ಬಾರ್ಬಡೋಸ್(ವೆಸ್ಟ್ ಇಂಡೀಸ್): ಗೆಲುವಿನ ಧನ್ಯತೆಯೇ ಹಾಗೆ. ಹಠ ಹಿಡಿದು ಸಾಧಿಸಿದ ಬಳಿಕ ಅದರಿಂದ ಬರುವ ಖುಷಿಗೆ ಪಾರವೇ ಇರುವುದಿಲ್ಲ. ಅಲ್ಲಿ ಉಂಟಾಗುವ ಧನ್ಯತಾಭಾವಕ್ಕೆ ಬೆಲೆಕಟ್ಟಲಾಗದು. ಟಿ-20 ವಿಶ್ವಕಪ್ ಗೆಲುವಿನ ಬಳಿಕ ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಇಂಥದ್ದೇ ಮನಸ್ಥಿತಿಗೆ ಒಳಗಾಗಿದ್ದರು.
ವೆಸ್ಟ್ ಇಂಡೀಸ್ನ ಬಾರ್ಬಡೋಸ್ನಲ್ಲಿ ನಡೆದ ಟಿ-20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡ, ದಕ್ಷಿಣ ಆಫ್ರಿಕಾವನ್ನು 7 ರನ್ಗಳಿಂದ ಸೋಲಿಸಿ 17 ವರ್ಷಗಳ ಬಳಿಕ ಮತ್ತೊಂದು ವಿಶ್ವಕಪ್ ಎತ್ತಿ ಹಿಡಿಯಿತು. 11 ವರ್ಷಗಳ ಐಸಿಸಿ ಟ್ರೋಫಿ ಬರವೂ ನೀಗಿತು. ಇದು ಆಟಗಾರರು ಸೇರಿ ಭಾರತೀಯರನ್ನು ಕುಣಿದು ಕುಪ್ಪಳಿಸುವಂತೆ ಮಾಡಿತು.
ಗಮನ ಸೆಳೆದ ರೋಹಿತ್ ನಡೆ: ದಕ್ಷಿಣ ಆಫ್ರಿಕಾವನ್ನು ಕಟ್ಟಿಹಾಕಿ ವಿಶ್ವಕಪ್ ಗೆಲುವು ಸಿಕ್ಕ ಬಳಿಕ ದೀರ್ಘ ಕಾಯುವಿಕೆಗೆ ವಿರಾಮ ಸಿಕ್ಕಂತೆ ಮೈದಾನದಲ್ಲೇ ರೋಹಿತ್ ಶರ್ಮಾ ಮಲಗಿದರು. ಹಾರ್ದಿಕ್ ಪಾಂಡ್ಯ, ವಿರಾಟ್ ಕೊಹ್ಲಿ, ಮಹಮದ್ ಸಿರಾಜ್ ಕಣ್ಣುಗಳಲ್ಲಿ ಆನಂದಭಾಷ್ಪ ಸುರಿಯುತ್ತಿತ್ತು. ಪಾಂಡ್ಯ ಅಂತೂ ಚಿಕ್ಕ ಮಗುವಿನಂತೆ ಕಣ್ಣೀರು ಹಾಕುತ್ತಿದ್ದರು.
ಎಲ್ಲರಿಗೂ ಹಸ್ತಲಾಘವ ಮಾಡಿದ ಬಳಿಕ ನಾಯಕ ರೋಹಿತ್ ಶರ್ಮಾ, ಪಿಚ್ ಬಳಿಗೆ ಬಂದು ಅಲ್ಲಿದ್ದ ಮಣ್ಣನ್ನು ತೆಗೆದುಕೊಂಡು ಅಗಿದರು. ಎರಡು ಬಾರಿ ಇದನ್ನು ಮಾಡಿದರು. ಇದು 'ಗೆಲುವಿನ ಸವಿ' ಎಂಬುದರ ದ್ಯೋತಕವಾಗಿತ್ತು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಧೂಳೆಬ್ಬಿಸಿದೆ.
