ನವದೆಹಲಿ: ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಯ ಆಫರ್ ಅನ್ನು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ ನಿರಾಕರಿಸಿದ್ದಾರೆ. ಈ ವಿಚಾರವನ್ನು ಅವರು ಬಹಿರಂಗಪಡಿಸಿದ್ದು, "ಮುಖ್ಯ ಕೋಚ್ ಹುದ್ದೆಗಾಗಿ ನನ್ನನ್ನು ಸಂಪರ್ಕಿಸಿದ್ದರು. ಆದರೆ ಸದ್ಯದ ನನ್ನ ಜೀವನ ಶೈಲಿಗೆ ಇದು ಸರಿ ಹೊಂದುವುದಿಲ್ಲ" ಎಂದು ತಿಳಿಸಿದ್ದಾರೆ.
ಪ್ರಸ್ತುತ ಐಪಿಎಲ್ನಲ್ಲಿ ದೆಹಲಿ ಕ್ಯಾಪಿಟಲ್ಸ್ ತಂಡದ ಮುಖ್ಯ ತರಬೇತುದಾರರಾಗಿ ಜವಾಬ್ದಾರಿ ನಿರ್ವಹಿಸುತ್ತಿರುವ ಪಾಂಟಿಂಗ್, ಈ ಹಿಂದೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಟಿ20 ತರಬೇತುದಾರರಾಗಿ ಕಾರ್ಯ ನಿರ್ವಹಿಸಿದ್ದರು.
"ನಾನು ಭಾರತ ತಂಡದ ಕೋಚ್ ಆಗಲು ಇಷ್ಟಪಡುವೆ. ಆದರೆ ಜೀವನದಲ್ಲಿ ನಾನು ಹೊಂದಿರುವ ಇತರ ಜವಾಬ್ದಾರಿಗಳು ಮತ್ತು ಕುಟುಂಬದೊಂದಿಗೆ ಸ್ವಲ್ಪ ಸಮಯ ಕಳೆಯಬೇಕಿರುವ ಕಾರಣ ಕೋಚ್ ಹುದ್ದೆ ನಿಭಾಯಿಸುವುದು ಸಾಧ್ಯವಾಗದು. ರಾಷ್ಟ್ರೀಯ ತಂಡದ ಕೋಚ್ ಆಗಿ ಹುದ್ದೆ ಅಲಂಕರಿಸಿಕೊಂಡ ಬಳಿಕ ಐಪಿಎಲ್ನಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಿಲ್ಲ. ಮುಖ್ಯ ಕೋಚ್ ಆದರೆ ವರ್ಷದ 10ರಿಂದ 11 ತಿಂಗಳ ಕಾಲ ತಂಡದ ಜೊತೆಯಲ್ಲೇ ಇರಬೇಕಾಗುತ್ತದೆ. ಆದರೆ ಇದು ಈಗಿನ ನನ್ನ ಜೀವನಶೈಲಿ ಮತ್ತು ನನ್ನ ಇತರೆ ವಿಚಾರಗಳಿಗೆ ಹೊಂದಿಕೆಯಾಗುವುದಿಲ್ಲ" ಎಂದು ಹೇಳಿದ್ದಾರೆ.
"ಈ ಸಂಗತಿಯನ್ನು ನನ್ನ ಮಗನ ಮುಂದೆ ಪ್ರಸ್ತಾಪಿಸಿದ್ದು, ಆತ ಕೋಚ್ ಹುದ್ದೆಯನ್ನು ಸ್ವೀಕರಿಸಿ ಅಪ್ಪಾ. ಮುಂದಿನ ಎರಡು ವರ್ಷಗಳ ನಾವು ಕಾಲ ಭಾರತದಲ್ಲಿ ಇರಬಹುದು ಎಂದು ಹೇಳಿದ್ದಾನೆ. ನನ್ನ ಮಗ ಭಾರತ ಮತ್ತು ಇಲ್ಲಿನ ಕ್ರಿಕೆಟ್ ಸಂಸ್ಕೃತಿಯನ್ನು ಹೆಚ್ಚು ಇಷ್ಟಪಡುತ್ತಾನೆ" ಎಂದು ಇದೇ ವೇಳೆ ತಿಳಿಸಿದರು.
ಮುಖ್ಯ ಕೋಚ್ ರೇಸ್ನಲ್ಲಿ ಯಾರೆಲ್ಲ?: ಟಿ20 ವಿಶ್ವಕಪ್ ಬಳಿಕ ರಾಹುಲ್ ದ್ರಾವಿಡ್ ಅವರ ಮುಖ್ಯ ಕೋಚ್ ಅಧಿಕಾರಾವಧಿ ಮುಕ್ತಾಯಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಬಿಸಿಸಿಐ ನೂತನ ಮುಖ್ಯ ಕೋಚ್ ಹುದ್ದೆಗಾಗಿ ಈಗಾಗಲೇ ಅರ್ಜಿ ಆಹ್ವಾನಿಸಿದೆ. ಇದೇ ತಿಂಗಳು 27 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಟಿ20 ವಿಶ್ವಕಪ್ ನಂತರ ತೆರವುಗೊಳ್ಳಲಿರುವ ಮುಖ್ಯ ಕೋಚ್ ಸ್ಥಾನಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್, ಲಕ್ನೋ ಸೂಪರ್ ಜೈಂಟ್ಸ್ ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಮೆಂಟರ್ ಗೌತಮ್ ಗಂಭೀರ್ ಹೆಸರುಗಳು ಕೇಳಿ ಬಂದಿವೆ.
ಇದನ್ನೂ ಓದಿ: ಐಪಿಎಲ್ಗೆ ದಿನೇಶ್ ಕಾರ್ತಿಕ್ ಕಣ್ಣೀರ ವಿದಾಯ: ತಬ್ಬಿ ಸಂತೈಸಿದ ಕೊಹ್ಲಿ, ಆಟಗಾರರಿಂದ ವಿಶೇಷ ಗೌರವ - Dinesh Karthik