ಜೈಪುರ: ಈ ಬಾರಿಯ ಐಪಿಎಲ್ನಲ್ಲಿ ಬಲಾಢ್ಯ ತಂಡವಾಗಿ ಮುನ್ನುಗ್ಗುತ್ತಿರುವ ರಾಜಸ್ಥಾನ ರಾಯಲ್ಸ್ 7ನೇ ಗೆಲುವು ದಾಖಲಿಸಿತು. ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 9 ವಿಕೆಟ್ಗಳ ಸೋಲು ಕಂಡಿದೆ. ಈ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದು ಪ್ಲೇಆಫ್ಗೆ ಇನ್ನಷ್ಟು ಸನಿಹವಾಯಿತು.
ವಿಶೇಷವೆಂದರೆ, ಒಂದು ತಂಡವಾಗಿ ಆಡುವುದು ಎಂದರೆ ಏನೆಂಬುದನ್ನು ರಾಯಲ್ಸ್ ತೋರಿಸಿಕೊಟ್ಟಿತು. ಮೊದಲು ಬ್ಯಾಟ್ ಮಾಡಿ ಮುಂಬೈ ಅನ್ನು ಸಂದೀಪ್ ಶರ್ಮಾ ತಮ್ಮ ಬೌಲಿಂಗ್ ಪರಾಕ್ರಮದಿಂದ ಕಟ್ಟಿ ಹಾಕಿದರೆ, ಬಳಿಕ ಯಶಸ್ವಿ ಜೈಸ್ವಾಲ್ ತಮ್ಮ ಬ್ಯಾಟಿಂಗ್ ಖದರ್ ಏನೆಂಬುದನ್ನು ಸಾಬೀತು ಮಾಡಿದರು. ಉಳಿದವರಿಂದಲೂ ಉತ್ತಮ ಪ್ರದರ್ಶನ ಕಂಡುಬಂದಿತು.
ಮುಂಬೈ 'ಪಂಚ'ರ್ ಮಾಡಿದ ಸಂದೀಪ್: ಪ್ಲೇಆಫ್ ರೇಸ್ನಲ್ಲಿ ಉಳಿದುಕೊಳ್ಳಲು ಗೆಲ್ಲಲೇಬೇಕಿದ್ದ ಮುಂಬೈ ಇಂಡಿಯನ್ಸ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿತು. ಭಾರೀ ಮೊತ್ತ ದಾಖಲಿಸಿ ಗೆಲುವಿನ ಕನಸು ಕಂಡಿದ್ದ ತಂಡಕ್ಕೆ ಸಂದೀಪ್ ಶರ್ಮಾ ಮರ್ಮಾಘಾತ ನೀಡಿದರು. ತಮ್ಮ ಕೋಟಾದ 4 ಓವರ್ಗಳಲ್ಲಿ ಐದು ವಿಕೆಟ್ಗಳ ಗೊಂಚಲು ಕಿತ್ತಿದರು. ಟ್ರೆಂಟ್ ಬೌಲ್ಟ್ಗೆ ರೋಹಿತ್ ಶರ್ಮಾ (6) ಔಟಾದ ಬಳಿಕ ಇಶಾನ್ ಕಿಶನ್ ಅವರನ್ನು (0) ಪೆವಿಲಿಯನ್ಗೆ ಅಟ್ಟಿದರು. ಬೆನ್ನಲ್ಲೇ, ಮಾರಕ ಬ್ಯಾಟರ್ ಸೂರ್ಯಕುಮಾರ್ ಯಾದವ್ಗೆ (10) ನೆಲೆಯೂರಲು ಬಿಡಲಿಲ್ಲ. 23 ರನ್ ಗಳಿಸಿ ಆಡುತ್ತಿದ್ದ ಮೊಹಮದ್ ನಬಿಗೆ ಚಹಲ್ ಚಳ್ಳೆಹಣ್ಣು ತಿನ್ನಿಸಿದರು.
