ಪ್ಯಾರಿಸ್ (ಎಪಿ) : ಪ್ಯಾರಿಸ್ 2024 ಒಲಿಂಪಿಕ್ಸ್‌ನ ಅದ್ಧೂರಿ ಉದ್ಘಾಟನಾ ಸಮಾರಂಭಕ್ಕೆ ಕೆಲವೇ ಗಂಟೆಗಳ ಮೊದಲು ಫ್ರಾನ್ಸ್‌ನ ಹೈ-ಸ್ಪೀಡ್ ರೈಲು ನಿಲ್ದಾಣದಲ್ಲಿ ವಿಧ್ವಂಸಕ ಕೃತ್ಯ ನಡೆದಿರುವ ಬಗ್ಗೆ ವರದಿಯಾಗಿದೆ. ವಿಧ್ವಂಸಕ ಕೃತ್ಯಗಳು ನಡೆದಿರುವುದರಿಂದಾಗಿ ಫ್ರಾನ್ಸ್ ಮತ್ತು ಯುರೋಪ್‌ನ ಉಳಿದ ಭಾಗಗಳಿಂದ ಪ್ಯಾರಿಸ್‌ಗೆ ಪ್ರಯಾಣವನ್ನು ಸ್ಥಗಿತಗೊಳಿಸಲಾಗಿದೆ.
![A high-speed train station in France](https://etvbharatimages.akamaized.net/etvbharat/prod-images/26-07-2024/olympics-opening-cermony-latest--french-rail-network-sabotaged-hours-before-paris-games-begin_87c37bd4129148aaab3bd75be1aab37b_2607a_1721989255_760.jpg)
ಫ್ರೆಂಚ್ ಅಧಿಕಾರಿಗಳು ಈ ದಾಳಿಯನ್ನು ಕ್ರಿಮಿನಲ್ ಕೃತ್ಯ ಎಂದು ಕರೆದಿದ್ದಾರೆ. ಈ ನಡುವೆ ಇದ್ದಕ್ಕಿದ್ದಂತೆ ನಡೆದ ದಾಳಿಗಳ ಬಗ್ಗೆ ಫ್ರೆಂಚ್ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು, ಒಲಿಂಪಿಕ್ ಕ್ರೀಡಾಕೂಟದ ಹಿನ್ನೆಲೆಯೇ ದುಷ್ಕರ್ಮಿಗಳು ಈ ದಾಳಿ ನಡೆಸಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
![France](https://etvbharatimages.akamaized.net/etvbharat/prod-images/26-07-2024/olympics-opening-cermony-latest--french-rail-network-sabotaged-hours-before-paris-games-begin_a03b0133a8d14f1dab8a53530da268f4_2607a_1721989255_764.jpg)
ಬ್ರಸೆಲ್ಸ್‌ನಲ್ಲಿ, ಪ್ಯಾರಿಸ್‌ಗೆ ಹೋಗುವ ಮತ್ತು ಬರುವ ಎಲ್ಲಾ ಹೈಸ್ಪೀಡ್ ರೈಲುಗಳನ್ನು ಸ್ಟ್ಯಾಂಡರ್ಡ್ ಲೈನ್ ಮೂಲಕ ಬೇರೆಡೆಗೆ ಡೈವರ್ಟ್ ಮಾಡಲಾಗುತ್ತಿದೆ ಎಂದು ಯುರೋಸ್ಟಾರ್ ಹೇಳಿದ್ದಾರೆ. "ಈ ಮಾರ್ಗದಲ್ಲಿ ರೈಲು ಪ್ರಯಾಣಿಸುವುದರಿಂದ ಪ್ರಯಾಣದ ಸಮಯ ಸುಮಾರು ಒಂದೂವರೆ ಗಂಟೆಗಳವರೆಗೆ ಹೆಚ್ಚಾಗಲಿದೆ ಎಂದು ಫ್ರೆಂಚ್ ರಾಷ್ಟ್ರೀಯ ರೈಲು ಕಂಪನಿ ಹೇಳಿದೆ. ಪ್ಯಾರಿಸ್‌ಗೆ ಹೋಗುವ ರೈಲನ್ನು ಘೋಷಿಸಿದಾಗ, ಪ್ರಯಾಣವನ್ನು ರದ್ದುಪಡಿಸಿದ ಅಥವಾ ತಡವಾದ ಅನೇಕ ಪ್ರಯಾಣಿಕರು ಟಿಕೆಟ್ ಪಡೆದು ಕೊಳ್ಳದೆಯೇ ರೈಲ್ವೆಗೆ ಹತ್ತಿದ್ದಾರೆ ಎಂದು ವರದಿಯಾಗಿದೆ.
![France](https://etvbharatimages.akamaized.net/etvbharat/prod-images/26-07-2024/olympics-opening-cermony-latest--french-rail-network-sabotaged-hours-before-paris-games-begin_78d205df830f4ac79d80fb2e6b2cd307_2607a_1721989255_86.jpg)
ಪ್ರಯಾಣಿಕರು ಒಮ್ಮೆ ರೈಲಿನ ಒಳಗೆ ಬಂದ ನಂತರ ಎಲ್ಲರಿಗೂ ಉಚಿತ ನೀರಿನ ಬಾಟಲಿಗಳನ್ನು ಹಸ್ತಾಂತರಿಸಲಾಯಿತು. ವಿಧ್ವಂಸಕ ಘಟನೆಯ ಬಗ್ಗೆ ಪ್ಯಾರಿಸ್ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ. "ರಾಷ್ಟ್ರದ ಮೂಲಭೂತ ಹಿತಾಸಕ್ತಿಗಳಿಗೆ ಧಕ್ಕೆ ತರುವ, ಆಸ್ತಿ ಪಾಸ್ತಿ ಹಾನಿಮಾಡುವ ಅಪರಾಧಗಳ ಮೇಲೆ ಕಾನೂನು ತನ್ನದೇ ಆದ ಕಠಿಣ ಕ್ರಮ ಕೈಗೊಳ್ಳಲಿದೆ" ರೈಲ್ವೆ ನಿಯಂತ್ರಕರು ತಿಳಿಸಿದ್ದಾರೆ.
