ಮುಂಬೈ: ರಣಜಿ ಟ್ರೋಫಿ ಇತಿಹಾಸದಲ್ಲೇ ಅತಿ ಯಶಸ್ವಿ ತಂಡವಾದ ಮುಂಬೈ 48ನೇ ಬಾರಿಗೆ ಫೈನಲ್ ತಲುಪಿತು. ಸೆಮೀಸ್ನಲ್ಲಿ ಶಾರ್ದೂಲ್ ಠಾಕೂರ್ ಅವರ ಆಲ್‌ರೌಂಡ್ ಆಟದ ನೆರವಿನಿಂದ ತಮಿಳುನಾಡು ವಿರುದ್ಧ ಇನಿಂಗ್ಸ್ ಹಾಗೂ 70 ರನ್ಗಳ ಗೆಲುವು ಸಾಧಿಸಿತು.
41 ಬಾರಿಯ ಚಾಂಪಿಯನ್ ಮುಂಬೈ ಎದುರು ತಮಿಳುನಾಡು ತಂಡದ ಆಟ ಸಾಕಾಗಲಿಲ್ಲ. ಮೊದಲ ಇನಿಂಗ್ಸ್ನಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿ 146 ಗಳಿಸಿತು. ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆಡಿ ಅನುಭವವಿರುವ ವಿಜಯ್ ಶಂಕರ್ 44, ವಾಷಿಂಗ್ಟನ್ ಸುಂದರ್ 43 ರನ್ ಗಳಿಸಿದ್ದೇ ತಂಡದ ಅತ್ಯಧಿಕ ಮೊತ್ತ. ತುಷಾರ್ ದೇಶಪಾಂಡೆ 3, ಶಾರ್ದೂಲ್ ಠಾಕೂರ್, ಮುಶೀರ್ ಖಾನ್, ತನುಶ್ ಕೋಟ್ಯಾನ್ ತಲಾ 2 ವಿಕೆಟ್ ಪಡೆದರು.
ಶಾರ್ದೂಲ್ ಠಾಕೂರ್ ಶತಕ: ಮೊದಲ ದಿನದ ದ್ವಿತೀಯಾರ್ಧದಲ್ಲಿ ತನ್ನ ಮೊದಲ ಇನಿಂಗ್ಸ್ ಆರಂಭಿಸಿದ ಮುಂಬೈ ಶಾರ್ದೂಲ್ ಠಾಕೂರ್(109) ಅವರ ಭರ್ಜರಿ ಶತಕ, ಮುಶೀರ್ ಖಾನ್(55), ತನುಶ್ ಕೋಟ್ಯಾನ್ರ(ಔಟಾಗದೆ 89) ಅರ್ಧಶತಕದ ನೆರವಿನಿಂದ 378 ರನ್ ಪೇರಿಸಿ 232 ರನ್ಗಳ ಮುನ್ನಡೆ ಪಡೆಯಿತು. ಅಷ್ಟೇನೂ ಉತ್ತಮ ಆರಂಭ ಪಡೆಯದ ಮುಂಬೈಗೆ 3ನೇ ಕ್ರಮಾಂಕದಲ್ಲಿ ಆಡಿದ ಮುಶೀರ್ ಖಾನ್ ನೆರವಾದರು. ಹಿರಿಯ ಆಟಗಾರ ಅಜಿಂಕ್ಯಾ ರಹಾನೆ (19), ಶ್ರೇಯಸ್ ಅಯ್ಯರ್ (3), ಪೃಥ್ವಿ ಶಾ (5) ಬ್ಯಾಟಿಂಗ್ ಇಲ್ಲೂ ಸದ್ದು ಮಾಡಲಿಲ್ಲ.
106 ರನ್ಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಶಾರ್ದೂಲ್ ಠಾಕೂರ್, ತನುಶ್ ಕೋಟ್ಯಾನ್ ಆಧರಿಸಿದರು. 2ನೇ ದಿನದಂತ್ಯಕ್ಕೆ 353 ರನ್ ಗಳಿಸಿ ಸುಸ್ಥಿತಿಯಲ್ಲಿತ್ತು. ಬಳಿಕ ಮೂರನೇ ದಿನದಲ್ಲಿ ತಂಡಕ್ಕೆ 25 ರನ್ ಸೇರಿಸಿ ಆಲೌಟ್ ಆಯಿತು. ತನುಶ್ ಶತಕ ತಪ್ಪಿಸಿಕೊಂಡರು.
2ನೇ ಇನಿಂಗ್ಸ್ನಲ್ಲೂ ಠುಸ್: ಮೂರನೇ ದಿನದಲ್ಲಿ 2ನೇ ಇನಿಂಗ್ಸ್ ಆರಂಭಿಸಿದ ತಮಿಳುನಾಡು ಮತ್ತೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಮೊದಲ 10 ರನ್ಗೆ 3 ವಿಕೆಟ್ ಕಳೆದುಕೊಂಡಿತು. ಬಾಬಾ ಇಂದ್ರಜಿತ್ 70 ರನ್ ಗಳಿಸಿ ಏಕಾಂಗಿ ಹೋರಾಟ ನಡೆಸಿದರು. ಇದರಿಂದ 162 ರನ್ಗೆ ಸರ್ವಪತನ ಕಾಣುವ ಮೂಲಕ ಇನಿಂಗ್ಸ್ ಮತ್ತು 70 ರನ್ಗಳ ಹೀನಾಯ ಸೋಲಿನೊಂದಿಗೆ ಅಭಿಯಾನ ಮುಗಿಸಿತು. ಮೂರೇ ದಿನದಲ್ಲಿ ತಮಿಳುನಾಡು ಕಟ್ಟಿಹಾಕುವ ಮೂಲಕ ಅಧಿಕಾರಯುತವಾಗಿ ಮುಂಬೈ ತಂಡ ಫೈನಲ್ ತಲುಪಿತು.
ಇನ್ನೊಂದು ಸೆಮೀಸ್ನಲ್ಲಿ ವಿದರ್ಭ ಮತ್ತು ಮಧ್ಯಪ್ರದೇಶ ತಂಡಗಳು ಸೆಣಸಾಡುತ್ತಿವೆ.
ಇದನ್ನೂ ಓದಿ: ಮಂಧಾನ, ಪೆರ್ರಿ ಅರ್ಧಶತಕಗಳ ವೈಭವ: ಯುಪಿ ವಿರುದ್ಧ ಆರ್ಸಿಬಿಗೆ 23 ರನ್ ಗೆಲುವು