ಪ್ಯಾರಿಸ್(ಫ್ರಾನ್ಸ್): ಭಾರತದ ಸ್ಟಾರ್ ಷಟ್ಲರ್ ಲಕ್ಷ್ಯ ಸೇನ್ ಒಲಿಂಪಿಕ್ಸ್ ಬ್ಯಾಡ್ಮಿಂಟನ್ ಕಂಚಿನ ಪದಕ ಪಂದ್ಯದಲ್ಲಿ ಮಲೇಷ್ಯಾದ ಪ್ರತಿಸ್ಪರ್ಧಿ ವಿರುದ್ಧ ಸೋಲನುಭವಿಸಿದರು.
ಇಂದು ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಲಕ್ಷ್ಯ ಅವರು ಮಲೇಷ್ಯಾದ ಲೀ ಜಿ ಜಿಯಾ ವಿರುದ್ಧ 21-13, 16-21, 11-21 ಸೆಟ್‌ಗಳಿಂದ ಸೋಲನುಭವಿಸಿದರು. ಇದರೊಂದಿಗೆ ಭಾರತದ ಸ್ಟಾರ್ ಷಟ್ಲರ್ ಲಕ್ಷ್ಯ ಸೇನ್ ಇತಿಹಾಸ ಸೃಷ್ಟಿಸುವ ಅವಕಾಶ ಕಳೆದುಕೊಂಡರು.
ಸೇನ್ ಇಂದು ಪದಕ ಗೆದ್ದಿದ್ದರೆ ಒಲಿಂಪಿಕ್ ಬ್ಯಾಡ್ಮಿಂಟನ್‌ನಲ್ಲಿ ಪದಕ ಗೆದ್ದ ಭಾರತದ ಮೊದಲ ಪುರುಷ ಆಟಗಾರ ಎಂಬ ದಾಖಲೆ ಬರೆಯುತ್ತಿದ್ದರು. 22ರ ಹರೆಯದ ಲಕ್ಷ್ಯ ಸೇನ್‌ಗೆ ಇದು ಚೊಚ್ಚಲ ಒಲಿಂಪಿಕ್ಸ್ ಆಗಿದ್ದು, ಸೆಮಿಫೈನಲ್ ತಲುಪುವ ಮೂಲಕ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ.
𝐁𝐑𝐄𝐀𝐊𝐈𝐍𝐆: 𝐋𝐚𝐤𝐬𝐡𝐲𝐚 𝐒𝐞𝐧 𝐋𝐎𝐒𝐄𝐒 𝐢𝐧 𝐁𝐫𝐨𝐧𝐳𝐞 𝐦𝐞𝐝𝐚𝐥 𝐦𝐚𝐭𝐜𝐡.
— India_AllSports (@India_AllSports) August 5, 2024
Lakshya lost to WR 7 Lee Zii Jia 21-13, 16-21, 11-21. #Badminton #Paris2024 #Paris2024withIAS pic.twitter.com/z3h9dmJ75j
ಇಂದಿನ ಪಂದ್ಯ ಹೀಗಿತ್ತು: ಉದಯೋನ್ಮುಖ ತಾರೆ ಸೇನ್, ಮೊದಲ ಸೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಪಂದ್ಯಾರಂಭದಿಂದಲೂ ಮಲೇಷ್ಯಾದ ಎದುರಾಳಿ ಮೇಲೆ ಪ್ರಾಬಲ್ಯ ತೋರಿದರು. ಆಕ್ರಮಣಕಾರಿಯಾಗಿ ಆಡುತ್ತಾ ಮಧ್ಯ ವಿರಾಮದ ತನಕ 11-7 ಅಂತರದಿಂದ ಮುನ್ನಡೆ ಸಾಧಿಸಿದರು. ಸೇನ್ ಅವರ ಅದ್ಭುತ ಸ್ಮ್ಯಾಶ್‌ಗೆ ಲಿ ಜಿ ಜಿಯಾ ಚೇತರಿಸಿಕೊಳ್ಳಲು ಆಗಿರಲಿಲ್ಲ. ಇದೇ ರೀತಿ ಆಟ ಮುಂದುವರಿಸಿ ಮೊದಲ ಸೆಟ್ ಅನ್ನು 21-13 ಅಂತರದಿಂದ ಸುಲಭವಾಗಿ ಗೆದ್ದರು.
