ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಆಗಸ್ಟ್ 5 ರಿಂದ ಕುಸ್ತಿ ಸ್ಪರ್ಧೆಗಳು ಪ್ರಾರಂಭವಾಗಲಿವೆ. ಈ ಸಮಯದಲ್ಲಿ ಎಲ್ಲರ ಕಣ್ಣು ಭಾರತದ ಕುಸ್ತಿಪಟುಗಳ ಮೇಲಿರುತ್ತದೆ. ಕುಸ್ತಿಯನ್ನು ವಿಶ್ವದ ಅತ್ಯಂತ ಹಳೆಯ ಕ್ರೀಡೆ ಎಂದು ಪರಿಗಣಿಸಲಾಗಿದೆ. ಈ ಕ್ರೀಡೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಆರು ಕುಸ್ತಿಪಟುಗಳು ದೇಶಕ್ಕೆ ಪದಕ ಗೆಲ್ಲುವ ಭರವಸೆಯಲ್ಲಿದ್ದಾರೆ. ಒಟ್ಟು ಏಳು ಪದಕಗಳೊಂದಿಗೆ ಹಾಕಿ ನಂತರ ಭಾರತಕ್ಕೆ ಇದು ಎರಡನೇ ಅತ್ಯಂತ ಯಶಸ್ವಿ ಕ್ರೀಡೆಯಾಗಿದೆ. ಭಾರತ 110 ಕ್ರೀಡಾಪಟುಗಳೊಂದಿಗೆ ಈ ಕೂಟವನ್ನು ಪ್ರವೇಶಿಸಲಿದ್ದು, ಕುಸ್ತಿಯಿಂದ ಹೆಚ್ಚಿನ ನಿರೀಕ್ಷೆಗಳಿವೆ. ಏಕೆಂದರೆ 2023 ರಿಂದ ವಿವಾದಗಳಿಂದ ಸುತ್ತುವರೆದಿರುವ ಈ ಕ್ರೀಡೆಯ ನಂತರ, ಕುಸ್ತಿಪಟುಗಳು ಪ್ರಬಲ ಪ್ರದರ್ಶನದೊಂದಿಗೆ ಪುನರಾಗಮನ ಮಾಡಿದ್ದಾರೆ.
ಅತ್ಯಂತ ಹಳೆಯ ಕ್ರೀಡೆ: ಕುಸ್ತಿಯು ಮಾನವ ಇತಿಹಾಸದಲ್ಲಿ ಅತ್ಯಂತ ಹಳೆಯ ಕ್ರೀಡೆಗಳಲ್ಲಿ ಒಂದಾಗಿದೆ ಮತ್ತು ಕುಸ್ತಿಪಟುಗಳ ಈ ಆಟವನ್ನು ಪ್ರಾಚೀನ ಕಾಲದ ಅನೇಕ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಈ ಆಟವನ್ನು ಮೊದಲು 708 BC ಯಲ್ಲಿ ಸ್ಪರ್ಧಿಸಲಾಯಿತು. ಗ್ರೀಕೋ-ರೋಮನ್ ಕುಸ್ತಿಯು 1896 ರಲ್ಲಿ ಅಥೆನ್ಸ್‌ನಲ್ಲಿ ಆಧುನಿಕ ಒಲಿಂಪಿಕ್ಸ್‌ಗೆ ಪದಾರ್ಪಣೆ ಮಾಡಿತು. 1908 ರಿಂದ ಒಲಿಂಪಿಕ್ಸ್‌ನಲ್ಲಿ ಕುಸ್ತಿಯು ಶಾಶ್ವತ ಕ್ರೀಡೆಯಾಯಿತು. ಫ್ರೀಸ್ಟೈಲ್ ಒಲಿಂಪಿಕ್ಸ್ ಅನ್ನು 1904 ರ ಆವೃತ್ತಿಯಲ್ಲಿ ಕಾರ್ನಿವಲ್ ಆಫ್ ಗೇಮ್ಸ್‌ನಲ್ಲಿ ಸೇರಿಸಲಾಯಿತು. ಮಹಿಳೆಯರ ಫ್ರೀಸ್ಟೈಲ್ ಕುಸ್ತಿಯನ್ನು 2004 ರಿಂದ ಒಲಿಂಪಿಕ್ ಕಾರ್ಯಕ್ರಮದಲ್ಲಿ ಸೇರಿಸಲಾಗಿದೆ.
