ನವದೆಹಲಿ: ಭಾರತದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 100 ಟೆಸ್ಟ್‌ಗಳಲ್ಲಿ ಕಾಣಿಸಿಕೊಂಡ 14ನೇ ಭಾರತೀಯ ಆಟಗಾರರಾಗಿದ್ದು, ಅವರಿಗೆ ಇತ್ತೀಚೆಗೆ ತಂಡದ ಸದಸ್ಯರೆಲ್ಲ ಸೇರಿ ಗೌರವ ಸಲ್ಲಿಸಿದರು. ಈ ಮಧುರ ಕ್ಷಣವನ್ನು ಅಶ್ವಿನ್ ಹೇಳಿಕೊಂಡಿದ್ದಾರೆ. ಯೂಟ್ಯೂಬ್ವೊಂದರ ಸಂದರ್ಶನಲ್ಲಿ ಮಾತನಾಡಿರುವ ಅವರು, ಅದೊಂದು ಅವಿಸ್ಮರಣೀಯ ಕ್ಷಣ. ಪ್ರರಿಶ್ರಮಕ್ಕೆ ಸಿಕ್ಕ ಪ್ರತಿಫಲ ಎಂದು ಪುಳಕಿತರಾದರು.
ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಇತರ ತಂಡದ ಸದಸ್ಯರು ಪಂದ್ಯದ ಆರಂಭಕ್ಕೂ ಮುನ್ನ ತಮಗೆ ನೀಡಿದ ಗೌರವದ ಬಗ್ಗೆ ಪ್ರಸ್ತಾಪ ಮಾಡಿದ ಅಶ್ವಿನ್, ಅಂದು ನಡೆದ ಗೌರವ ಸಲ್ಲಿಕೆ ನನ್ನ ಜೀವಮಾನಕ್ಕೆ ಸಿಕ್ಕ ಪ್ರತಿಫಲ, ರೋಹಿತ್ ಶರ್ಮಾ ಅವರಂತಹ ಮುಗ್ಧ ಮನಸ್ಸಿನ ನಾಯಕ ಪಡೆಯಲು ನಾವು ಧನ್ಯರು, ಇಂಗ್ಲೆಂಡ್ ವಿರುದ್ದದ ಐದನೇ ಟೆಸ್ಟ್ ಪಂದ್ಯದ ಆರಂಭಕ್ಕೂ ಮುನ್ನ ಟೀಂ ಇಂಡಿಯಾ ಹೆಡ್ ಕೋಚ್ ರಾಹುಲ್ ದ್ರಾವಿಡ್ ಅವರು 100ನೇ ಟೆಸ್ಟ್ ಕ್ಯಾಪ್ ನೀಡಿ ವಿಶೇಷ ಗೌರವ ಸಲ್ಲಿಸಿದರೆ, ತಂಡದ ಸಹ ಆಟಗಾರರೆಲ್ಲ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದ್ದು ಸ್ಮರಣೀಯ ಎಂದು ಕೆಲವು ಘಟನಾವಳಿಯನ್ನು ಮೆಲುಕು ಹಾಕಿದರು.
ಅಂದಿನ ಸಿದ್ಧತೆ ಹೇಗಿತ್ತು ಎಂಬುದರ ಜೊತೆಗೆ ರೋಹಿತ್ ಮತ್ತು ತಮ್ಮ ನಡುವೆ ನಡೆದ ಸಂಭಾಷಣೆಯನ್ನು ಅಶ್ವಿನ್ ಪ್ರಸ್ತಾಪಿಸಿದ್ದಾರೆ. ಅಂದು ನನ್ನ ಬಳಿ ಆಗಮಿಸಿದ ರೋಹಿತ್, ನಾವು ಗೌರವ ಸಲ್ಲಿಸುವುದಕ್ಕಾಗಿ ಒಂದು ಕಾರ್ಯಕ್ರಮ ಏರ್ಪಡಿಸಿದ್ದೇವೆ. ಹಾಗಾಗಿ ಡ್ರೆಸ್ಸಿಂಗ್ ರೂಮಿನಲ್ಲಿ ಸ್ವಲ್ಪ ಸುತ್ತಾಡಿ ಬಾ ಅಂತ ಹೇಳಿದ್ದು ಅಚ್ಚರಿ ತರಿಸಿತು. ಅದರಂತೆ ನಾನು ಹೋಗಿ ಮತ್ತೆ ಮರಳಿದೆ. ಅಷ್ಟೋತ್ತಿಗಾಗಲೇ ಎಲ್ಲರೂ ನನಗಾಗಿ ಕಾಯುತ್ತಿದ್ದರು. ನಾನು ಆಗಮಿಸುತ್ತಿದ್ದಂತೆ ಎಲ್ಲರೂ ಕ್ಲಾಪ್ ಮಾಡಿ ನನ್ನನ್ನು ಗೌರವದೊಂದಿಗೆ ಕ್ರೀಸ್ಗೆ ಬರಮಾಡಿಕೊಂಡರು. ಇದು ತುಂಬಾ ಆಸಕ್ತಿದಾಯಕ ಕ್ಷಣವಾಗಿತ್ತು. ಅಲ್ಲಿ ನಿಂತಿರುವ ಎಲ್ಲಾ ಹುಡುಗರು ಆ ಕ್ಷಣವನ್ನು ಗುರುತಿಸಿ ಮತ್ತು ಗೌರವಿಸಿದರು. ಅಂದು ಅವರು ನೀಡಿದ ಪ್ರೀತಿಯನ್ನು ಯಾವ ಪದಗಳಲ್ಲಿಯೂ ಹೇಳಲು ಸಾಧ್ಯವಿಲ್ಲ ಎಂದು ಆ ಮಧುರ ಕ್ಷಣಗಳನ್ನು ನೆನದರು.
ಇತ್ತೀಚೆಗೆ ಅಶ್ವಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ 500 ವಿಕೆಟ್ ಪಡೆಯುವ ಮೂಲಕ 2ನೇ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಹಿಂದೆ ಅನಿಲ್ ಕುಂಬ್ಳೆ ಈ ಸಾಧನೆ ಮಾಡಿದ್ದರು. ಧರ್ಮಾಶಾಲಾದಲ್ಲಿ ತಮ್ಮ ಟೆಸ್ಟ್ ವೃತ್ತಿ ಜೀವನದ 100ನೇ ಪಂದ್ಯವಾಡಿದ್ದ ಅಶ್ವಿನ್, ಪ್ರಥಮ ಇನಿಂಗ್ಸ್‌ನಲ್ಲಿ 4 ಹಾಗೂ ದ್ವಿತೀಯ ಇನಿಂಗ್ಸ್‌ನಲ್ಲಿ 5 ವಿಕೆಟ್ ಸಾಧನೆ ಮಾಡಿದ್ದರು.
ಇದನ್ನೂ ಓದಿ: ಶ್ರೀಲಂಕಾ ಪುರುಷರ ಕ್ರಿಕೆಟ್ ತಂಡದ ಬೌಲಿಂಗ್ ಕೋಚ್ ಆಗಿ ಪಾಕಿಸ್ತಾನ ಮಾಜಿ ವೇಗಿ ಅಕೀಬ್ ಜಾವೇದ್ ನೇಮಕ