ಈ ಅಪರಾಧಕ್ಕೆ 15 ವರ್ಷಗಳ ಜೈಲು ಶಿಕ್ಷೆ ಮತ್ತು 225,000 ಯುರೋಗಳ ದಂಡ ವಿಧಿಸಬಹುದು. ಇದಲ್ಲದೇ, ಸಂಘಟಿತ ಗುಂಪಿನಲ್ಲಿ ಅಪಾಯಕಾರಿ ಕೃತ್ಯ ಎಸಗುವ ಆರೋಪಿಗಳಿಗೆ 20 ವರ್ಷಗಳ ಜೈಲು ಶಿಕ್ಷೆ ಮತ್ತು 150,000 ಯುರೋಗಳಷ್ಟು ದಂಡವನ್ನು ವಿಧಿಸಬಹುದು ಎಂದು ಹೇಳಿದ್ದಾರೆ.
ಇಬ್ಬರು ಜರ್ಮನ್ ಅಥ್ಲೀಟ್‌ಗಳು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಪ್ಯಾರಿಸ್‌ಗೆ ರೈಲಿನಲ್ಲಿ ತೆರಳಿದ್ದರು ಎಂಬ ಮಾಹಿತಿ ಸಿಕ್ಕಿದೆ. ಆದರೆ ಸುದೀರ್ಘ ವಿಳಂಬದಿಂದಾಗಿ ಅವರು ಬೆಲ್ಜಿಯಂಗೆ ಹಿಂತಿರುಗಬೇಕಾದ ಪರಿಸ್ಥಿತಿ ಬಂದಿದೆ. ಅವರು ಈಗ ಸಮಾರಂಭಕ್ಕೆ ಪಾಲ್ಗೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಜರ್ಮನ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
''ಇದು ನಿಜವಾದ ಅವಮಾನ. ಆದರೆ, ನಾವು ತುಂಬಾ ತಡವಾಗಿ ಬಂದಿದ್ದೇವೆ, ನಮಗೆ ಸಮಯಕ್ಕೆ ಸರಿಯಾಗಿ ಅಲ್ಲಿಗೆ ಬರುವ ಅವಕಾಶ ಸಿಗಲಿಲ್ಲ" ಎಂದು ತಂಡದ ಸಹ ಆಟಗಾರ ಕ್ರಿಶ್ಚಿಯನ್ ಕುಕುಕ್ ಜೊತೆ ಪ್ರಯಾಣಿಸುತ್ತಿದ್ದ ರೈಡರ್ ಫಿಲಿಪ್ ವೈಶಾಪ್ಟ್ ಸುದ್ದಿವಾಹಿನಿಯೊಂದಕ್ಕೆ ಮಾಹಿತಿ ನೀಡಿದ್ದಾರೆ.
ಮಾಂಟ್‌ಪರ್ನಾಸ್ಸೆ 2 ರೈಲ್ವೆ ನಿಲ್ದಾಣವು ತಡವಾದ ಅಥವಾ ರೈಲ್ವೆ ಪ್ರಯಾಣ ವಂಚಿತ ಪ್ರಯಾಣಿಕರಿಂದ ತುಂಬಿತ್ತು, ಕೆಲವರು ಅಡಚಣೆಗಳಿಂದಾಗಿ ಹಳಿಗಳ ಮೇಲೆ ಗಂಟೆಗಟ್ಟಲೆ ನಿಂತಲ್ಲಿಯೇ ನಿಂತಿದ್ದರು.
ಈ ಬಗ್ಗೆ ಮೈವೆನ್ ಲ್ಯಾಬ್ಬೆ- ಸೊರಿನ್ ಅವರು ಮಾತನಾಡಿ, ಪ್ಯಾರಿಸ್‌ಗೆ ಹಿಂದಿರುಗುವ ಮೊದಲು ರೈಲಿನಲ್ಲಿ ಗಂಟೆಗಳ ಕಾಲ ಕಾಯುತ್ತಿದ್ದೆವು, ನಾವು ಯಾವಾಗ ಪ್ರಯಾಣವನ್ನು ಮುಂದುವರೆಸಬಹುದು ಎಂಬುದರ ಕುರಿತು ನಮಗೆ ಯಾವುದೇ ಮಾಹಿತಿ ಇರಲಿಲ್ಲ. ನಾವು ನೀರು, ಶೌಚಾಲಯ, ವಿದ್ಯುತ್ ಇಲ್ಲದೇ ಎರಡು ಗಂಟೆಗಳ ಕಾಲ ಅಲ್ಲಿಯೇ ಇದ್ದೆವು ಎಂದು ಅವರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ : ಸಾವಿರಾರು ವರ್ಷಗಳ ಇತಿಹಾಸವಿರುವ ಒಲಿಂಪಿಕ್ ಕ್ರೀಡಾಕೂಟದ ಆಸಕ್ತಿದಾಯಕ ಸಂಗತಿಗಳು - Interesting Facts About Olympics