ಸಿಲ್ಹೆಟ್ (ಬಾಂಗ್ಲಾದೇಶ): ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ತಂಡ ಗೆಲುವು ಸಾಧಿಸಿದೆ. ಶ್ರೀಲಂಕಾ ಬಾಂಗ್ಲಾದೇಶಕ್ಕೆ 511 ರನ್‌ಗಳ ದೊಡ್ಡ ಗುರಿ ನೀಡಿತ್ತು. ಇದಕ್ಕೆ ಉತ್ತರವಾಗಿ ಬಾಂಗ್ಲಾದೇಶ 182 ರನ್‌ಗಳಿಗೆ ಸರ್ವಪತನಗೊಂಡಿತು. ಮೂರನೇ ದಿನದಾಟದ ಅಂತ್ಯಕ್ಕೆ ಮೊಮಿಮುಲ್ ಹಕ್ ಏಳು ಹಾಗೂ ತೈಜುಲ್ ಇಸ್ಲಾಂ ಆರು ರನ್ ಗಳಿಸಿದ್ದರು. ಶ್ರೀಲಂಕಾ ಬೌಲರ್ ವಿಶ್ವ ಫೆರ್ನಾಂಡೊ ಮೂರು ವಿಕೆಟ್ ಪಡೆದರೆ, ಕಸುನ್ ರಜಿತಾ 5 ವಿಕೆಟ್ ಮತ್ತು ಲಹಿರು ಕುಮಾರ 2 ವಿಕೆಟ್ ಪಡೆದು ಮಿಂಚಿದರು.
ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾದ ಕಮಿಂದು ಮೆಂಡಿಸ್ ಇತಿಹಾಸ ನಿರ್ಮಿಸಿದ್ದಾರೆ. ಅವರು ಸರಣಿಯ ಮೊದಲ ಟೆಸ್ಟ್‌ನಲ್ಲಿ ಸತತ ಎರಡು ಇನ್ನಿಂಗ್ಸ್‌ಗಳಲ್ಲಿ ಎರಡು ಶತಕಗಳನ್ನು ಗಳಿಸಿ ತಂಡದ ಗೆಲುವಿಗೆ ಶ್ರಮ ವಹಿಸಿದ್ದಾರೆ. ಈ ಟೆಸ್ಟ್ನ ಮೊದಲ ಇನ್ನಿಂಗ್ಸ್‌ನಲ್ಲಿ ಒಂದು ಹಂತದಲ್ಲಿ ಶ್ರೀಲಂಕಾ 57 ರನ್‌ಗಳಿಗೆ ಐದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಇದಾದ ಬಳಿಕ ಮೆಂಡಿಸ್ ಧನಂಜಯ್ ಡಿ ಸಿಲ್ವಾ ಜೊತೆಗೂಡಿ 202 ರನ್‌ಗಳ ಜೊತೆಯಾಟ ಆಡಿದರು. ಡಿಸಿಲ್ವಾ 102 ರನ್ ಮತ್ತು ಮೆಂಡಿಸ್ 102 ರನ್‌ಗಳ ಇನ್ನಿಂಗ್ಸ್ ಆಡಿದ್ದರು. ಈ ಎರಡು ಶತಕಗಳ ನೆರವಿನಿಂದ ಶ್ರೀಲಂಕಾ ಮೊದಲ ಇನ್ನಿಂಗ್ಸ್‌ನಲ್ಲಿ 280 ರನ್ ಗಳಿಸಿತ್ತು.
ಇದಾದ ಬಳಿಕ ಬಾಂಗ್ಲಾದೇಶದ ಮೊದಲ ಇನ್ನಿಂಗ್ಸ್ 180 ರನ್‌ಗಳಿಗೆ ಸರ್ವಪತನ ಕಂಡಿತು. ಮೊದಲನೇ ಇನ್ನಿಂಗ್ಸ್‌ನಲ್ಲಿ ಶ್ರೀಲಂಕಾ ಭಾರಿ ಮುನ್ನಡೆ ಸಾಧಿಸಿತ್ತು. ಇದರ ನಂತರ, ಬಾಂಗ್ಲಾದೇಶ ಎರಡನೇ ಇನ್ನಿಂಗ್ಸ್‌ನಲ್ಲಿ ಶ್ರೀಲಂಕಾದ ಅಗ್ರ ಕ್ರಮಾಂಕವನ್ನು ಮತ್ತೊಮ್ಮೆ ಕುಸಿತ ಕಂಡಿತು. ಶ್ರೀಲಂಕಾ ತಂಡ 113 ರನ್‌ಗಳಿಗೆ ಐದು ವಿಕೆಟ್ ಕಳೆದುಕೊಂಡಿತ್ತು. ಮತ್ತೊಮ್ಮೆ ಕಮಿಂದು ಮೆಂಡಿಸ್ ತಂಡವನ್ನು ರಕ್ಷಿಸಿ, ಜವಾಬ್ದಾರಿಯುತ 164 ರನ್‌ಗಳ ಇನ್ನಿಂಗ್ಸ್ ಆಡಿದರು. ಮೆಂಡಿಸ್ ಅವರ ಈ ಇನ್ನಿಂಗ್ಸ್‌ನಿಂದ ಶ್ರೀಲಂಕಾ 418 ರನ್ ಗಳಿಸಿತು.
