ಪ್ಯಾರಿಸ್: 14 ಬಾರಿಯ ಫ್ರೆಂಚ್ ಓಪನ್ ಚಾಂಪಿಯನ್ ರಾಫೆಲ್ ನಡಾಲ್ ಅವರು ಈ ಬಾರಿ ಮೊದಲ ಸುತ್ತಿನಲ್ಲಿಯೇ ಸೋಲನುಭವಿಸಿ ಟೂರ್ನಿಯಿಂದ ಹೊರಬಿದ್ದರು.
ಸೋಮವಾರ ಪ್ಯಾರಿಸ್ನಲ್ಲಿ ನಡೆದ ಫ್ರೆಂಚ್ ಓಪನ್ 2024 ಟೆನ್ನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ವಿಶ್ವದ ನಾಲ್ಕನೇ ಶ್ರೇಯಾಂಕದ ಅಲೆಕ್ಸಾಂಡರ್ ಜ್ವೆರೆವ್ ವಿರುದ್ದ 3-6, 6-7, 3-6 ಸೆಟ್‌ಗಳಿಂದ ಅವರು ಸೋಲುಂಡರು. ಈ ಮೂಲಕ ನಾಲ್ಕನೇ ಸುತ್ತಿಗೂ ಮುನ್ನವೇ ನಡಾಲ್ ಫ್ರೆಂಚ್ ಓಪನ್ ಟೂರ್ನಿಯಿಂದ ಔಟ್ ಆಗಿದ್ದಾರೆ.
2005ರಲ್ಲಿ ಫ್ರೆಂಚ್ ಒಪನ್ ಪ್ರಶಸ್ತಿ ಗೆದ್ದ ನಂತರ ಇದುವರೆಗೂ ಆಡಿದ 116 ಪಂದ್ಯಗಳಲ್ಲಿ ನಡಾಲ್ ಅವರಿಗಿದು ನಾಲ್ಕನೇ ಸೋಲು. 2010ರಲ್ಲಿ ರಾಬಿನ್ ಸೊಡರ್ಲಿಂಗ್, 2015 ಮತ್ತು 2021ರಲ್ಲಿ ಟೆನ್ನಿಸ್ ದಿಗ್ಗಜ ನೊವಾಕ್ ಜೊಕೊವಿಕ್ ವಿರುದ್ದ ನಡಾಲ್‌ಗೆ ಸೋಲಾಗಿತ್ತು.
ಟೆನ್ನಿಸ್‌ಗೆ ನಡಾಲ್ ವಿದಾಯ?: ಪಂದ್ಯದ ಬಳಿಕ ಮಾತನಾಡಿದ ನಡಾಲ್, "ಇದು ನನ್ನ ಕೊನೆಯ ಪಂದ್ಯವಾಗುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ನಾನಿರುವಷ್ಟು ಸಮಯ ಇದನ್ನು ಆನಂದಿಸಲು ಬಯಸುತ್ತೇನೆ. ಈ ಭಾವನೆಗಳನ್ನು ಪದಗಳಲ್ಲಿ ವ್ಯಕ್ತಪಡಿಸುವುದು ಕಷ್ಟ" ಎಂದರು. ಏತನ್ಮಧ್ಯೆ, ಇದು ಅವರ ಕೊನೆಯ ಪಂದ್ಯವಾಗಲಿದೆ ಎಂದು ವರದಿಯಾಗಿದೆ.
2ನೇ ಅತೀ ಹೆಚ್ಚು ಗ್ರ್ಯಾನ್‌ಸ್ಲಾಮ್ ಗೆದ್ದ ದಾಖಲೆ: ರಾಫೆಲ್ ನಡಾಲ್ ಟೆನ್ನಿಸ್ ಇತಿಹಾಸದಲ್ಲಿ ಅತೀ ಹೆಚ್ಚು ಪುರುಷರ ಸಿಂಗಲ್ಸ್ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಗೆದ್ದ ಎರಡನೇ ಆಟಗಾರ. ಈ ಪಟ್ಟಿಯಲ್ಲಿ ಸರ್ಬಿಯಾದ ನೊವಾಕ್ ಜೊಕೊವಿಕ್ (24) ಅಗ್ರಸ್ಥಾನದಲ್ಲಿದ್ದರೆ, ಸ್ವಿಟ್ಜರ್ಲೆಂಡ್‌ನ ದಂತಕಥೆ ರೋಜರ್ ಫೆಡರರ್ (20) ಮೂರನೇ ಸ್ಥಾನದಲ್ಲಿದ್ದಾರೆ. ಟೆನಿಸ್ ಇತಿಹಾಸದಲ್ಲಿ ಅತೀ ಹೆಚ್ಚು ಬಾರಿ ಎಲ್ಲಾ ನಾಲ್ಕು ಪ್ರಮುಖ ಗ್ರ್ಯಾನ್‌ಸ್ಲಾಮ್ ಪಂದ್ಯಾವಳಿಗಳನ್ನು ನಡಾಲ್ ಜಯಿಸಿದ್ದಾರೆ ಎಂಬುದು ಗಮನಾರ್ಹ.
ಇದನ್ನೂ ಓದಿ: ಟೀಂ ಇಂಡಿಯಾ ಕೋಚ್ ಹುದ್ದೆಗಾಗಿ ಕೆಕೆಆರ್ ಫ್ರಾಂಚೈಸಿ ಬಿಡ್ತಾರಾ ಗೌತಮ್ ಗಂಭೀರ್? - Gautam Gambhir