ಹೈದರಾಬಾದ್: ಭಾರತೀಯ ಕ್ರಿಕೆಟ್ ತಂಡದ ಟಿ-20 ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿರುವ ತಂಡದ ಮಾಜಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ದೇಶದ ಅತ್ಯುನ್ನತ ನಾಗರಿಕ ಗೌರವವಾದ 'ಭಾರತ ರತ್ನ'ಕ್ಕೆ ಅರ್ಹರಾಗಿದ್ದಾರೆ ಎಂದು ಮಾಜಿ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಇದುವರೆಗೆ ಸಚಿನ್ ತೆಂಡೂಲ್ಕರ್ ಈ ಪ್ರತಿಷ್ಠಿತ ಪ್ರಶಸ್ತಿಗೆ ಪಾತ್ರರಾದ ಏಕೈಕ ಭಾರತೀಯ ಕ್ರಿಕೆಟಿಗರಾಗಿದ್ದಾರೆ. 2014ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ಅತ್ಯುನ್ನತ ನಾಗರಿಕ ಗೌರವವನ್ನು ಸಚಿನ್ ಸ್ವೀಕರಿಸಿದ್ದರು. ಇದೀಗ ಹಿರಿಯ ಕ್ರಿಕೆಟಿಗ ಗವಾಸ್ಕರ್, ರಾಹುಲ್ ದ್ರಾವಿಡ್ ಅವರ ಹೆಸರನ್ನು ಮುನ್ನೆಲೆಗೆ ತಂದಿದ್ದಾರೆ.
ತಮ್ಮ ಕೋಚಿಂಗ್ ಅಧಿಕಾರಾವಧಿಯಲ್ಲಿ ಹೊಸ ಪ್ರತಿಭೆಗಳನ್ನು ಬೆಳೆಸಿದ್ದಕ್ಕಾಗಿ ದ್ರಾವಿಡ್‌ರನ್ನು ಶ್ಲಾಘಿಸಿರುವ ಗವಾಸ್ಕರ್, ''ಭಾರತ ಸರ್ಕಾರವು ದ್ರಾವಿಡ್ ಅವರಿಗೆ ಭಾರತ ರತ್ನ ನೀಡಿ ಗೌರವಿಸಿದರೆ ಅದು ಸೂಕ್ತ. ಅದಕ್ಕೆ ಅವರು ನಿಜವಾಗಿಯೂ ಅರ್ಹರಾಗಿದ್ದಾರೆ'' ಎಂದು ಹೇಳಿದ್ದಾರೆ. 'ಮಿಡ್-ಡೇ' ಪತ್ರಿಕೆಯಲ್ಲಿ ಪ್ರಕಟವಾದ ತಮ್ಮ ಅಂಕಣದಲ್ಲಿ ಇದನ್ನು ಬರೆದಿದ್ದು, ಟೀಂ ಇಂಡಿಯಾದ ಆಟಗಾರ, ನಾಯಕ ಮತ್ತು ಕೋಚ್ ಆಗಿ ದ್ರಾವಿಡ್ ಮಾಡಿದ ಸಾಧನೆಗಳನ್ನೂ ಎತ್ತಿ ತೋರಿಸಿದ್ದಾರೆ.
