ಲಾಹೋರ್ (ಪಾಕಿಸ್ತಾನ): 2011ರಲ್ಲಿ ಏಕದಿನ ಕ್ರಿಕೆಟ್ ವಿಶ್ವಕಪ್ ವಿಜೇತ ಭಾರತ ತಂಡದ ಮುಖ್ಯ ಕೋಚ್ ಆಗಿದ್ದ ಗ್ಯಾರಿ ಕರ್ಸ್ಟನ್ ಅವರನ್ನು ಪಾಕಿಸ್ತಾನ ಟಿ20 ಮತ್ತು ಏಕದಿನ ತಂಡದ ಕೋಚ್ ಆಗಿ ನೇಮಕ ಮಾಡಲಾಗಿದೆ. ಆಸ್ಟ್ರೇಲಿಯಾದ ಮಾಜಿ ವೇಗಿ ಜೇಸನ್ ಗಿಲ್ಲೆಸ್ಪಿ ಅವರು ಟೆಸ್ಟ್ ಕ್ರಿಕೆಟ್‌ನ ಕೋಚ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಇದರ ಜೊತೆಗೆ, ಪಾಕಿಸ್ತಾನದ ಮಾಜಿ ಆಲ್‌ರೌಂಡರ್ ಅಜರ್ ಮಹಮೂದ್ರನ್ನು ತಂಡದ ಸಹಾಯಕ ಕೋಚ್ ಆಗಿ ನೇಮಿಸಲಾಗಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮುಖ್ಯಸ್ಥ ಮೊಹ್ಸಿನ್ ನಖ್ವಿ, ಪಾಕ್ ತಂಡವನ್ನು ಮತ್ತಷ್ಟು ಸದೃಢಗೊಳಿಸಲು ಹಲವು ತಂಡಗಳಿಗೆ ಮಾರ್ಗದರ್ಶಕರಾಗಿದ್ದ ಗ್ಯಾರಿ ಕರ್ಸ್ಟನ್ ಮತ್ತು ಜೇಸನ್ ಗಿಲ್ಲಿಸ್ಪಿ ಅವರನ್ನು ತರಬೇತಿ ಸಿಬ್ಬಂದಿಯಾಗಿ ನೇಮಿಸಿಕೊಳ್ಳಲಾಗಿದೆ. ನಮ್ಮ ಆಟಗಾರರಿಗೆ ಗುಣಮಟ್ಟದ ಕೋಚಿಂಗ್ ತಂಡವನ್ನು ನೀಡಲು ಬಯಸಿದ್ದು, ಅದಕ್ಕಾಗಿ ಈ ಇಬ್ಬರ ಮೊರೆ ಹೋಗಲಾಗಿದೆ ಎಂದು ಅವರು ತಿಳಿಸಿದರು.
ಪಾಕಿಸ್ತಾನ ಮೇ 22 ರಿಂದ ನಾಲ್ಕು ಟಿ20 ಗಳನ್ನು ಆಡಲು ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಆ ಸರಣಿಯಿಂದಲೇ ಕರ್ಸ್ಟನ್ ಅಧಿಕಾರ ಕೋಚ್ ಹುದ್ದೆ ವಹಿಸಿಕೊಳ್ಳುವ ನಿರೀಕ್ಷೆಯಿದೆ. ಬಳಿಕ ತಂಡ ಜೂನ್‌ನಲ್ಲಿ ಟಿ20 ವಿಶ್ವಕಪ್‌ಗೆ ಪ್ರಯಾಣಿಸಲಿದೆ. ಕಳೆದ ವರ್ಷ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ನ ನಂತರ ತಂಡವು ಪೂರ್ಣಾವಧಿ ಮುಖ್ಯ ಕೋಚ್‌ಗಾಗಿ ಹುಡುಕಾಟ ನಡೆಸುತ್ತಿತ್ತು.
ವಿಶ್ವಕಪ್ನಲ್ಲಿ ತಂಡ ನಾಕೌಟ್ ಹಂತಕ್ಕೂ ತಲುಪದ ಹಿನ್ನೆಲೆ ಮುಖ್ಯ ಕೋಚ್ ಗ್ರಾಂಟ್ ಬ್ರಾಡ್‌ಬರ್ನ್, ನಿರ್ದೇಶಕ ಮಿಕ್ಕಿ ಆರ್ಥರ್, ಬೌಲಿಂಗ್ ಕೋಚ್ ಮೋರ್ನೆ ಮೊರ್ಕೆಲ್ ಮತ್ತು ಬ್ಯಾಟಿಂಗ್ ಕೋಚ್ ಆಂಡ್ರ್ಯೂ ಪುಟ್ಟಿಕ್‌ರನ್ನು ವಜಾಗೊಳಿಸಿತ್ತು. ಇದರ ಜೊತೆಗೆ ನಾಯಕ ಬಾಬರ್ ಅಜಮ್ ಅವರನ್ನು ನಾಯಕತ್ವದಿಂದ ತೆಗೆದುಹಾಕಲಾಗಿತ್ತು. ಬಳಿಕ ವೇಗಿ ಶಾಹೀನ್ ಶಾ ಆಫ್ರಿದಿಗೆ ಏಕದಿನ ಮತ್ತು ಟಿ20, ಶಾನ್ ಮಸೂದ್ಗೆ ಟೆಸ್ಟ್ ತಂಡದ ಪಟ್ಟ ಕಟ್ಟಲಾಗಿತ್ತು.
ಆಸ್ಟ್ರೇಲಿಯಾ ಪ್ರವಾಸದ ಸಮಯದಲ್ಲಿ ಪಾಕಿಸ್ತಾನವು ಮಾಜಿ ಕ್ರಿಕೆಟರ್ ಮುಹಮ್ಮದ್ ಹಫೀಜ್‌ರನ್ನು ತಂಡದ ಮೆಂಟರ್ ಆಗಿ ನೇಮಕ ಮಾಡಲಾಗಿತ್ತು. ಆದರೆ ಪಾಕಿಸ್ತಾನ ಟೆಸ್ಟ್ ಸರಣಿಯಲ್ಲಿ 0-3 ಮತ್ತು ಟಿ20 ಸರಣಿಯಲ್ಲಿ 1-4 ರಿಂದ ಹೀನಾಯ ಸೋಲು ಕಂಡಿತು. ಬಳಿಕ ಹಫೀಜ್ರನ್ನೂ ಹುದ್ದೆಯಿಂದ ಕೈಬಿಡಲಾಯಿತು. ಮಸೂದ್ ಅವರನ್ನು ಟೆಸ್ಟ್ ನಾಯಕನಾಗಿ ಉಳಿಸಿಕೊಂಡರೆ, ಶಾಹೀನ್ ಶಾ ಅಫ್ರಿದಿಯನ್ನು ನಾಯಕತ್ವದಿಂದ ಬಿಡುಗಡೆ ಮಾಡಿ, ಬಾಬರ್ ಅಜಂಗೆ ಮತ್ತೆ ನಾಯಕತ್ವ ನೀಡಲಾಗಿದೆ.
ಇದನ್ನೂ ಓದಿ: ಸಂಜು ಸ್ಯಾಮ್ಸನ್, ಧ್ರುವ್ ಜುರೆಲ್ ಜೊತೆಯಾಟದಿಂದ ರಾಜಸ್ಥಾನಕ್ಕೆ ಗೆಲುವು - IPL 2024 RR Beat LSG