ಒಲಿಂಪಿಕ್ಸ್‌ನಲ್ಲಿ ಭಾರತದ ಪ್ರದರ್ಶನ: ಭಾರತೀಯ ಕುಸ್ತಿಪಟುಗಳು ಒಲಿಂಪಿಕ್ಸ್ ಇತಿಹಾಸದಲ್ಲಿ ಕೆಲವು ಸಂಚಲನ ಪ್ರದರ್ಶನಗಳನ್ನು ನೀಡಿದ್ದಾರೆ ಮತ್ತು ಈ ಕ್ರೀಡೆಯಿಂದ ಏಳು ಪದಕಗಳನ್ನು ಗೆದ್ದಿದ್ದಾರೆ. 1952ರ ಹೆಲ್ಸಿಂಕಿ ಒಲಿಂಪಿಕ್ಸ್‌ನಲ್ಲಿ 57 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಖಶಬಾ ಜಾಧವ್ ಭಾರತಕ್ಕೆ ಕುಸ್ತಿ ಪದಕಗಳ ಖಾತೆ ತೆರೆದರು. ಖಶಬಾ ಅವರನ್ನು ಭಾರತದ ಒಲಿಂಪಿಕ್ ತಂಡದಲ್ಲಿ ಸೇರಿಸಲಾಗಿಲ್ಲ. ಆದರೆ ಅವರು ರಾಷ್ಟ್ರೀಯ ಚಾಂಪಿಯನ್ ನಿರಂಜನ್ ದಾಸ್ ಅವರನ್ನು ಮೂರು ಬಾರಿ ಸೋಲಿಸಿ ಗಮನ ಸೆಳೆದರಲ್ಲದೇ ಒಲಿಂಪಿಕ್ಸ್‌ಗೆ ಕಳುಹಿಸಲು ಅಧಿಕಾರಿಗಳ ಮನವೊಲಿಸುವಲ್ಲಿ ಯಶಸ್ವಿಯಾದರು.
56 ವರ್ಷಗಳ ಬಳಿಕ ಪದಕ: ಒಲಿಂಪಿಕ್ಸ್‌ನಲ್ಲಿ ಪದಕ ಪಡೆಯಲು ಭಾರತ 56 ವರ್ಷಗಳ ಕಾಲ ಕಾಯಬೇಕಾಯಿತು. ಸುಶೀಲ್ ಕುಮಾರ್ 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ 66 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದರು. ಅವರು ಉಕ್ರೇನ್‌ನ ಆಂಡ್ರೆ ಸ್ಟ್ಯಾಡ್ನಿಕ್ ವಿರುದ್ಧ ಸೋಲಿನೊಂದಿಗೆ ತಮ್ಮ ಅಭಿಯಾನ ಪ್ರಾರಂಭಿಸಿದರು. ಆದರೆ, ಸ್ಟಾಡ್ನಿಕ್ ಈವೆಂಟ್‌ನ ಫೈನಲ್‌ಗೆ ತಲುಪುತ್ತಿದ್ದಂತೆ, ಸುಶೀಲ್ ರೆಪೆಚೇಜ್ ಸುತ್ತಿನ ಮೂಲಕ ಕಂಚಿನ ಪದಕವನ್ನು ಗೆಲ್ಲುವ ಅವಕಾಶವನ್ನು ಪಡೆದರು. ಅವರು ಕಜಕಿಸ್ತಾನ್‌ನ ಲಿಯೊನಿಡ್ ಸ್ಪಿರಿಡೊನೊವ್ ಅವರನ್ನು ಸೋಲಿಸುವ ಮೊದಲು ಯುಎಸ್‌ಎಯ ಡೌಗ್ ಶ್ವಾಬ್ ಮತ್ತು ಬೆಲಾರಸ್‌ನ ಆಲ್ಬರ್ಟ್ ಬಟಿರೊವ್ ಅವರನ್ನು ಸೋಲಿಸಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದರು.
