ಹೈದರಾಬಾದ್: ಈ ವರ್ಷ ಭಾರತ ಕ್ರಿಕೆಟ್ ತಂಡಕ್ಕೆ ಅದೃಷ್ಟದ ವರ್ಷವೆಂದೇ ಹೇಳಲಾಗುತ್ತಿದೆ. ಕಾರಣ 17 ವರ್ಷಗಳ ಬಳಿಕ ಟೀಂ ಇಂಡಿಯಾ ವಿಶ್ವಕಪ್ ಗೆದ್ದು ಐತಿಹಾಸಿಕ ಸಾಧನೆ ಮಾಡಿದೆ. ಜೂನ್ ತಿಂಗಳಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿ ಅಜೇಯವಾಗಿ ಫೈನಲ್ ಪ್ರವೇಶಿಸಿದ್ದ ಭಾರತ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು 7 ರನ್ಗಳಿಂದ ಮಣಿಸಿ ಎರಡನೇ ಬಾರಿಗೆ ಟಿ20 ವಿಶ್ವಕಪ್ ಎತ್ತಿ ಹಿಡಿದಿತ್ತು.
2007ರಲ್ಲಿ ಕ್ಯಾಪ್ಟನ್ ಕೂಲ್ ಧೋನಿ ನಾಯಕತ್ವದಲ್ಲಿ ಭಾರತ ಕಪ್ ಗೆದ್ದಿದ್ದರೇ, ಇದೀಗ 2024ರಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಈ ಸಾಧನೆ ಮಾಡಿತ್ತು. ಇನ್ನು ಈ ಪಂದ್ಯ ಗೆಲ್ಲುತ್ತಿದ್ದಂತೆ ಹಿಂದೂಸ್ಥಾನದ ಪ್ರತಿ ಮನೆಗಳಲ್ಲಿ ಸಂಭ್ರಮಾಚರಣೆ ಮನೆ ಮಾಡಿತ್ತು. ಅದರಲ್ಲೂ ಕ್ರಿಕೆಟ್ ಅಭಿಮಾನಿಗಳಂತೂ ಪಟಾಕಿ ಸಿಡಿಸಿ ಸಿಹಿ ತಿನಿಸುಗಳನ್ನು ಹಂಚಿ ತಮ್ಮ ಖುಷಿ ವ್ಯಕ್ತಪಡಿಸಿದ್ದರು. ಇಷ್ಟೆಲ್ಲ ಖುಷಿಯಲ್ಲಿರುವಾಗಲೇ ನಾಯಕ ರೋಹಿತ್ ಶರ್ಮಾ ಹಾಗೂ ರನ್ ಮೆಷಿನ್ ವಿರಾಟ್ ಕೊಹ್ಲಿ ದಿಢೀರ್ ನಿವೃತ್ತಿ ಘೋಷಿಸಿ ಕ್ರೀಡಾ ಪ್ರಿಯರಿಗೆ ಶಾಕ್ ನೀಡಿದ್ದರು. ಕಪ್ ಗೆದ್ದಿದ್ದಕ್ಕೆ ಸಂಭ್ರಮಿಸಬೇಕೋ ಅಥವಾ ಈ ಆಟಗಾರರು ನಿವೃತ್ತಿ ಘೋಷಿಸಿದ್ದಕ್ಕೆ ಬೇಸರಪಡಬೇಕೋ ಎಂದು ಗೊತ್ತಿಲ್ಲದ್ದ ಸ್ಥಿತಿಗೆ ಅಭಿಮಾನಿಗಳು ತಲುಪಿದ್ದರು.
ರೋಹಿತ್ ನೀಡಿದ ಕಾರಣ: ಇನ್ಮುಂದೆ ರೋಹಿತ್ ಮತ್ತು ವಿರಾಟ್ ಇಲ್ಲದೇ ಟಿ20 ಪಂದ್ಯಗಳನ್ನು ಹೇಗೆ ನೋಡುವುದು ಎಂದು ಅಭಿಮಾನಿಗಳು ದುಃಖ ಹೊರಹಾಕಿದ್ದರು. ಆದರೆ, ತಮ್ಮ ನಿವೃತ್ತಿಗೆ ಕಾರಣ ಏನು ಎಂಬುದರ ಬಗ್ಗೆ ರೋಹಿತ್ ಶರ್ಮಾ ಎಲ್ಲೂ ಮಾತನಾಡಿರಲಿಲ್ಲ. ಇದೀಗ 3 ತಿಂಗಳ ಬಳಿಕ ಹಿಟ್ಮ್ಯಾನ್ ತಮ್ಮ ನಿವೃತ್ತಿಗೆ ಕಾರಣ ತಿಳಿಸಿದ್ದಾರೆ.
ಹೌದು, ಇತ್ತೀಚೆಗಷ್ಟೇ ಯೂಟ್ಯೂಬ್ ಚಾನೆಲ್ವೊಂದರಲ್ಲಿ ನಡೆದ ಸಂದರ್ಶನದಲ್ಲಿ ಈ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. ಸಂದರ್ಶನವೊಂದರಲ್ಲಿ, ವಯಸ್ಸಾಗುತ್ತಿರುವ ಕಾರಣ ಟಿ20ಗೆ ನಿವೃತ್ತಿ ಘೋಷಿಸಿದ್ದೀರಾ ಎಂದು ಆ್ಯಂಕರ್ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಹಿಟ್ಮ್ಯಾನ್, 17 ವರ್ಷಗಳ ಕಾಲ ಟಿ20 ಸ್ವರೂಪದಲ್ಲಿ ಆಡಿದ್ದೇನೆ. ನನಗೆ ಇನ್ನೂ ಮೂರು ಸ್ವರೂಪದಲ್ಲಿ ಆಡುವ ಸಾಮರ್ಥ್ಯ ಇತ್ತು. ಆದರೆ ಯುವ ಆಟಗಾರರಿಗೆ ಅವಕಾಶ ನೀಡುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಂಡಿದ್ದೇನೆ. ನಿವೃತ್ತಿ ಘೋಷಿಸಲು ಇದು ಉತ್ತಮ ಸಮಯವಾಗಿತ್ತು. ಅಲ್ಲದೇ ಮುಂದೆ ಇಂತಹ ಅವಕಾಶ ಸಿಗುವುದಿಲ್ಲ ಎಂದು ಭಾವಿಸಿ ಅಂದೇ ನಾನು ವಿದಾಯ ಹೇಳುವ ತೀರ್ಮಾನ ಮಾಡಿ ಘೋಷಣೆ ಮಾಡಿದೆ ಎಂದು ತಿಳಿಸಿದ್ದಾರೆ.
ಸದ್ಯ ರೋಹಿತ್ ನಾಯಕತ್ವದಲ್ಲಿ ಭಾರತ ತಂಡ ಬಾಂಗ್ಲಾ ವಿರುದ್ದ ಟೆಸ್ಟ್ ಸರಣಿ ಆಡುತ್ತಿದ್ದು, ಮೊದಲ ಪಂದ್ಯವನ್ನು 280 ರನ್ಗಳಿಂದ ಗೆದ್ದಿರುವ ಟೀಂ ಇಂಡಿಯಾ ಇದೀಗ ಎರಡನೇ ಪಂದ್ಯವನ್ನು ಗೆಲ್ಲುವ ಸನ್ನಾಹದಲ್ಲಿದೆ.