ಹೈದರಾಬಾದ್: ಟೀಂ ಇಂಡಿಯಾ ಇತ್ತೀಚೆಗೆ ತವರಿನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಬಾಂಗ್ಲಾದೇಶವನ್ನು 2-0 ಮತ್ತು ನಂತರ ಟಿ20 ಸರಣಿಯಲ್ಲಿ 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿತ್ತು. ಇದೀಗ ರೋಹಿತ್ ಪಡೆ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಸಜ್ಜಾಗಿದೆ. ತವರಿನಲ್ಲಿ ನಡೆಯಲಿರುವ ಈ ಸರಣಿಯಲ್ಲಿ ಭಾರತ ಮತ್ತು ನ್ಯೂಜಿಲೆಂಡ್ 3 ಪಂದ್ಯಗಳನ್ನು ಆಡಲಿವೆ. ಮೊದಲ ಪಂದ್ಯ ಅಕ್ಟೋಬರ್ 16 ಬುಧವಾರ ಬೆಂಗಳೂರಿನಲ್ಲಿ ನಡೆಯಲಿದೆ. ಎರಡನೇ ಟೆಸ್ಟ್ ಅಕ್ಟೋಬರ್ 24ರಿಂದ ಪುಣೆಯಲ್ಲಿ ನಡೆಯಲಿದೆ, ಮೂರನೇ ಮತ್ತು ಅಂತಿಮ ಟೆಸ್ಟ್ ಪಂದ್ಯ ನವೆಂಬರ್ 1 ರಿಂದ ಮುಂಬೈನಲ್ಲಿ ಆಯೋಜಿಸಲಾಗಿದೆ.
ಈ ಮೂರು ಪಂದ್ಯಗಳ ಸರಣಿ ಭಾರತದ ಪಾಲಿಗೆ ಮಹತ್ವದಾಗಿದ್ದು, ಸರಣಿ ಕ್ಲೀನ್ಸ್ವೀಪ್ ಮಾಡಿದರೆ ವಿಶ್ವ ಟೆಸ್ಟ್ ಚಾಂಪಿಯನಶಿಪ್ ಫೈನಲ್ಗೆ ಪ್ರವೇಶ ಪಡೆಯಲಿದೆ. ಮತ್ತೊಂದೆಡೆ ನಾಯಕ ರೋಹಿತ್ ಶರ್ಮಾಗೂ ಇದು ಮಹತ್ವಾಗಿದ್ದು ಮೂರು ದಾಖಲೆಗಳ ಮೇಲೆ ಕಣ್ಣಿಟ್ಟಿದ್ದಾರೆ. ಹಾಗಾದ್ರೆ ರೋಹಿತ್ ಶರ್ಮಾ ಯಾವ ದಾಖಲೆಗಳನ್ನು ಮುರಿಯಲಿದ್ದಾರೆ ಎಂಬುದನ್ನು ಇಲ್ಲಿ ತಿಳಿಯೋಣ.
ಅತೀ ಹೆಚ್ಚು ಪಂದ್ಯ ಗೆದ್ದ ದಾಖಲೆ: ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು ಭಾರತ ಕ್ಲೀನ್ ಸ್ವೀಪ್ ಮಾಡಿದರೆ ಕಡಿಮೆ ಪಂದ್ಯಗಳಲ್ಲಿ 15 ಮ್ಯಾಚ್ ಗೆದ್ದ ನಾಯಕನಾಗಿ ದಾಖಲೆ ಬರೆಯಲಿದ್ದಾರೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಮ್ ಇಂಡಿಯಾ ಈವರೆಗೆ 12 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಕಿವೀಸ್ ವಿರುದ್ಧ 3 ಪಂದ್ಯ ಗೆದ್ದರೇ 21 ಪಂದ್ಯಗಳಲ್ಲಿ 15 ಗೆಲುವು ಸಾಧಿಸಿದ ನಾಯಕನಾಗಿ, ವಿರಾಟ್ ಕೊಹ್ಲಿ (22 ಪಂದ್ಯ 14 ಗೆಲುವು) ಮತ್ತು ಅಜರುದ್ಧೀನ್ (47 ಪಂದ್ಯ 14 ಗೆಲುವು) ಅವರನ್ನು ಹಿಂದಿಕ್ಕಲಿದ್ದಾರೆ.
ಅತಿ ಹೆಚ್ಚು ಸಿಕ್ಸರ್: ಮುಂದಿನ ಮೂರು ಟೆಸ್ಟ್ ಪಂದ್ಯಗಳಲ್ಲಿ ನಾಯಕ ರೋಹಿತ್ ಶರ್ಮಾ 5 ಸಿಕ್ಸರ್ ಸಿಡಿಸಿದರೆ, ದೀರ್ಘಸ್ವರೂಪದ ಕ್ರಿಕೆಟ್ನಲ್ಲಿ ಅತಿ ಹೆಚ್ಚು 91 ಸಿಕ್ಸರ್ ಸಿಡಿಸಿದ ಮೊದಲ ಭಾರತೀಯ ಬ್ಯಾಟರ್ ಆಗಲಿದ್ದಾರೆ. ಜತೆಗೆ ಮಾಜಿ ಬ್ಯಾಟರ್ ವಿರೇಂದ್ರ ಸೆಹ್ವಾಗ್ (90) ಅವರ ದಾಖಲೆ ಮುರಿಯಲಿದ್ದಾರೆ.
WTC ಯಲ್ಲಿ 1000 ರನ್: ಈ ಸರಣಿಯಲ್ಲಿ ರೋಹಿತ್ ಶರ್ಮಾ 258ರನ್ಗಳನ್ನು ಕಲೆ ಹಾಕಿದರೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಎರಡೂ ಋತುವಿನಲ್ಲಿ 1000 ರನ್ ಪೂರೈಸಿದ ಮೊದಲ ಭಾರತೀಯ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ. ಈ ಹಿಂದೆ 2019-21ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಆವೃತ್ತಿಯಲ್ಲಿ 12 ಪಂದ್ಯಗಳಲ್ಲಿ 1094 ರನ್ ಗಳಿಸಿದ್ದರು.
ರೋಹಿತ್ ಟೆಸ್ಟ್ ವೃತ್ತಿಜೀವನ: 2013ರಲ್ಲಿ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದ್ದ ಹಿಟ್ಮ್ಯಾನ್ ಇದುವರೆಗೆ 60 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಅವರು ಆಡಿರುವ 103 ಇನ್ನಿಂಗ್ಸ್‌ಗಳಲ್ಲಿ 44.6 ಸರಾಸರಿಯಲ್ಲಿ 4148 ರನ್ ಗಳಿಸಿದ್ದಾರೆ. ಇದರಲ್ಲಿ 12 ಶತಕ ಮತ್ತು 17 ಅರ್ಧ ಶತಕಗಳು ಸೇರಿವೆ. ಟೆಸ್ಟ್ನ ಗರಿಷ್ಠ ಸ್ಕೋರ್ 212 ಆಗಿದೆ.
ಇದನ್ನೂ ಓದಿ: ಗಂಭೀರ್ಗೆ ಹುಟ್ಟುಹಬ್ಬದ ಸಂಭ್ರಮ: ಗೌತಿ ಹೆಸರಲ್ಲಿದೆ ದೊಡ್ಡ ದಾಖಲೆ; ಅದನ್ನು ಮುರಿಯಲು ದಿಗ್ಗಜರಿಗೂ ಸಾಧ್ಯವಾಗಿಲ್ಲ!