ಹೈದರಾಬಾದ್: ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದ ಪುಣೇರಿ ಪಲ್ಟನ್ ಶುಕ್ರವಾರ ಇಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ವಿರುದ್ಧ ಅಧಿಕಾರಯುತ ಗೆಲುವು ಸಾಧಿಸುವ ಮೂಲಕ ಚೊಚ್ಚಲ ಪ್ರೊ ಕಬಡ್ಡಿ ಪ್ರಶಸ್ತಿಯನ್ನು ಎತ್ತಿ ಹಿಡಿಯಿತು.
ಜಿಎಂಸಿ ಬಾಲಯೋಗಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ರೋಚಕ ಹಣಾಹಣಿಯಲ್ಲಿ ಪುಣೇರಿ ಪಲ್ಟನ್ 28-25 ಅಂತರದಲ್ಲಿ ಜಯ ಸಾಧಿಸಿತು. ಮೊದಲ ಪ್ರಶಸ್ತಿಯ ಗುರಿಯಲ್ಲಿದ್ದ ಹರಿಯಾಣ ಸ್ಟೀಲರ್ಸ್ ಸೋಲುಂಡಿತು. ಆರಂಭದಿಂದಲೂ ಪುಣೇರಿ ಪೈಲ್ವಾನ್ಗಳು ಅದ್ಭುತ ಡಿಫೆಂಡಿಂಗ್ ಮೂಲಕ ಖಾತೆ ತೆರೆದರು. ಇದಾದ ಬಳಿಕ ಎಲ್ಲೂ ಹರಿಯಾಣಕ್ಕೆ ಮುನ್ನಡೆ ಸಾಧಿಸಲು ಬಿಡಲಿಲ್ಲ.
ಸ್ಟೀಲರ್ಸ್ ಪರವಾಗಿ ರೈಡರ್ ಅಂಕಿತ್ ಮೊದಲ ಅಂಕ ಗಳಿಸಿದರು. ರಾಹುಲ್ ಸೇಠಪಾಲ್ ಸತತ ಅಂಕ ಗಳಿಸುವ ಮೂಲಕ ಹಣಾಹಣಿಯನ್ನು ಮತ್ತಷ್ಟು ರೋಚಕಗೊಳಿಸಿದರು. ಮೊದಲಾರ್ಧದ ಕೊನೆಯ ಒಂದು ನಿಮಿಷ ಬಾಕಿ ಇದ್ದಾಗ ಸೂಪರ್ ರೈಡ್ ಮಾಡಿದ ಪಂಕಜ್ 4 ಅಂಕ ಸಂಪಾದಿಸಿ, 13-10 ರಲ್ಲಿ ಪುಣೆ ಮುನ್ನಡೆ ಪಡೆಯುವಂತೆ ಮಾಡಿದರು.
ದ್ವಿತೀಯಾರ್ಧದಲ್ಲಿ ಬಲಿಷ್ಠ ಹರಿಯಾಣ ತಿರುಗಿ ಬೀಳಲಿದೆ ಎಂದು ಭಾವಿಸಲಾಗಿತ್ತು. ಆದರೆ, ಇದ್ಯಾವುದಕ್ಕೂ ಆಸ್ಪದ ನೀಡದ ಪುಣೆ ಮತ್ತಷ್ಟು ಪ್ರಭಾವ ಮುಂದುವರೆಸಿತು. 23ನೇ ನಿಮಿಷದಲ್ಲಿ ಉಳಿದ ಇಬ್ಬರನ್ನೂ ಔಟ್ ಮಾಡುವ ಮೂಲಕ ಪುಣೆಯ ಮೋಹಿತ್ ತಂಡಕ್ಕೆ 4 ಅಂಕ ತರುವ ಜೊತೆಗೆ ಮುನ್ನಡೆಯನ್ನು 18-11 ಕ್ಕೆ ಏರಿಸಿದರು. ಫೈನಲ್‌ನ ಏಕೈಕ ಆಲೌಟ್ ಕೂಡ ಇದಾಗಿತ್ತು.
