ರಾಂಚಿ: ಇಲ್ಲಿನ ಜೆಎಸ್‌ಸಿಎ ಇಂಟರ್‌ನ್ಯಾಷನಲ್ ಸ್ಟೇಡಿಯಂ ಕಾಂಪ್ಲೆಕ್ಸ್‌ನಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಣ ನಾಲ್ಕನೇ ಟೆಸ್ಟ್ ನಲ್ಲಿ ರವಿಚಂದ್ರನ್ ಅಶ್ವಿನ್ ವಿಶೇಷ ದಾಖಲೆಯೊಂದನ್ನು ಮಾಡಿದ್ದಾರೆ. ಈ ಮೂಲಕ ಅವರು ಈ ಪಂದ್ಯವನ್ನು ಸ್ಮರಣೀಯವಾಗಿಸಿಕೊಂಡರು. ಏಕೆಂದರೆ ಅವರು ದಾಖಲೆ ಪುಸ್ತಕದಲ್ಲಿ ಮತ್ತೊಂದು ಸಾಧನೆಯನ್ನು ತಮ್ಮ ಹೆಸರಿಗೆ ಬರೆಯಿಸಿಕೊಂಡರು.
ನಾಲ್ಕನೇ ಟೆಸ್ಟ್ನ ಮೊಲದ ಇನಿಂಗ್ಸ್‌ನ 21ನೇ ಓವರ್‌ನಲ್ಲಿ ಜಾನಿ ಬೈರ್‌ಸ್ಟೋವ್ ಅವರನ್ನು ಔಟ್ ಮಾಡುವ ಮೂಲಕ ಅಶ್ವಿನ್ ಇಂಗ್ಲೆಂಡ್ ವಿರುದ್ಧ 100 ಟೆಸ್ಟ್ ವಿಕೆಟ್‌ಗಳನ್ನು ಪಡೆದ ಭಾರತದ ಮೊದಲ ಬೌಲರ್ ಎಂಬ ದಾಖಲೆ ಬರೆದರು. 21ನೇ ಓವರ್ನ ಎರಡನೇ ಬಾಲ್ ಅನ್ನು ಫುಲ್ ಲೆಂತ್ ಆಗಿ ಎಸೆದರು. ಈ ಎಸೆತವನ್ನು ಬೈರ್‌ಸ್ಟೋವ್ ಸ್ವೀಪ್ ಮಾಡಲು ಪ್ರಯತ್ನಿಸಿದರು. ಆಗ ಬ್ಯಾಟ್ ಪ್ಯಾಡ್ಗೆ ಬಡೆದಿತ್ತು. ಆದರೆ ಅಂಪೈರ್ ಅದನ್ನು ನಾಟ್ಔಟ್ ಎಂದು ತೀರ್ಪು ನೀಡಿದ್ದರು. ಅಂಪೈರ್ ನಿರ್ಣಯದ ವಿರುದ್ಧ DRS ಮೊರೆ ಹೋಗಿದ್ದರಿಂದ ಇಲ್ಲಿ ಔಟ್ ಎಂಬ ತೀರ್ಮಾನ ಬಂತು. ವಿಶೇಷ ಎಂದರೆ ಇಂಗ್ಲೆಂಡ್ ತಂಡದ ವಿರುದ್ಧ ಅಶ್ವಿನ್ ಪಡೆದ 100ನೇ ವಿಕೆಟ್ ಆಗಿತ್ತು. ಭಾರತೀಯ ಬೌಲರ್ ಒಬ್ಬ ಈ ತಂಡದ 100 ವಿಕೆಟ್‌ಗಳನ್ನು ಪಡೆದಿರಲಿಲ್ಲ. ಈ ಸಾಧನೆಯನ್ನು ಅಶ್ವಿನ್ ಮಾಡಿದರು.
