ನಾಗ್ಪುರ (ಮಹಾರಾಷ್ಟ್ರ) : ಹುಲಿಗಳ ನಾಡು ಮಧ್ಯಪ್ರದೇಶದ ಚಂದ್ರಾಪುರ ಜಿಲ್ಲೆಯಲ್ಲಿರುವ ಹಳೆಯ ಮತ್ತು ದೊಡ್ಡ ರಾಷ್ಟ್ರೀಯ ಉದ್ಯಾನವಾದ ತಡೋಬಾಕ್ಕೆ 'ಕ್ರಿಕೆಟ್ ದೇವರು' ಎಂದೇ ಖ್ಯಾತರಾದ ಸಚಿನ್ ತೆಂಡೂಲ್ಕರ್ ಅವರು ಕುಟುಂಬ ಸಮೇತ ಪ್ರವಾಸ ಕೈಗೊಂಡಿದ್ದಾರೆ.
ಹಲವು ಕಾರಣಕ್ಕಾಗಿ ಸ್ಥಗಿತಗೊಂಡಿದ್ದ ತಡೋಬಾ ಜಂಗಲ್ ಸಫಾರಿ ಇಂದಿನಿಂದ ಆರಂಭವಾಗಿದೆ. ಪ್ರಾಣಿಪ್ರಿಯರಾಗಿರುವ ಸಚಿನ್ ಅವರು ತಡೋಬಾ ಹುಲಿ ಸಂರಕ್ಷಿತ ಪ್ರದೇಶದತ್ತ ಸಫಾರಿಗೆ ಸಿದ್ಧರಾಗಿದ್ದಾರೆ. ಸಫಾರಿ ಆರಂಭವಾದ ಮೊದಲ ದಿನವೇ ಸಚಿನ್ ಅವರು ಪತ್ನಿ ಅಂಜಲಿ ಅವರೊಂದಿಗೆ ಜಂಗಲ್ ಸಫಾರಿಗಾಗಿ ನಾಗ್ಪುರಕ್ಕೆ ಆಗಮಿಸಿದರು. ಇಲ್ಲಿಂದ ಅವರು ಕಾರಿನಲ್ಲಿ ಚಂದ್ರಾಪುರ ಕಡೆಗೆ ಹೊರಟಿದ್ದಾರೆ. ಇದೇ ವೇಳೆ, ಸಚಿನ್ ಅವರು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರ ಮನೆಗೆ ಭೇಟಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತಡೋಬಾ ಹುಲಿ ಸಂರಕ್ಷಿತ ಪ್ರದೇಶವನ್ನು ಮಳೆಯ ಹಿನ್ನೆಲೆಯಲ್ಲಿ ಜುಲೈ 1 ರಿಂದ ಸೆಪ್ಟೆಂಬರ್ 30 ರವರೆಗೆ ಮುಚ್ಚಲಾಗಿತ್ತು. ಇದೀಗ ಮಳೆ ನಿಂತ ಕಾರಣ, ಪ್ರವಾಸೋದ್ಯಮಕ್ಕಾಗಿ ಮರು ಆರಂಭಿಸಲಾಗಿದೆ. ಅಕ್ಟೋಬರ್ 1 ರಿಂದ ಜೂನ್ 30 ರವರೆಗೆ ಪ್ರವಾಸಿಗರಿಗಾಗಿ ತೆರೆದಿರಲಿದೆ. ಈ ವೇಳೆ ಸಾವಿರಾರು ಪ್ರವಾಸಿಗರು ತಡೋಬಾಗೆ ಭೇಟಿ ನೀಡುತ್ತಾರೆ.
ಇದನ್ನೂ ಓದಿ: 58 ಎಸೆತದಲ್ಲಿ ಶತಕ 'ವೈಭವ'! ಆಸ್ಟ್ರೇಲಿಯನ್ನರ ಬೆವರಿಳಿಸಿದ 13 ವರ್ಷದ ಭಾರತೀಯ ಬ್ಯಾಟರ್! - Under 19 Test Cricket