ಪದಕಗಳ ಸುರಿಮಳೆ: ಸುಶೀಲ್ ಕುಮಾರ್ ಅವರು 2016 ರ ರಿಯೊ ಡಿ ಜನೈರೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ತಮ್ಮ ಮುಡಿಗೆ ಮತ್ತೊಂದು ಗರಿಯನ್ನು ಸೇರಿಸಿದರು ಮತ್ತು ಎರಡು ವೈಯಕ್ತಿಕ ಒಲಿಂಪಿಕ್ ಪದಕಗಳನ್ನು ಗೆದ್ದ ಮೊದಲ ಭಾರತೀಯ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅವರ ದೇಶವಾಸಿ ಯೋಗೇಶ್ವರ್ ದತ್ ಅವರು ಕಣ್ಣಿನ ಗಾಯದ ಹೊರತಾಗಿಯೂ 2012 ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಫ್ರೀಸ್ಟೈಲ್ 60 ಕೆಜಿಯಲ್ಲಿ ಕಂಚಿನ ಪದಕವನ್ನು ಗೆದ್ದರು. 4 ವರ್ಷಗಳ ನಂತರ, ಸಾಕ್ಷಿ ಮಲಿಕ್ ಅವರು ರಿಯೊದಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಒಲಿಂಪಿಕ್ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎನಿಸಿಕೊಂಡರು. ಮಹಿಳೆಯರ 58 ಕೆಜಿ ಫ್ರೀಸ್ಟೈಲ್ನಲ್ಲಿ ಪದಕ ಗೆದ್ದಿದ್ದಾರೆ. ರವಿ ದಹಿಯಾ 2020 ರಲ್ಲಿ ಪುರುಷರ ಫ್ರೀಸ್ಟೈಲ್ 57 ಕೆಜಿಯಲ್ಲಿ ಬೆಳ್ಳಿ ಪದಕವನ್ನು ಗೆದ್ದರು, ಆದರೆ ಬಜರಂಗ್ ಪುನಿಯಾ 2020 ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ತಮ್ಮ ಚೊಚ್ಚಲ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕವನ್ನು ಗೆದ್ದರು.
ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಭಾರತೀಯ ಪಡೆ..
- ಅಂತೀಮ್ ಪಂಗಲ್ (ಮಹಿಳೆಯರು 53 ಕೆಜಿ): ಕಳೆದ ವರ್ಷ ಬೆಲ್‌ಗ್ರೇಡ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಯುವ ಆಟಗಾರ್ತಿ ಒಲಿಂಪಿಕ್ ಕೋಟಾ ಭದ್ರಪಡಿಸಿಕೊಂಡರು. ಅವರು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ವಿಜೇತ ಡೊಮಿನಿಕ್ ಪ್ಯಾರಿಶ್, ಐದು ಬಾರಿ ಯುರೋಪಿಯನ್ ಚಾಂಪಿಯನ್‌ಶಿಪ್‌ಗಳ ಪದಕ ವಿಜೇತೆ ರೊಕ್ಸಾನಾ ಜಸ್ಸಿನಾ, ಇನ್ನೊಬ್ಬರಾದ ಯುರೋಪಿಯನ್ ಚಾಂಪಿಯನ್‌ಶಿಪ್ ಪದಕ ವಿಜೇತೆ ನಟಾಲಿಯಾ ಮಾಲಿಶೇವಾ ಮತ್ತು ಎರಡು ಬಾರಿ ಯುರೋಪಿಯನ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಜೊವಾನ್ನಾ ಮಾಲ್ಮ್‌ಗ್ರೀನ್ ಅವರನ್ನು ಕಂಚಿನ ಪದಕದ ತಮ್ಮ ಹಾದಿಯಲ್ಲಿ ಸೋಲಿಸಿದರು. ಪ್ರಸ್ತುತ, ವಿಶ್ವದ ಆರನೇ ಶ್ರೇಯಾಂಕದ ಕುಸ್ತಿಪಟುವಾಗಿದ್ದು, ಕಳೆದ ತಿಂಗಳು ನಡೆದ ಶ್ರೇಯಾಂಕದ ಸರಣಿಯಲ್ಲಿ ಕೆಲವು ಪಂದ್ಯಗಳನ್ನು ಗೆದ್ದಿದ್ದಾರೆ.