ತಿಲಕ್ ವರ್ಮಾ, ವದೇರಾ ನೆರವು: 52 ರನ್ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಯುವ ಬ್ಯಾಟರ್ಗಳಾದ ತಿಲಕ್ ವರ್ಮಾ ಮತ್ತು ನೇಹಲ್ ವದೇರಾ ನೆರವಾದರು. ಬಿರುಸಿನ ಬ್ಯಾಟ್ ಮಾಡಿದ ವದೇರಾ 24 ಎಸೆತಗಳಲ್ಲಿ 49 ರನ್, ತಿಲಕ್ ವರ್ಮಾ 45 ಎಸೆತಗಳಲ್ಲಿ 65 ರನ್ ಗಳಿಸಿದರು. ಇದರಿಂದ ತಂಡ 150ರ ಗಡಿ ದಾಟಿತು. ಟಿಮ್ ಡೇವಿಡ್ ಅವರನ್ನು ಸಂದೀಪ್ ಔಟ್ ಮಾಡುವ ಮೂಲಕ ಹೆಚ್ಚಿನ ರನ್ ಬರದಂತೆ ನೋಡಿಕೊಂಡರು. ಕೊನೆಯಲ್ಲಿ ತಂಡ 9 ವಿಕೆಟ್ಗೆ 179 ರನ್ ಗಳಿಸಿತು.
ಯಶಸ್ವಿ ಜೈಸ್ವಾಲ್ 2ನೇ ಶತಕ: ಈಗಿನ ಟಿ20 ಆಟಕ್ಕೆ 170-180 ದೊಡ್ಡ ಮೊತ್ತವೇ ಅಲ್ಲ ಎಂಬುದನ್ನು ಯಶಸ್ವಿ ಜೈಸ್ವಾಲ್ ಮತ್ತೊಮ್ಮೆ ಸಾಬೀತು ಮಾಡಿದರು. ಜಾಸ್ ಬಟ್ಲರ್ ಜೊತೆಗೂಡಿ ಬಿರುಸಿನ ಆಟವಾಡಿದ ಯುವ ಬ್ಯಾಟರ್ ಭರ್ಜರಿ ಶತಕ ಬಾರಿಸಿ, ಐಪಿಎಲ್ನಲ್ಲಿ 2ನೇ ಹಂಡ್ರೆಡ್ ಗಳಿಸಿದರು. 60 ಎಸೆತಗಳಲ್ಲಿ 7 ಸಿಕ್ಸರ್, 9 ಬೌಂಡರಿ ಸಮೇತ ಔಟಾಗದೆ 104 ರನ್ ಗಳಿಸಿದರು. ಕಳೆದ ಪಂದ್ಯದ ಹೀರೋ ಜಾಸ್ ಬಟ್ಲರ್ 35, ಸಂಜು ಸ್ಯಾಮನ್ಸ್ ಔಟಾಗದೆ 38 ರನ್ ಗಳಿಸಿ ಗೆಲುವಿನ ಶಾಸ್ತ್ರ ಮುಗಿಸಿದರು. ತಂಡ 1 ವಿಕೆಟ್ಗೆ 18.4 ಓವರ್ಗಳಲ್ಲಿ 183 ರನ್ ಗಳಿಸಿ 7ನೇ ಗೆಲುವು ದಾಖಲಿಸಿತು. ಇದರಿಂದ 14 ಪಾಯಿಂಟ್ಗಳೊಂದಿಗೆ ಅಗ್ರಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿತು.
ಇದನ್ನೂ ಓದಿ: ಜೈಪುರದಲ್ಲಿ 2012 ರಿಂದ ಗೆಲ್ಲದ ಮುಂಬೈ ಇಂಡಿಯನ್ಸ್ಗೆ ಅಗ್ರಸ್ಥಾನಿ ರಾಜಸ್ಥಾನ ರಾಯಲ್ಸ್ ಸವಾಲು - RR vs MI match