ನ್ಯೂಯಾರ್ಕ್ (ಯುಎಸ್): ಐಸಿಸಿ ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತದ ವಿರುದ್ಧ ಪಾಕಿಸ್ತಾನದ ವೈಫಲ್ಯತೆ ಮುಂದುವರೆದಿದೆ. ರೋಹಿತ್ ಪಡೆ ವಿರುದ್ಧ 6 ರನ್‌ಗಳ ಸೋಲಿನ ಬಳಿಕ ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಕೆಲ ಕಾರಣಗಳನ್ನು ನೀಡಿದ್ದಾರೆ. ತಂಡವು ಒಂದರ ಹಿಂದೊಂದರಂತೆ ವಿಕೆಟ್ ಕಳೆದುಕೊಳ್ಳುತ್ತ, ಹೆಚ್ಚು ಡಾಟ್ ಬಾಲ್ ಆಡಿರುವುದೇ ಸೋಲಲು ಕಾರಣ ಎಂದು ಬಾಬರ್ ಹೇಳಿದ್ದಾರೆ. ಉತ್ತಮ ಬೌಲಿಂಗ್ ಪ್ರದರ್ಶನದ ಹೊರತಾಗಿಯೂ ಪಾಕ್ ತಂಡ ಬ್ಯಾಟಿಂಗ್ ವೈಫಲ್ಯದಿಂದ ವಿಶ್ವಕಪ್ನಲ್ಲಿ ಮತ್ತೊಂದು ಸೋಲುಂಡಿದೆ.
ಭಾರತದ ಪರ ಮಿಂಚಿನ ದಾಳಿ ನಡೆಸಿದ ವೇಗಿ ಜಸ್ಪ್ರೀತ್ ಬುಮ್ರಾ (14ಕ್ಕೆ 3) ಮತ್ತು ಆಲ್ರೌಂಡರ್ ಹಾರ್ದಿಕ್ ಪಾಂಡ್ಯ (24ಕ್ಕೆ 2) ಪಾಕ್ ತಂಡವನ್ನು ಸೋಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಭಾನುವಾರ ನ್ಯೂಯಾರ್ಕ್ನ ನಸ್ಸೌ ಕೌಂಟಿ ಸ್ಟೇಡಿಯಂನಲ್ಲಿ ಟೀಂ ಇಂಡಿಯಾ ನೀಡಿದ 120 ರನ್ ಗುರಿ ಬೆನ್ನಟ್ಟಿದ ಪಾಕಿಸ್ತಾನ 6 ರನ್ ಅಂತರದ ಸೋಲಿಗೆ ಶರಣಾಯಿತು.
ಪಂದ್ಯದ ಬಳಿಕ ಮಾತನಾಡಿದ ನಾಯಕ ಬಾಬರ್ ಅಜಮ್, "ನಾವು ಉತ್ತಮ ಬೌಲಿಂಗ್ ಪ್ರದರ್ಶನ ತೋರಿದೆವು. ಆದರೆ, ಬ್ಯಾಟಿಂಗ್‌ನಲ್ಲಿ ನಿರಂತರ ವಿಕೆಟ್ ಕಳೆದುಕೊಳ್ಳುವ ಜೊತೆಗೆ, ಹೆಚ್ಚಿನ ಡಾಟ್ ಬಾಲ್ ಆಡಿದ್ದರಿಂದ ಸೋಲುವಂತಾಯಿತು. ನಾವು ಸರಳ ಬ್ಯಾಟಿಂಗ್ ತಂತ್ರದೊಂದಿಗೆ ಮೈದಾನಕ್ಕಳಿದೆವು. ಬ್ಯಾಟಿಂಗ್ ಸ್ಟ್ರೈಕ್ ಬದಲಾಯಿಸುತ್ತ ಆಗಾಗ ಬೌಂಡರಿ ಗಳಿಸುವುದು ನಮ್ಮ ಯೋಜನೆಯಾಗಿತ್ತು. ಆದರೆ, ಇನ್ನಿಂಗ್ಸ್ನ ದ್ವಿತೀಯಾರ್ಧದಲ್ಲಿ ಬಹಳಷ್ಟು ಡಾಟ್ ಬಾಲ್ ಆಡಿದೆವು. ಮೊದಲ ಆರು ಓವರ್‌ಗಳಲ್ಲಿ ಹೆಚ್ಚಿನ ರನ್ ಬಾರಿಸುವ ಪ್ಲಾನ್ ಮಾಡಿದ್ದೆವು. ಆದರೆ, ವಿಕೆಟ್ ಕಳೆದುಕೊಂಡಿದ್ದಲ್ಲದೇ, ರನ್ ಗಳಿಸದಿರುವುದು ನಾವು ಪುಟಿದೇಳಲಾಗದೆ ಸೋತೆವು'' ಎಂದರು.