- ವಿನೇಶ್ ಫೋಗಟ್ (ಮಹಿಳೆಯರು 50 ಕೆಜಿ): ಪ್ಯಾರಿಸ್‌ನಲ್ಲಿ ಕುಸ್ತಿಯಲ್ಲಿ ಪದಕ ಗೆಲ್ಲುವ ಭಾರತದ ದೊಡ್ಡ ಭರವಸೆ ಆಟಗಾರ್ತಿ. ವಿನೇಶ್ ಫೋಗಟ್ ಕಠಿಣ ಶ್ರಮದ ನಂತರ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅವರು ಅಂದಿನ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಪ್ರತಿಭಟಿಸಿದರು ಮತ್ತು ಇದು ಕುಸ್ತಿಪಟುಗಳು ಮತ್ತು WFI ನಡುವಿನ ಯುದ್ಧವಾಗಿತ್ತು. ಕುಸ್ತಿಪಟು ಕೂಡ ತನ್ನ ತೂಕ ವಿಭಾಗವನ್ನು 53 ಕೆಜಿಯಿಂದ 50 ಕೆಜಿಗೆ ಬದಲಾಯಿಸಬೇಕಾಯಿತು. ಏಕೆಂದರೆ ಅಂತೀಮ್ ಪಂಗಲ್ ಈಗಾಗಲೇ 53 ಕೆಜಿಯಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಆದರೂ ಮಾರ್ಚ್‌ನಲ್ಲಿ ನಡೆದ ರಾಷ್ಟ್ರೀಯ ಟ್ರಯಲ್ಸ್‌ನಲ್ಲಿ ಗೆದ್ದು ಏಷ್ಯನ್ ಒಲಿಂಪಿಕ್ ಕ್ವಾಲಿಫೈಯರ್‌ಗೆ ಅರ್ಹತೆ ಪಡೆಯುವ ಮೂಲಕ ವಿನೇಶ್ ಮ್ಯಾಟ್‌ನಲ್ಲಿ ಅದ್ಭುತ ಪುನರಾಗಮನ ಮಾಡಿದರು. ಅಲ್ಲಿ, ಅವರು ತಮ್ಮ ಎಲ್ಲಾ ಮೂರು ಪಂದ್ಯಗಳನ್ನು ಗೆದ್ದರು ಮತ್ತು 2024 ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದರು.
- ಅಂಶು ಮಲಿಕ್ (ಮಹಿಳೆಯರು 57 ಕೆಜಿ): 2021 ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಅಂಶು ಆಟದಲ್ಲಿ ತಮ್ಮ ಅದ್ಭುತ ಪ್ರದರ್ಶನವನ್ನು ಪ್ರದರ್ಶಿಸಿದರು. ಅವರು ಬರ್ಮಿಂಗ್ಹ್ಯಾಮ್ನಲ್ಲಿ 2022 ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕವನ್ನು ಗೆದ್ದರು. ಇತ್ತಿಚೇಗೆ ಅವರು ಗಾಯದ ಸಮಸ್ಯೆಯಿಂದ ಹೊರ ಬಿದ್ದಿದ್ದಾರೆ. ಏಷ್ಯನ್ ಕ್ವಾಲಿಫೈಯರ್‌ಗಳಲ್ಲಿ ಕಿರ್ಗಿಸ್ತಾನ್‌ನ ಕಲ್ಮಿರಾ ಬಿಲಿಂಬೆಕ್ ಕಾಜಿ ಮತ್ತು ಉಜ್ಬೇಕಿಸ್ತಾನ್‌ನ ಲೆಲೋಖೋನ್ ಸೊಬಿರೋವಾ ಅವರನ್ನು ಸೋಲಿಸುವ ಮೂಲಕ ಈ ವರ್ಷ ಒಲಿಂಪಿಕ್ ಕೋಟಾ ಪಡೆದರು.