ಇದನ್ನೂ ಓದಿ: ಯುವ ಕ್ರಿಕೆಟಿಗರು ತಾವು ಪ್ರವೇಶಿಸಿದ ತಕ್ಷಣವೇ ತೋರಿದ ಪ್ರದರ್ಶನ ನೋಡಿ ಖುಷಿಯಾಯಿತು: ಕೋಚ್ ಅನುಭವ ಬಿಚ್ಚಿಟ್ಟ ದ್ರಾವಿಡ್
''ವರ್ಷದ ಹಿಂದೆ ಸಮಾಜಕ್ಕೆ ಅಪಾರ ಸೇವೆ ಸಲ್ಲಿಸಿದ ಕೆಲವು ನಾಯಕರಿಗೆ 'ಭಾರತ ರತ್ನ' ನೀಡಲಾಗಿತ್ತು. ಇವರು ಹೊಂದಿದ್ದ ಪ್ರಭಾವವು ಹೆಚ್ಚಾಗಿ ಅವರ ಪಕ್ಷಕ್ಕೆ ಮತ್ತು ಅವರು ಬಂದ ದೇಶದ ಭಾಗಕ್ಕೆ ಸೀಮಿತವಾಗಿದೆ ಎಂದು ಅತ್ಯಂತ ಕಟ್ಟಾ ಬೆಂಬಲಿಗರೂ ಸಹ ಒಪ್ಪಿಕೊಳ್ಳುತ್ತಾರೆ. ದ್ರಾವಿಡ್ ಅವರ ಸಾಧನೆಗಳು ಎಲ್ಲ ಪಕ್ಷದ ಮತ್ತು ಜಾತಿ, ಧರ್ಮ ಮತ್ತು ಸಮುದಾಯಗಳ ಗಡಿಗಳನ್ನು ಮೀರಿ ಸಂತೋಷ ನೀಡಿವೆ. ಇಡೀ ದೇಶಕ್ಕೆ ಹೇಳಲಾಗದ ಖುಷಿ ಕೊಟ್ಟಿದೆ. ಖಂಡಿತವಾಗಿಯೂ ಈ ಸಂತೋಷಕ್ಕೆ ದೇಶವು ನೀಡಬಹುದಾದ ಅತ್ಯುನ್ನತ ಪುರಸ್ಕಾರಕ್ಕೆ ಅರ್ಹವಾಗಿದೆ'' ಎಂದು ಮಾಜಿ ಕ್ರಿಕೆಟಿಗ ತಿಳಿಸಿದ್ದಾರೆ.
ಮುಂದುವರೆದು, ''ಎಲ್ಲರೂ ಮುಂದೆ ಬನ್ನಿ, ದಯವಿಟ್ಟು ನನ್ನೊಂದಿಗೆ ಸೇರಿ. ಭಾರತದ ಶ್ರೇಷ್ಠ ಪುತ್ರರಲ್ಲಿ ಒಬ್ಬರನ್ನು ಗುರುತಿಸುವಂತೆ ಸರ್ಕಾರವನ್ನು ಕೇಳಿಕೊಳ್ಳಿ. 'ಭಾರತ ರತ್ನ' ರಾಹುಲ್ ಶರದ್ ದ್ರಾವಿಡ್. ಕೇಳಲು ಎಷ್ಟು ಸೊಗಸಾಗಿದೆ, ಅಲ್ಲವೇ?'' ಎಂದೂ ಗವಾಸ್ಕರ್ ತಮ್ಮ ಅಂಕಣದಲ್ಲಿ ಉಲ್ಲೇಖಿಸಿದ್ದಾರೆ.
ಜೂನ್ 19ರಂದು ನಡೆದ ಟಿ-20 ವಿಶ್ವಕಪ್‌ನ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಭಾರತ ತಂಡವು ಏಳು ರನ್‌ಗಳಿಂದ ಸೋಲಿಸಿ ಪ್ರಶಸ್ತಿಯನ್ನು ಎತ್ತಿ ಹಿಡಿದಿತ್ತು. ಈ ಗೆಲುವಿನ ಬಳಿಕ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ, ರವೀಂದ್ರ ಜಡೇಜಾ ಟಿ-20 ಕ್ರಿಕೆಟ್ಗೆ ವಿದಾಯ ಹೇಳಿದ್ದರು. ಅಲ್ಲದೇ, ಈ ಟೂರ್ನಿ ಮುಕ್ತಾಯದೊಂದಿಗೆ ದ್ರಾವಿಡ್ ಅವರ ಕೋಚ್ ಅವಧಿ ಮುಗಿದಿದೆ.
ಇದನ್ನೂ ಓದಿ: ರೋಹಿತ್ ನಾಯಕತ್ವದಲ್ಲಿ ಚಾಂಪಿಯನ್ಸ್ ಟ್ರೋಫಿ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆಲ್ಲುತ್ತೇವೆ: ಜಯ್ ಶಾ