''ಹೆಚ್ಚಾಗಿ ಚೆಂಡು ಬ್ಯಾಟ್ಗೆ ಸುಲಭವಾಗಿ ಬರುತ್ತಿತ್ತು. ಕೆಲವೊಮ್ಮೆ ಸ್ವಲ್ಪ ನಿಧಾನವಾಗಿದ್ದಲ್ಲದೆ, ಕೆಲವು ಬಾಲ್ಗಳು ಹೆಚ್ಚು ಬೌನ್ಸ್ ಆಗುತ್ತಿದ್ದವು. ನಾವೀಗ ಕೊನೆಯ ಎರಡು ಪಂದ್ಯಗಳನ್ನು ಗೆಲ್ಲಲೇಬೇಕಿದೆ. ನಮ್ಮ ತಪ್ಪುಗಳ ಬಗ್ಗೆ ಎಲ್ಲರೂ ಕುಳಿತು ಚರ್ಚಿಸುತ್ತೇವೆ. ಕೊನೆಯ ಎರಡು ಪಂದ್ಯಗಳಿಗಾಗಿ ಎದುರು ನೋಡುತ್ತಿದ್ದೇವೆ'' ಎಂದು ಬಾಬರ್ ಅಜಮ್ ತಿಳಿಸಿದರು.
ಪಾಕ್ ವಿರುದ್ಧ ರೋಚಕ ಪಂದ್ಯ ಗೆದ್ದ ಬಳಿಕ ಭಾರತವು ಎರಡು ಪಂದ್ಯಗಳಲ್ಲಿಯೂ ಗೆದ್ದು ನಾಲ್ಕು ಅಂಕಗಳೊಂದಿಗೆ ಎ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಎರಡು ಸೋಲುಗಳೊಂದಿಗೆ ಪಾಕಿಸ್ತಾನವು ನಾಲ್ಕನೇ ಸ್ಥಾನದಲ್ಲಿದೆ. ಪಾಕ್ ತಂಡ ಇದಕ್ಕೂ ಮುನ್ನ ಯುಎಸ್ ವಿರುದ್ಧದ ಮೊದಲ ಹಣಾಹಣಿಯಲ್ಲಿ ಸೋತಿತ್ತು. ಬಾಬರ್ ಪಡೆಯು ಮುಂದಿನ ಪಂದ್ಯದಲ್ಲಿ ಜೂನ್ 11ರಂದು ಕೆನಡಾ ವಿರುದ್ಧ ಆಡಲಿದ್ದು, ಟೂರ್ನಿಯಲ್ಲಿ ಉಳಿದುಕೊಳ್ಳಲು ಗೆಲುವು ಅನಿವಾರ್ಯವಾಗಿದೆ. ಮತ್ತೊಂದೆಡೆ, ಭಾರತವು ಜೂನ್ 12ರಂದು ಅಮೆರಿಕ ವಿರುದ್ಧ ಕಣಕ್ಕಿಳಿಯಲಿದೆ.
ಇದನ್ನೂ ಓದಿ: ಟಿ20 ವಿಶ್ವಕಪ್: ಪಾಕಿಸ್ತಾನ ಬಗ್ಗುಬಡಿದ ಭಾರತ; ದಾಖಲೆಯ 6 ರನ್‌ಗಳ ಗೆಲುವು - India Beats Pakistan