ಇದಾದ ಬಳಿಕವೂ ಆಟ ಮುಂದುವರಿಸಿದ ಪುಣೆ, ಉತ್ತಮ ರೈಡಿಂಗ್ ಮತ್ತು ಟ್ಯಾಕಲ್ನಿಂದ ಅಂಕ ಗಳಿಸುತ್ತಲೇ ಸಾಗಿತು. ಜೊತೆಗೆ ಬೋನಸ್ ಅಂಕಗಳನ್ನು ಪಡೆದುಕೊಂಡಿತು. ಆಟದ ಕೊನೆಯವರೆಗೂ ಬಿಗಿ ಹಿಡಿತ ಸಾಧಿಸಿದ್ದ ಪಲ್ಟನ್ ಅರ್ಹವಾಗಿಯೇ ಪ್ರಶಸ್ತಿ ಜಯಿಸಿತು.
9 ಅಂಕ ಗಳಿಸಿದ ಪಂಕಜ್, 5 ಅಂಕ ಗಳಿಸಿದ ಪುಣೆ ಆಟಗಾರ ತಂಡದ ಗೆಲುವಿನ ರೂವಾರಿ ಎನಿಸಿಕೊಂಡರು. ಟೂರ್ನಿಯುದ್ದಕ್ಕೂ ಡಿಫೆನ್ಸ್ನಲ್ಲಿ ಕರಾಮತ್ತು ಮಾಡಿದ್ದ ನಾಯಕ ಜೈದೀಪ್ ಮೋಹಿತ್ ಫೈನಲ್ನಲ್ಲಿ ಒಂದೂ ಅಂಕ ಗಳಿಸದೆ ಇರುವುದು ಹರಿಯಾಣದ ಸೋಲಿಗೆ ಬಹುಮುಖ್ಯ ಕಾರಣವಾಯಿತು.
ಅಸ್ಲಂ ಶ್ರೇಷ್ಠ ಆಟಗಾರ: ಪುಣೆ ತಂಡದ ನಾಯಕ ಅಸ್ಲಂ ಇನಾಮ್ದಾರ್ ಟೂರ್ನಿಯ ಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ಪಡೆದುಕೊಂಡರು. 23 ಪಂದ್ಯಗಳಲ್ಲಿ 276 ಅಂಕ ಗಳಿಸಿದ ಆಶು ಮಲಿಕ್ ಟೂರ್ನಿಯ ಶ್ರೇಷ್ಠ ಆಟಗಾರನಾದರು. 14 ಪಂದ್ಯಗಳಲ್ಲಿ 99 ಟ್ಯಾಕಲ್ ಅಂಕಗಳನ್ನು ಗಳಿಸಿದ ಪುಣೆಯ ಮೊಹಮದ್ ರೆಜಾ ಶದ್ಲು ಶ್ರೇಷ್ಠ ಡಿಫೆಂಡರ್ ಆಗಿ ಹೊರಹೊಮ್ಮಿದರು.
ಇನ್ನೊಂದೆಡೆ, ಇಡೀ ಟೂರ್ನಿಯಲ್ಲಿ 99 ಟ್ಯಾಕಲ್ ಪಾಯಿಂಟ್ಸ್ ಗಳಿಸಿದ ಪುಣೆಯ ಶಾದ್ಲೂ ಆವೃತ್ತಿಯೊಂದರಲ್ಲಿ ಅತಿ ಹೆಚ್ಚು ಟ್ಯಾಕಲ್ ಅಂಕ ಗಳಿಸಿದ ಮೊದಲ ಆಟಗಾರ ಎನಿಸಿಕೊಂಡರು. ಒಟ್ಟಾರೆ ಟೂರ್ನಿಯಲ್ಲಿ ಅತಿ ಹೆಚ್ಚು ಟ್ಯಾಕಲ್ ಪಡೆದ ದಾಖಲೆ ಯಪಿ ಯೋಧಾಸ್ನ ನಿತೇಶ್ಕುಮಾರ್ ಅವರ ಹೆಸರಲ್ಲಿದೆ. 2018 ರಲ್ಲಿ ಅವರು 100 ಅಂಕ ಗಳಿಸಿದ್ದರು.
ಇದನ್ನೂ ಓದಿ; ಇಂಗ್ಲೆಂಡ್ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ದೇವದತ್ ಪಡಿಕ್ಕಲ್ ಪದಾರ್ಪಣೆ?