- ನಿಶಾ ದಹಿಯಾ (ಮಹಿಳೆಯರ 68 ಕೆಜಿ): ಅಲೀನಾ ಶೋಚುಕ್ ಅವರನ್ನು ಸೋಲಿಸುವ ಮೂಲಕ ನಿಶಾ ತಮ್ಮ ಅಭಿಯಾನವನ್ನು ಪ್ರಾರಂಭಿಸಿದರು. ಯುರೋಪಿಯನ್ ಚಾಂಪಿಯನ್‌ಶಿಪ್ ಪದಕ ವಿಜೇತ ಜೆಕ್ ಗಣರಾಜ್ಯದ ಅಡೆಲಾ ಹಂಜ್ಲಿಕೋವಾ ವಿರುದ್ಧ ಗೆಲುವು ದಾಖಲಿಸಿದರು. ಮುಂದಿನ ಪಂದ್ಯದಲ್ಲಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತ ಅಲೆಕ್ಸಾಂಡ್ರಾ ಏಂಜೆಲ್ ವಿರುದ್ಧ ಆಕೆಯ ಜಯವು ಕುಸ್ತಿಪಟುವಿಗೆ ಒಲಿಂಪಿಕ್ ತೆರಳುವ ಪಟ್ಟಿಯಲ್ಲಿ ಸ್ಥಾನ ಖಚಿತಪಡಿಸಿತು.
- ರೀತಿಕಾ ಹೂಡಾ (ಮಹಿಳೆಯರು 76 ಕೆಜಿ): ಯುವ ಆಟಗಾರ್ತಿ ರೀತಿಕಾ ಹೂಡಾ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಈ ವರ್ಷ ಆಡಿದ ಎಲ್ಲಾ ಎಂಟು ಪಂದ್ಯಗಳನ್ನು ಗೆದ್ದಿದ್ದಾರೆ. ಯುವ ಆಟಗಾರ್ತಿ ತನ್ನ ಪ್ರದರ್ಶನದೊಂದಿಗೆ ಭರವಸೆ ಮೂಡಿಸಿದ್ದಾರೆ. ಆದರೆ ನಿಜವಾದ ವಿಷಯವೆಂದರೆ ಏಷ್ಯನ್ ಒಲಿಂಪಿಕ್ ಅರ್ಹತಾ ಪಂದ್ಯಗಳಲ್ಲಿ ಅವರ ಅಭಿಯಾನವಾಗಿತ್ತು. ಅವರನ್ನು ಕಷ್ಟದ ಗುಂಪಿನಲ್ಲಿ ಇರಿಸಲಾಯಿತು ಮತ್ತು ಆ ಗುಂಪಿನಿಂದ ಹೊರಬರುವುದು ಕಷ್ಟಕರವಾಗಿತ್ತು. ಆದ್ರೂ ಅವರೆಲ್ಲರನ್ನೂ ಸೋಲಿಸುವ ಮೂಲಕ ಒಲಂಪಿಕ್ಸ್ ಅರ್ಹತೆ ಪಡೆದುಕೊಂಡಿದ್ದಾರೆ.