ಉಭಯ ಆಟಗಾರರ ನಡುವಿನ ಎರಡನೇ ಸೆಟ್ ರೋಚಕವಾಗಿತ್ತು. ಸೇನ್ ಈ ಸೆಟ್ ಅನ್ನು ಉತ್ತಮವಾಗಿ ಪ್ರಾರಂಭಿಸಿದರು. ಆದರೆ ಕೊನೆಯಲ್ಲಿ ಎಡವಿದರು. ಆರಂಭಿಕ ಮುನ್ನಡೆ ಪಡೆದಿದ್ದ ಸೇನ್ ವಿರುದ್ಧ ಮಲೇಷ್ಯಾದ ಆಟಗಾರ ಪ್ರಬಲ ಪುನರಾಗಮನ ಮಾಡಿದರು. ಮಧ್ಯ ವಿರಾಮದವರೆಗೆ 11-8 ಮೂಲಕ 3 ಪಾಯಿಂಟ್‌ಗಳ ಗಮನಾರ್ಹ ಮುನ್ನಡೆ ಪಡೆದರು. ಇದಾದ ನಂತರ, ಸೇನ್ ಪುನರಾಗಮನಕ್ಕಾಗಿ ಅತ್ಯುತ್ತಮ ಪ್ರಯತ್ನ ಮಾಡಿದರು. ಆದರೆ ಮಲೇಷ್ಯಾ ಆಟಗಾರ ಹೆಚ್ಚಿನ ಅವಕಾಶ ನೀಡಲಿಲ್ಲ. ಇದರ ಪರಿಣಾಮ, ಎರಡನೇ ಸೆಟ್ ಅನ್ನು 21-16ರಲ್ಲಿ ಗೆದ್ದುಕೊಂಡರು.
ಮೂರನೇ ಸೆಟ್‌ನಲ್ಲಿ ಲಕ್ಷ್ಯ ಸೇನ್ ಮತ್ತು ಲೀ ಜಿ ಜಿಯಾ ನಡುವೆ ತೀವ್ರ ಹೋರಾಟ ನಡೆಯಿತು. ಈ ಸೆಟ್‌ನಲ್ಲಿ ಮಲೇಷ್ಯಾ ಆಟಗಾರ ಲಕ್ಷ್ಯ ಸೇನ್‌ಗಿಂತ ಬಲಾಢ್ಯರಾಗಿ ಕಾಣಿಸಿಕೊಂಡರು. ಏಕೆಂದರೆ ಲಕ್ಷ್ಯ ಬಲಗೈ ನೋವಿನಿಂದ ಬಳಲುತ್ತಿದ್ದರು. ನೋವಿನ ನಡುವೆಯೂ ಧೈರ್ಯ ಕಳೆದುಕೊಳ್ಳದೆ ಹೋರಾಟ ಮುಂದುವರಿಸಿದರು. ಆದರೆ, ಪದಕ ಗೆಲ್ಲಲು ಅವರ ಪ್ರಯತ್ನ ಸಾಕಾಗಲಿಲ್ಲ. ಲೀ ಜಿ ಜಿಯಾ ಮೂರನೇ ಸೆಟ್ ಅನ್ನು 21-11ರಿಂದ ಗೆದ್ದು ಕಂಚಿನ ಪದಕಕ್ಕೆ ಕೊರಳೊಡ್ಡಿದರು. ಇದರೊಂದಿಗೆ ಚೊಚ್ಚಲ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ನಿರೀಕ್ಷೆಯಲ್ಲಿದ್ದ ಲಕ್ಷ್ಯ ಸೇನ್ ಕನಸು ಭಗ್ನಗೊಂಡಿತು.