ನವದೆಹಲಿ: ಭಾರತ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರ ಹುದ್ದೆ ನೇಮಕಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅರ್ಜಿ ಕರೆದಿದ್ದು, ಅದರ ಗಡುವು ಸೋಮವಾರಕ್ಕೆ (ಮೇ 27) ಮುಗಿದಿದೆ. ಈಗಾಗಲೇ 3 ಸಾವಿರಕ್ಕೂ ಅಧಿಕ ಅರ್ಜಿಗಳನ್ನು ಬಿಸಿಸಿಐ ಸ್ವೀಕರಿಸಿದೆ ಎಂದು ವರದಿಯಾಗಿದೆ. ವಿಶೇಷ ಎಂದರೆ ಟೀಂ ಇಂಡಿಯಾ ಕೋಚ್ ಹುದ್ದೆಗೆ ನೇಮಕ ಬಯಸಿ ನರೇಂದ್ರ ಮೋದಿ, ಅಮಿತ್ ಶಾ, ಸಚಿನ್ ತೆಂಡೂಲ್ಕರ್ ಅವರು ಅರ್ಜಿ ಸಲ್ಲಿಸಿದ್ದಾರೆ.
ಅಚ್ಚರಿಯಾದರೂ ಇದು ನಿಜ. ಬಿಸಿಸಿಐಗೆ ಬಂದಿರುವ ಅರ್ಜಿಗಳ ಪೈಕಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಮಾಜಿ ಕ್ರಿಕೆಟಿಗರಾದ ಮಹೇಂದ್ರ ಸಿಂಗ್ ಧೋನಿ, ವೀರೇಂದ್ರ ಸೆಹ್ವಾಗ್ ಸೇರಿದಂತೆ ಹಲವರ ಹೆಸರಿದೆ. ಆದರೆ, ಇವು ನಕಲಿಯಾಗಿವೆ ಎಂದು ವರದಿಯಲ್ಲಿ ಹೇಳಲಾಗಿದೆ.
ಆನ್ಲೈನ್ ಮೂಲಕ ಬಿಸಿಸಿಐ ಅರ್ಜಿ ಆಹ್ವಾನಿಸಿದೆ. ಇದನ್ನೇ ಬಳಸಿಕೊಂಡ ಕೆಲವರು ಹಲವು ರಾಜಕಾರಣಿಗಳು, ಸೆಲೆಬ್ರಿಟಿಗಳು, ಉದ್ಯಮಿಗಳು, ಮಾಜಿ ಕ್ರಿಕೆಟಿಗರ ಹೆಸರಿನಲ್ಲಿ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಅದರಲ್ಲೂ ಪ್ರಧಾನಿ, ಗೃಹ ಸಚಿವರ ಹೆಸರಿನಲ್ಲಿ ಅರ್ಜಿ ಹಾಕಿದ್ದು, ಹಾಸ್ಯದ ಸಂಗತಿಯಾಗಿದೆ. ಇದರೊಂದಿಗೆ ಕೋಚ್ ಹುದ್ದೆಯ ರೇಸಲ್ಲೇ ಇಲ್ಲದ ಮಾಜಿ ಕ್ರಿಕೆಟಿಗರಾದ 'ಕ್ರಿಕೆಟ್ ದೇವರು' ಸಚಿನ್ ತೆಂಡೂಲ್ಕರ್, ಮಹೇಂದ್ರ ಸಿಂಗ್ ಧೋನಿ, ಹರ್ಭಜನ್ ಸಿಂಗ್ ಮತ್ತು ವೀರೇಂದ್ರ ಸೆಹ್ವಾಗ್ ಅವರೂ ಅರ್ಜಿದಾರರಾಗಿದ್ದಾರೆ.
"ಕಳೆದ ವರ್ಷವೂ ಬಿಸಿಸಿಐಗೆ ಇಂತಹ ಅರ್ಜಿಗಳು ಬಂದಿದ್ದವು. ಈ ಬಾರಿಯೂ ಇದೇ ರೀತಿಯಾಗಿದೆ. ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದರಿಂದ ಕೆಲವರು ಇದ್ದನ್ನೇ ದುರ್ಬಳಕೆ ಮಾಡಿಕೊಂಡು, ಗಣ್ಯರ ಹೆಸರಿನಲ್ಲಿ ನಕಲಿ ಅರ್ಜಿ ಹಾಕಿದ್ದಾರೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಿಸಿಸಿಐ ನೀಡಿದ ಜಾಹೀರಾತು ಹೀಗಿದೆ: ಬಿಸಿಸಿಐ ಹೊರಡಿಸಿದ ಜಾಹೀರಾತಿನ ಪ್ರಕಾರ, ಅರ್ಜಿದಾರರು ಭಾರತ ತಂಡವನ್ನು ನಿಭಾಯಿಸಲು ಬೇಕಾದ ದೃಢತೆ ಹೊಂದಿರಬೇಕು. ನಿರೀಕ್ಷೆ ಮತ್ತು ಒತ್ತಡವನ್ನು ನಿರ್ವಹಿಸಲು ಸಿದ್ಧರಿರಬೇಕು. ಯಾವುದೇ ಪರಿಸ್ಥಿತಿಯಲ್ಲಿ ಮತ್ತು ಆಟದ ಸ್ವರೂಪಗಳಲ್ಲಿ ನಿರಂತರ ಯಶಸ್ಸನ್ನು ತಂದಕೊಡುವ ಮೂಲಕ ಕ್ರಿಕೆಟ್ ತಂಡವನ್ನು ವಿಶ್ವ ದರ್ಜೆಗೆ ಏರಿಸುವಲ್ಲಿ ಸಹಾಯ ಮಾಡಬೇಕು. ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಯ ಕ್ರಿಕೆಟಿಗರು ರೂಪಿಸಬೇಕು. ಅಂತಹವರು ಅರ್ಜಿ ಸಲ್ಲಿಸಬಹುದು ಎಂದಿದೆ.
ಸದ್ಯ ಟೀಂ ಇಂಡಿಯಾದ ಮುಖ್ಯ ತರಬೇತುದಾರರಾದ ರಾಹುಲ್ ದ್ರಾವಿಡ್ ಅವರ ಅವಧಿಯು ಮುಂಬರುವ ಟಿ20 ವಿಶ್ವಕಪ್ ಬಳಿಕ ಅಂತ್ಯಗೊಳ್ಳಲಿದೆ. ಈ ಅವಧಿಯೊಳಗೆ ಭಾರತ ತಂಡಕ್ಕೆ ಹೊಸ ಕೋಚ್ ಅನ್ನು ಆಯ್ಕೆ ಮಾಡಲು ಬಿಸಿಸಿಐ ಮುಂದಾಗಿದೆ. ಕೋಚ್ ರೇಸ್ನಲ್ಲಿ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರ ಹೆಸರು ಮುಂಚೂಣಿಯಲ್ಲಿದೆ.
ಇದನ್ನೂ ಓದಿ: ಟೀಂ ಇಂಡಿಯಾ ಕೋಚ್ ಹುದ್ದೆಗಾಗಿ ಕೆಕೆಆರ್ ಫ್ರಾಂಚೈಸಿ ಬಿಡ್ತಾರಾ ಗೌತಮ್ ಗಂಭೀರ್? - Gautam Gambhir