- ಅಮನ್ ಸೆಹ್ರಾವತ್ (ಪುರುಷರ 57 ಕೆಜಿ): ಭಾರತದ ಏಕೈಕ ಪುರುಷ ಕುಸ್ತಿಪಟು 2023 ರಿಂದ ತಮ್ಮ ಪ್ರದರ್ಶನಗಳ ಮೂಲಕ ಸ್ಥಿರತೆಯನ್ನು ತೋರಿಸಿದ್ದಾರೆ. ಕುಸ್ತಿಪಟು ಕಳೆದ ವರ್ಷ ಕಜಕಿಸ್ತಾನದಲ್ಲಿ ನಡೆದ ಸೀನಿಯರ್ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಏಷ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕವನ್ನೂ ಗೆದ್ದಿದ್ದರು. ಆದರೂ, ಈ ವರ್ಷ ಆಡಿದ ಏಷ್ಯನ್ ಅರ್ಹತಾ ಪಂದ್ಯಗಳಲ್ಲಿ ಅವರು ಒಲಿಂಪಿಕ್ ಕೋಟಾವನ್ನು ಸಾಧಿಸಲು ವಿಫಲರಾದರು. ಈ ವರ್ಷ ಅವರು ವಿಶ್ವ ಅರ್ಹತಾ ಪಂದ್ಯಗಳಲ್ಲಿ ತಮ್ಮ ಎಲ್ಲಾ ಪಂದ್ಯಗಳನ್ನು ಗೆದ್ದರು ಮತ್ತು ಬಲ್ಗೇರಿಯಾದ ಜಾರ್ಜಿ ವಾಂಗೆಲೋವ್, ಉಕ್ರೇನ್‌ನ ಆಂಡ್ರೆ ಯಾಟ್ಸೆಂಕೊ ಮತ್ತು ಉತ್ತರ ಕೊರಿಯಾದ ಹಾನ್ ಚಾಂಗ್-ಸಾಂಗ್ ಅವರನ್ನು ಸೋಲಿಸುವ ಮೂಲಕ ಪ್ಯಾರಿಸ್ ಗೇಮ್ಸ್‌ಗೆ ಪ್ರವೇಶಿಸಿರುವುದು ಅವರಿಗೆ ಸಮಾಧಾನ ತಂದಿದೆ.
ಮೂಲ ನಿಯಮಗಳು: ಕೆಲವು ಒಲಂಪಿಕ್ ಕುಸ್ತಿ ಕ್ರೀಡೆಗಳೆಂದರೆ ಗ್ರೀಕೋ-ರೋಮನ್ ಮತ್ತು ಫ್ರೀಸ್ಟೈಲ್. ಗ್ರೀಕೋ-ರೋಮನ್ ವಿಭಾಗದಲ್ಲಿ ಕುಸ್ತಿಪಟುಗಳು ತಮ್ಮ ತೋಳುಗಳನ್ನು ಮತ್ತು ಮೇಲಿನ ದೇಹವನ್ನು ಮಾತ್ರ ತಮ್ಮ ಎದುರಾಳಿಯನ್ನು ಸೊಂಟದ ಮೇಲೆ ಅಥವಾ ಕೆಳಗೆ ದಾಳಿ ಮಾಡಬಹುದು. ಫ್ರೀಸ್ಟೈಲ್ ಕುಸ್ತಿಯು ಅತ್ಯಂತ ಮುಕ್ತ ಕ್ರೀಡೆಯಾಗಿದೆ ಮತ್ತು ಕ್ರೀಡಾಪಟುಗಳು ತಮ್ಮ ಕಾಲುಗಳನ್ನು ಬಳಸಲು ಮತ್ತು ತಮ್ಮ ಎದುರಾಳಿಯನ್ನು ಸೊಂಟದ ಕೆಳಗೆ ಹಿಡಿದಿಟ್ಟುಕೊಳ್ಳಲು ಅನುಮತಿಸಲಾಗಿದೆ. ಇದಲ್ಲದೆ, ಒಬ್ಬ ಕುಸ್ತಿಪಟು 10 ಅಂಕಗಳನ್ನು ಗಳಿಸಿದರೆ ಅವನು ತಾಂತ್ರಿಕ ಶ್ರೇಷ್ಠತೆಯ ಆಧಾರದ ಮೇಲೆ ಪಂದ್ಯವನ್ನು ಗೆಲ್ಲುತ್ತಾರೆ. ಕುಸ್ತಿಪಟುಗಳಿಗೆ ಅವರು ನಡೆಸುವ ಚಲನೆಗಳ ಕಷ್ಟದ ಆಧಾರದ ಮೇಲೆ ಅಂಕಗಳನ್ನು ನೀಡಲಾಗುತ್ತದೆ.
ಓದಿ: ತಂದೆಯಂತೆಯೇ ಮಗ; ಟೀಂ ಇಂಡಿಯಾ ಪರ ಆಡಿದ ಅಪ್ಪ- ಮಕ್ಕಳಿವರು! - Father And Son In Cricket