ಪ್ರಸ್ತುತ ಸಕ್ರಿಯವಾಗಿರುವ ಬೌಲರ್‌ಗಳಲ್ಲಿ, ನಾಥನ್ ಲಿಯಾನ್ ಇಂಗ್ಲೆಂಡ್ ವಿರುದ್ಧ 100 ಅಥವಾ ಅದಕ್ಕಿಂತ ಹೆಚ್ಚಿನ ವಿಕೆಟ್‌ಗಳನ್ನು ಪಡೆದ ಏಕೈಕ ಕ್ರಿಕೆಟಿಗರಾಗಿದ್ದಾರೆ. ಭಾರತದ ಪರ, ಬಿಎಸ್ ಚಂದ್ರಶೇಖರ್ 38 ಇನ್ನಿಂಗ್ಸ್‌ಗಳಿಂದ 95 ವಿಕೆಟ್‌ಗಳನ್ನು ಪಡೆಯುವ ಮೂಲಕ ಇಂಗ್ಲೆಂಡ್ ವಿರುದ್ಧ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಭಾರತೀಯ ಬೌಲರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಅನಿಲ್ ಕುಂಬ್ಳೆ 36 ಇನ್ನಿಂಗ್ಸ್‌ಗಳಿಂದ 92 ವಿಕೆಟ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಬಿಷನ್ ಸಿಂಗ್ ಬೇಡಿ ಮತ್ತು ಕಪಿಲ್ ದೇವ್ ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನದಲ್ಲಿದ್ದಾರೆ.
ಅಷ್ಟೇ ಅಲ್ಲ ಆರ್ ಅಶ್ವಿನ್ ಇನ್ನೊಂದು ಸಾಧನೆಯನ್ನೂ ಕೂಡಾ ಮಾಡಿದರು. ಇಯಾನ್ ಬಾಥಮ್ ನಂತರ ಯಾವುದೇ ಎದುರಾಳಿ ವಿರುದ್ಧ 1000 ರನ್ ಮತ್ತು 100 ವಿಕೆಟ್ ಕಿತ್ತ ಸಾಧನೆಯನ್ನ ಅಶ್ವಿನ್ ಮಾಡಿದ್ದು, ವೇಗವಾಗಿ 1000 ಸಾವಿರ ರನ್ ಹಾಗೂ 100 ವಿಕೆಟ್ ಪಡೆದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಇಯಾನ್ ಬಾಥಮ್ ಆಸ್ಟ್ರೇಲಿಯಾ ವಿರುದ್ಧ 22 ಟೆಸ್ಟ್‌ಗಳಲ್ಲಿ ಮೈಲಿಗಲ್ಲನ್ನು ಸ್ಥಾಪಿಸಿದರೆ, ಅಶ್ವಿನ್ ಇಂಗ್ಲೆಂಡ್ ವಿರುದ್ಧ 23 ಟೆಸ್ಟ್‌ಗಳಲ್ಲಿ ಈ ಸಾಧನೆ ಮಾಡಿ ಎರಡನೇಯವರಾದರು.
1000 ರನ್ + 100 ವಿಕೆಟ್ ಸಾಧನೆ ಮಾಡಿದ ಆಟಗಾರರು
ಜಾರ್ಜ್ ಗಿಫೆನ್ vs ಇಂಗ್ಲೆಂಡ್
ಮೋನಿ ನೋಬಲ್ vs ಇಂಗ್ಲೆಂಡ್
ವಿಲ್‌ಫ್ರೆಡ್ ರೋಡ್ಸ್ vs ಆಸ್ಟ್ರೇಲಿಯಾ
ಗಾರ್‌ಫೀಲ್ಡ್ ಸೋಬರ್ಸ್ vs ಇಂಗ್ಲೆಂಡ್
ಇಯಾನ್ ಬಾಥಮ್ vs ಆಸ್ಟ್ರೇಲಿಯಾ
ಸ್ಟುವರ್ಟ್ ಬ್ರಾಡ್ vs ಆಸ್ಟ್ರೇಲಿಯಾ
ಆರ್ ಅಶ್ವಿನ್ vs ಇಂಗ್ಲೆಂಡ್
ಇದನ್ನು ಓದಿ: ರಾಂಚಿ ಟೆಸ್ಟ್: ಚೊಚ್ಚಲ ಪಂದ್ಯದಲ್ಲೇ ಆಕಾಶ್ ದೀಪ್ ಮಿಂಚು, ಇಂಗ್ಲೆಂಡ್ 112ಕ್ಕೆ 5 ವಿಕೆಟ್