಿಕೆಟ್ ಅಭಿಮಾನಿಗಳ ಹೃದಯ ಗೆದ್ದರು!.
ಇದನ್ನೂ ಓದಿ: ಕೊನೆಗೂ 'ಟೆಸ್ಟ್' ಪಾಸ್ ಆದ ಸರ್ಫರಾಜ್; ಮೈದಾನದಲ್ಲಿ ಭಾವುಕ ಅಪ್ಪನಿಗೆ ಮಗನ ಅಪ್ಪುಗೆ
ಚೊಚ್ಚಲ ಪಂದ್ಯದಲ್ಲೇ ಸರ್ಫರಾಜ್ ದಾಖಲೆ: ಇಂದಿನ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಆರನೇ ಆಟಗಾರರಾಗಿ ಸರ್ಫರಾಜ್ ಮೈದಾನಕ್ಕಿಳಿದರು. ಆರಂಭದಲ್ಲಿ ಕೊಂಚ ವಿಚಲಿತರಾದಂತೆ ಕಂಡು ಬಂದರೂ ನಂತರ ತಮ್ಮ ಬ್ಯಾಟಿಂಗ್ ಮೂಲಕ ಕಮಾಲ್ ಮಾಡಿದರು. 66 ಎಸೆತಗಳಲ್ಲಿ 62 ರನ್ ಗಳಿಸಿದ್ದ ಸರ್ಫರಾಜ್ ರನೌಟ್ಗೆ ಬಲಿಯಾಗಿದರು. ಆದರೆ, ಚೊಚ್ಚಲ ಪಂದ್ಯದಲ್ಲೇ ಏಕದಿನ ಮತ್ತು ಟಿ-20 ಮಾದರಿಯಲ್ಲಿ ಬ್ಯಾಟ್ ಬೀಸಿ ಗಮನ ಸೆಳೆದರು.
ಆಂಗ್ಲ ಬೌಲರ್‌ಗಳ ಎಸೆತಗಳನ್ನು ಬಲಗೈ ಬ್ಯಾಟರ್ ಲೀಲಾಜಾಲವಾಗಿ ಎದುರಿಸಿದರು. ಅಲ್ಲದೇ, ಅವಕಾಶ ಸಿಕ್ಕಾಗಲೆಲ್ಲಾ ಬೌಲರ್ಗಳನ್ನು ದಂಡಿಸುವ ಮೂಲಕ ಚೆಂಡನ್ನು ಬೌಂಡರಿ ಗೆರೆ ಪಾರು ಮಾಡುತ್ತಿದ್ದರು. ಹೀಗೆ ಬೌಲರ್‌ಗಳ ಮೇಲೆ ದಾಳಿ ಮಾಡಿ ವೇಗವಾಗಿ ರನ್ ಪೇರಿಸಿದ ಸರ್ಫರಾಜ್ ಕೇವಲ 48 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. ಈ ಮೂಲಕ ತಮ್ಮ ಬಹುನಿರೀಕ್ಷಿತ ಚೊಚ್ಚಲ ಪಂದ್ಯವನ್ನು ಸ್ಮರಣೀಯವಾಗಿಸಿಕೊಂಡರು.
ತಮ್ಮ ಮೊದಲ ಪಂದ್ಯದಲ್ಲೇ ಸರ್ಫರಾಜ್ರಿಂದ ಮೂಡಿ ಬಂದ ವೇಗವಾದ ಅರ್ಧಶತಕ ಇದಾಗಿದೆ. ಇದು ದಾಖಲೆಯ ಪುಟವನ್ನೂ ಸೇರಿಸಿದೆ. ಭಾರತದ ಪರ ಪಾದಾರ್ಪಣೆ ಪಂದ್ಯದಲ್ಲಿ ವೇಗವಾಗಿ ಅರ್ಧಶತಕ ಬಾರಿಸಿದ ಆಗ್ರ ಆಟಗಾರರಲ್ಲಿ ಸರ್ಫರಾಜ್ ಒಬ್ಬರು. 1934ರಲ್ಲಿ ಇಂಗ್ಲೆಂಡ್ ವಿರುದ್ಧ ಕೇವಲ 42 ಎಸೆತಗಳಲ್ಲಿ ಪಟಿಯಾಲದ ಯುವರಾಜ್ 48 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ಮೊದಲ ಸ್ಥಾನದಲ್ಲಿದ್ದಾರೆ.
ಹಾರ್ದಿಕ್ ಪಾಂಡ್ಯ ತಮ್ಮ ಚೊಚ್ಚಲ ಪಂದ್ಯದಲ್ಲಿ ಕೇವಲ 48 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ದಾಖಲೆ ಹೊಂದಿದ್ದಾರೆ. ಈಗ ಸರ್ಫರಾಜ್ ಅಷ್ಟೇ ಎಸೆತಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಇಬ್ಬರೂ ಬ್ಯಾಟರ್ಗಳು ಕೇವಲ 48 ಎಸೆತಗಳಲ್ಲಿ ಈ ಮೈಲುಗಲ್ಲು ಸಾಧಿಸಿದ ಕಾರಣ ಸರ್ಫರಾಜ್ ಎರಡನೇ ಸ್ಥಾನ ಹಂಚಿಕೊಂಡಿದ್ದಾರೆ. 2013ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಶಿಖರ್ ಧವನ್ 50 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ನಾಲ್ಕನೇ ಸ್ಥಾನದಲ್ಲಿದ್ದಾರೆ. 2018ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 56 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದ ಪೃಥ್ವಿ ಶಾ ಐದನೇ ಸ್ಥಾನ ಹೊಂದಿದ್ದಾರೆ.
ಇದನ್ನೂ ಓದಿ: Ind vs Eng 3ನೇ ಟೆಸ್ಟ್: ರೋಹಿತ್, ಜಡೇಜಾ ಶತಕ ವೈಭವ; ಪಾದಾರ್ಪಣೆ ಪಂದ್ಯದಲ್ಲೇ ಸರ್ಫರಾಜ್ ಅಬ್ಬರ