511 ರನ್‌ಗಳ ದೊಡ್ಡ ಗುರಿಯನ್ನು ಬೆನ್ನತ್ತಿದ್ದ ಬಾಂಗ್ಲಾದೇಶ ಆಟಗಾರರು ಹೆಚ್ಚು ಹೊತ್ತು ಕ್ರೀಸ್ನಲ್ಲಿ ಉಳಿಯದೇ ಪೆವಿಲಿಯನ್ ಹಾದಿ ಹಿಡಿದರು. ಕೇವಲ 182 ರನ್ ಗಳಿಸಿ ಬಾಂಗ್ಲಾದೇಶ ತನ್ನೆಲ್ಲಾ ವಿಕೆಟ್ಗಳನ್ನು ಕಳೆದುಕೊಂಡು ಶ್ರೀಲಂಕಾ ವಿರುದ್ಧ ಸೋಲು ಕಂಡು ತವರು ನೆಲದಲ್ಲಿ ಮುಖಭಂಗ ಅನುಭವಿಸಿತು.
ಈ ಎರಡು ಶತಕಗಳ ನೆರವಿನಿಂದ ಮೆಂಡಿಸ್ ಇತಿಹಾಸ ಸೃಷ್ಟಿಸಿದರು. ಅವರು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಏಳನೇ ಅಥವಾ ಅದಕ್ಕಿಂತ ಕಡಿಮೆ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವಾಗ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕಗಳನ್ನು ಗಳಿಸಿದ ಮೊದಲ ಆಟಗಾರರಾಗಿದ್ದಾರೆ. ಅಷ್ಟೇ ಅಲ್ಲ, ತನ್ನ ಮೊದಲ ಮೂರು ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ ಮೂರು 50+ ಸ್ಕೋರ್‌ಗಳನ್ನು ಗಳಿಸಿದ ಶ್ರೀಲಂಕಾದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಗಾಲೆಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಚೊಚ್ಚಲ ಟೆಸ್ಟ್‌ನಲ್ಲಿ ಅವರು 61 ರನ್ ಗಳಿಸಿದ್ದರು.
ಮೆಂಡಿಸ್ ಮಾತ್ರವಲ್ಲ, ಧನಂಜಯ್ ಡಿ ಸಿಲ್ವಾ ಎರಡನೇ ಇನ್ನಿಂಗ್ಸ್ ನಲ್ಲಿ ಶತಕ ಸಿಡಿಸಿದ್ದರು. ಅವರು ಮತ್ತು ಮೆಂಡಿಸ್ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಗಳಿಸಿದ ಮೂರನೇ ಜೋಡಿಯಾಗಿದೆ. ಇದಕ್ಕೂ ಮೊದಲು 1974ರಲ್ಲಿ ನ್ಯೂಜಿಲೆಂಡ್ ವಿರುದ್ಧ ಗ್ರೆಗ್ ಚಾಪೆಲ್ ಮತ್ತು ಇಯಾನ್ ಚಾಪೆಲ್ ಹಾಗೂ 2014ರಲ್ಲಿ ಅಬುಧಾಬಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಮಿಸ್ಬಾ ಉಲ್ ಹಕ್ ಮತ್ತು ಅಜರ್ ಅಲಿ ಈ ಸಾಧನೆ ಮಾಡಿದ್ದರು. ಡಿಸಿಲ್ವಾ ಜೊತೆಗೂಡಿ ಮೆಂಡಿಸ್ ಮೊದಲ ಇನ್ನಿಂಗ್ಸ್‌ನಲ್ಲಿ 202 ರನ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 173 ರನ್‌ಗಳ ಜೊತೆಯಾಟ ಆಡಿದರು.
ಪಂದ್ಯದ ವೇಳೆ, ಬಾಂಗ್ಲಾದೇಶದ ಬೌಲರ್ ಖಾಲಿದ್ ಅಹ್ಮದ್ ಕೂಡ ಮಂಕಾಡಿಂಗ್ ಮೂಲಕ ಕಮಿಂದು ಅವರನ್ನು ಔಟ್ ಮಾಡಲು ಪ್ರಯತ್ನಿಸಿದರು, ಆದರೆ ಜಸ್ಟ್ ಮಿಸ್ ಆಯಿತು. ಬಾಲ್ ನಾನ್ ಸ್ಟ್ರೈಕ್ ವಿಕೆಟ್ಗೆ ಟಚ್ ಆಗದೇ ಬೇರೆಡೆ ಹೋಯಿತು. ಈ ಬಗ್ಗೆ ಕಾಮೆಂಟೇಟರ್ ಬಾಂಗ್ಲಾದೇಶ ತಂಡ ಸಂಕಷ್ಟದಲ್ಲಿರುವಂತೆ ಕಾಣುತ್ತಿದೆ ಎಂದು ಬಣ್ಣಿಸಿದ್ದು, ಅದರ ವಿಡಿಯೋ ಕೂಡ ಹೊರಬಿದ್ದಿದೆ.