ಹೈದರಾಬಾದ್: ಹಲವು ಮಹತ್ವದ ಸರಣಿಗಳು, ಟಿ-20 ವಿಶ್ವಕಪ್ ಗೆಲುವು, ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಸೇರಿದಂತೆ ಭಾರತ ಕ್ರಿಕೆಟ್ ತಂಡವನ್ನು ಉಚ್ಛ್ರಾಯ ಸ್ಥಿತಿಗೆ ತಂದಿದ್ದ ಮಾಜಿ ಕೋಚ್ ರಾಹುಲ್ ದ್ರಾವಿಡ್ಗೆ ಬೇಡಿಕೆ ಹೆಚ್ಚಾಗಿದೆ. ಕ್ರಿಕೆಟ್ ದ್ರೋಣನನ್ನು ತರಬೇತುದಾರರನ್ನಾಗಿ ಮಾಡಿಕೊಳ್ಳಲು ಹಲವು ತಂಡಗಳು ಪೈಪೋಟಿಗೆ ಬಿದ್ದಿವೆ.
Rahul Dravid is set to return to Rajasthan Royals ahead of the 2025 IPL season
— ESPNcricinfo (@ESPNcricinfo) September 4, 2024
Full story: https://t.co/cwqMp9GAsw pic.twitter.com/135nLBmVgP
ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್) ರಾಜಸ್ಥಾನ ರಾಯಲ್ಸ್ ತಂಡ ಶತಾಯಗತಾಯ ರಾಹುಲ್ ದ್ರಾವಿಡ್ ಅವರನ್ನು ಕೋಚ್ ಆಗಿ ನೇಮಿಸಿಕೊಳ್ಳುವ ಸಾಧ್ಯತೆ ಇದೆ. ಮುಂದಿನ ಆವೃತ್ತಿಯಿಂದ ಅವರು ರಾಯಲ್ಸ್ ತಂಡದ ಜೊತೆ ಕಾಣಿಸಿಕೊಳ್ಳಲಿದ್ದಾರೆ ಎಂದು ಕ್ರೀಡಾ ಮಧ್ಯಮವೊಂದು ವರದಿ ಮಾಡಿದೆ.
ಟಿ-20 ವಿಶ್ವಕಪ್ ಗೆಲುವಿನ ಬಳಿಕ ಭಾರತ ತಂಡದ ಕೋಚ್ ಹುದ್ದೆಗೆ ವಿದಾಯ ಹೇಳಿದ ರಾಹುಲ್ ದ್ರಾವಿಡ್ ಅವರನ್ನು ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ತನ್ನ ತಂಡಕ್ಕೆ ತರಬೇತುದಾರರಾಗಲು ಮನವಿ ಮಾಡಿತ್ತು. ಇದಕ್ಕೆ ಅವರೂ ಒಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಒಪ್ಪಂದ ಪತ್ರಕ್ಕೂ ಸಹಿ ಹಾಕಿದ್ದು, ಹರಾಜಿಗೂ ಮೊದಲು ಯಾವ ಆಟಗಾರರನ್ನು ಉಳಿಸಿಕೊಳ್ಳಬೇಕು ಎಂಬ ಬಗ್ಗೆಯೂ ಚರ್ಚಿಸಿದ್ದಾರೆ ಎಂದು ವರದಿ ಹೇಳಿದೆ.
RAJASTHAN ROYALS UPDATES...!!!! [Espn Cricinfo]
— Johns. (@CricCrazyJohns) September 4, 2024
- Rahul Dravid as Head Coach.
- Kumar Sangakkara as Director of cricket.
- Vikram Rathour as Assistant Coach. pic.twitter.com/4ryChbUA5m
ಮಾಜಿ ನಾಯಕ ಈಗ ಕೋಚ್?: ರಾಹುಲ್ ದ್ರಾವಿಡ್ ಅವರು ಈ ಹಿಂದೆ ರಾಜಸ್ಥಾನ ರಾಯಲ್ಸ್ ತಂಡದ ನಾಯಕತ್ವದ ಹೊಣೆ ನಿಭಾಯಿಸಿದ್ದರು. 2012, 2013 ರಲ್ಲಿ ತಂಡವನ್ನು ಮುನ್ನಡೆಸಿದ್ದರು. ಕ್ರಿಕೆಟ್ಗೆ ವಿದಾಯ ಹೇಳಿದ ಬಳಿಕ ಇದೇ ತಂಡಕ್ಕೆ 2014, 2015 ರಲ್ಲಿ ನಿರ್ದೇಶಕ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಿದ್ದಾರೆ. ಸದ್ಯ ತಂಡದ ನಾಯಕನಾಗಿರುವ ಸಂಜು ಸ್ಯಾಮ್ಸನ್, ದ್ರಾವಿಡ್ ಜೊತೆ ಉತ್ತಮ ಸಂಬಂಧ ಹೊಂದಿದ್ದಾರೆ. ದ್ರಾವಿಡ್ 19 ವರ್ಷದೊಳಗಿನ ತಂಡದ ಕೋಚ್ ಆಗಿದ್ದಾಗ ಸ್ಯಾಮ್ಸನ್ ಕೂಡ ತಂಡದಲ್ಲಿದ್ದರು.
ವಿಕ್ರಮ್ ರಾಥೋಡ್ ಸಹಾಯಕ ಕೋಚ್?: ಇದರ ಜೊತೆಗೆ, ಭಾರತ ಕ್ರಿಕೆಟ್ ತಂಡದ ಮಾಜಿ ಬ್ಯಾಟಿಂಗ್ ಕೋಚ್ ಆಗಿದ್ದ ವಿಕ್ರಮ್ ರಾಥೋಡ್ ರಾಯಲ್ಸ್ನ ಸಹಾಯಕ ಕೋಚ್ ಆಗಲಿದ್ದಾರೆ. ದ್ರಾವಿಡ್ ಮತ್ತು ರಾಥೋಡ್ ಭಾರತ ಕ್ರಿಕೆಟ್ಗೆ ಶ್ರಮಿಸಿದ್ದರು. ಈ ಜೋಡಿ ಐಪಿಎಲ್ ಫ್ರಾಂಚೈಸಿಯಲ್ಲೂ ಮುಂದುವರಿಯಲಿದ್ದಾರೆ ಎಂದು ಹೇಳಲಾಗಿದೆ. ಸದ್ಯ ತಂಡದ ಕೋಚ್ ಆಗಿರುವ ಶ್ರೀಲಂಕಾದ ಕುಮಾರ ಸಂಗಕ್ಕಾರ ಅವರು ಇತರ ಲೀಗ್‌ಗಳಾದ SA20ಯ ಪಾರ್ಲ್ ರಾಯಲ್ಸ್ ಮತ್ತು CPL ನಲ್ಲಿ ಬಾರ್ಬಡೋಸ್ ರಾಯಲ್ಸ್ನ ತರಬೇತುದಾರರಾಗಿ ಮುಂದುವರಿಯಲಿದ್ದಾರೆ ಎಂದು ವರದಿ ಹೇಳಿದೆ.