ಬೆಂಗಳೂರು: 2024ರ ಐಪಿಎಲ್ನ 68ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಮಣಿಸಿ ಪ್ಲೇಆಫ್ ಸ್ಥಾನಕ್ಕೇರಿತು. ಬೆಂಗಳೂರು ಪ್ಲೇ ಆಫ್‌ಗೆ ಅರ್ಹತೆ ಪಡೆದ ನಾಲ್ಕನೇ ತಂಡವಾಗಿದೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಬೆಂಗಳೂರು ತಂಡ ಚೆನ್ನೈ ತಂಡವನ್ನು 27 ರನ್‌ಗಳಿಂದ ಸೋಲಿಸಿತು.
ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 218 ರನ್ ಗಳಿಸಿತು. ಇದಾದ ನಂತರ ಬೆಂಗಳೂರು ತಂಡವು ಪ್ಲೇಆಫ್‌ಗೆ ಅರ್ಹತೆ ಪಡೆಯಲು ಚೆನ್ನೈ ತಂಡವನ್ನು 191 ರನ್‌ಗಳಿಗೆ ಕಟ್ಟಿಹಾಕಿತು. ಅಂದರೆ, ಪ್ಲೇ ಆಫ್‌ಗೆ ಅರ್ಹತೆ ಪಡೆಯಲು ಆರ್‌ಸಿಬಿ ಪಂದ್ಯವನ್ನು 18 ರನ್‌ಗಳಿಂದ ಗೆಲ್ಲಬೇಕಾಗಿತ್ತು. ಆದರೆ ಬೆಂಗಳೂರು ತಂಡವು 27 ರನ್‌ಗಳಿಂದ ಗೆದ್ದು ಬೀಗಿದೆ.
ಚೆನ್ನೈ ತಂಡಕ್ಕೆ ಲಭಿಸಿದ ಉತ್ತಮ ಆರಂಭ: ಗುರಿ ಬೆನ್ನಟ್ಟಿದ ಚೆನ್ನೈ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಗ್ಲೆನ್ ಮ್ಯಾಕ್ಸ್‌ವೆಲ್ ಇನಿಂಗ್ಸ್‌ನ ಮೊದಲ ಎಸೆತದಲ್ಲಿಯೇ ಸಿಎಸ್ಕೆ ನಾಯಕ ರುತುರಾಜ್ ಗಾಯಕ್ವಾಡ್ (0) ವಿಕೆಟ್ ಪಡೆದರು. ನಂತರ ತಂಡ ಮೂರನೇ ಓವರ್ನ ಎರಡನೇ ಎಸೆತದಲ್ಲಿ ಡೆರಿಲ್ ಮಿಚೆಲ್ (04) ರೂಪದಲ್ಲಿ ಎರಡನೇ ವಿಕೆಟ್ ಕಳೆದುಕೊಂಡಿತು. ಮೂರನೇ ವಿಕೆಟ್‌ಗೆ ರಚಿನ್ ರವೀಂದ್ರ ಮತ್ತು ಅಜಿಂಕ್ಯ ರಹಾನೆ 66 (41 ಎಸೆತ) ಜೊತೆಯಾಟ ಆಡುವ ಮೂಲಕ ತಂಡಕ್ಕೆ ಸ್ಥಿರತೆ ಒದಗಿಸಿದರು. ಲಾಕಿ ಫರ್ಗುಸನ್ ಅಜಿಂಕ್ಯ ರಹಾನೆಗೆ ಪೆವಿಲಿಯನ್ ಹಾದಿ ತೋರಿಸಿದರು. ರಹಾನೆ 22 ಎಸೆತಗಳಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 33 ರನ್ ಗಳಿಸಿದರು.
ನಂತರ 13ನೇ ಓವರ್ನ ಕೊನೆಯ ಎಸೆತದಲ್ಲಿ ರಚಿನ್ ರವೀಂದ್ರ ರನೌಟ್ ಆದರು. ರಚಿನ್ 37 ಎಸೆತಗಳಲ್ಲಿ 5 ಬೌಂಡರಿ ಹಾಗೂ 3 ಸಿಕ್ಸರ್‌ಗಳ ನೆರವಿನಿಂದ 61 ರನ್ ಗಳಿಸಿದರು. 15 ಎಸೆತಗಳಲ್ಲಿ ಕೇವಲ 07 ರನ್ ಗಳಿಸಿ 14ನೇ ಓವರ್ ನ ನಾಲ್ಕನೇ ಎಸೆತದಲ್ಲಿ ಶಿವಂ ದುಬೆ ಪೆವಿಲಿಯನ್ಗೆ ಮರಳಿದರು. ಇದಾದ ನಂತರ ತಂಡಕ್ಕೆ ಸ್ಥಿರತೆ ನೀಡಲು ಸಾಧ್ಯವಾಗಲಿಲ್ಲ. ನಂತರ 15ನೇ ಓವರ್ ನ ಕೊನೆಯ ಎಸೆತದಲ್ಲಿ ಮಿಚೆಲ್ ಸ್ಯಾಂಟ್ನರ್ (03) ಔಟಾದರು. ಈ ಮೂಲಕ ಚೆನ್ನೈ 119 ರನ್ ಗಳಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡಿತು. ಜಡೇಜಾ ಮತ್ತು ಧೋನಿ ಏಳನೇ ವಿಕೆಟ್‌ಗೆ 61 ರನ್ (27 ಎಸೆತ) ಜೊತೆಯಾಟ ಆಡುವ ಮೂಲಕ ತಂಡವನ್ನು ಮತ್ತೆ ಗೆಲುವಿನ ಸಮೀಪ ತಂದರು. ಆದ್ರೆ, ಈ ಜೊತೆಯಾಟವು 20 ಓವರ್‌ಗಳ ಎರಡನೇ ಎಸೆತದಲ್ಲಿ ಧೋನಿ ವಿಕೆಟ್‌ನೊಂದಿಗೆ ಕೊನೆಗೊಂಡಿತು. ಇದರೊಂದಿಗೆ ಚೆನ್ನೈ ಗೆಲುವಿನ ಭರವಸೆಯೂ ಕಮರಿತು.
ಅಂತಿಮವಾಗಿ ರವೀಂದ್ರ ಜಡೇಜಾ 22 ಎಸೆತಗಳಲ್ಲಿ 3 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 42 ರನ್ ಗಳಿಸಿ ಅಜೇಯರಾಗಿ ಉಳಿದರೂ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ಈ ಮೂಲಕ ಆರ್‌ಸಿಬಿ ಸಿಎಸ್‌ಕೆಯನ್ನು ಸೋಲಿಸುವ ಮೂಲಕ ಪ್ಲೇಆಫ್‌ಗೆ ಅರ್ಹತೆ ಪಡೆದಿದೆ. ಆರ್‌ಸಿಬಿ ಫ್ಯಾನ್ಸ್ ಖುಷಿ ಇಮ್ಮಡಿಯಾಗಿದೆ.