Rohit Sharma snapped eating granules of mud after T20 WC win. He couldn't contain his happiness after India's victory in the nail-biting final against SA & it was evident after he ate granules of soil from the Barbados pitch to show the respect & how much this means to him 👌🏻❤️❣️ pic.twitter.com/V6cPub2wzl
— Ashutosh Wagh (@AshutoshPWagh) June 30, 2024
ನೊವಾಕ್ ಜೊಕೊವಿಕ್ ಮಾದರಿ: ರೋಹಿತ್ ಶರ್ಮಾ ಪಿಚ್ ಮೇಲಿನ ಮಣ್ಣನ್ನು ತಿಂದಿದ್ದು, ಕ್ರೀಡೆಯಲ್ಲಿ ಇದು ಮೊದಲೇನಲ್ಲ. ಈ ಹಿಂದೆ ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ಟೆನಿಸ್ಸಿಗ ನೊವಾಕ್ ಜೊಕೊವಿಕ್ ಮಣ್ಣನ್ನು ಬಾಯಿಗೆ ಹಾಕಿಕೊಂಡಿದ್ದರು. ಇನ್ನೊಮ್ಮೆ ಎರಡು ದಳಗಳ ಹುಲ್ಲಿನ ಗರಿಕೆಯನ್ನು ಅಗಿದಿದ್ದರು. ನೊವಾಕ್ರ ಈ ಮಾದರಿಯನ್ನು ಫೋಟೋ ಮತ್ತು ವೀಡಿಯೋ ಜರ್ನಲಿಸ್ಟ್‌ಗಳು ತುಂಬಾ ಬಯಸುತ್ತಾರೆ.
ಮೂರು ಬಾರಿ ಫೇಲ್, ನಾಲ್ಕನೇ ಯತ್ನದಲ್ಲಿ ಪಾಸ್: ಐಸಿಸಿ ಟೂರ್ನಿಗಳಲ್ಲಿ ರೋಹಿತ್ ಶರ್ಮಾ ನಾಯಕತ್ವ ಅಗ್ನಿಪರೀಕ್ಷೆಗೆ ಒಳಗಾಗಿತ್ತು. 2022 ರ ಟಿ-20 ವಿಶ್ವಕಪ್ನಲ್ಲಿ ಸೆಮಿಫೈನಲ್ ತಲುಪಿದ್ದಾಗ, ಇಂಗ್ಲೆಂಡ್ ಎದುರು ಹೀನಾಯ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದು ಮುಖಭಂಗ ಅನುಭವಿಸಿತ್ತು. 2023 ರಲ್ಲಿ ಟೆಸ್ಟ್ ವಿಶ್ವ ಚಾಂಪಿಯನ್ಶಿಪ್ನಲ್ಲಿ ಫೈನಲ್ ತಲುಪಿ ಆಸ್ಟ್ರೇಲಿಯಾ ವಿರುದ್ಧ ಸೋಲುಂಡು ಟ್ರೋಫಿಯಿಂದ ವಂಚಿತವಾಯಿತು. ಬಳಿಕದ ಏಕದಿನ ವಿಶ್ವಕಪ್ನಲ್ಲಿ ಅಮೋಘ ಪ್ರದರ್ಶನ ನೀಡಿ ಫೈನಲ್ ತಲುಪಿದ ಬಳಿಕ ಅಲ್ಲಿಯೂ ಆಸ್ಟ್ರೇಲಿಯಾ ಎದುರು ಸೋತು ವಿಶ್ವಕಪ್ ಕಳೆದುಕೊಂಡಿತು.
2024ರ ಟಿ-20 ವಿಶ್ವಕಪ್ ಅನ್ನು ಶತಾಯಗತಾಯ ಗೆಲ್ಲಲೇಬೇಕು ಎಂಬ ಹಠದೊಂದಿಗೆ ಆಡಿದ ಟೀಮ್ ಇಂಡಿಯಾ ಅದರಲ್ಲಿ ಸಫಲತೆ ಕಂಡಿದೆ. ಶರ್ಮಾ ನಾಯಕತ್ವದಲ್ಲಿ ನಾಲ್ಕು ಐಸಿಸಿ ಟ್ರೋಫಿಗಳಲ್ಲಿ 3ರಲ್ಲಿ ಸೋಲು ಕಂಡಿದ್ದರೆ, ಒಂದರಲ್ಲಿ ಗೆಲುವಿನ ಸಿಹಿ ಅನುಭವಿಸಿದೆ.
ಇದನ್ನೂ ಓದಿ: ಟಿ-20 ಚಾಂಪಿಯನ್ ಭಾರತ ತಂಡಕ್ಕೆ ₹ 125 ಕೋಟಿ ಬಹುಮಾನ ಘೋಷಿಸಿದ ಬಿಸಿಸಿಐ - BCCI Announces Prize Money