ಪುಣೆ (ಮಹಾರಾಷ್ಟ್ರ): ಕ್ರೀಡಾಪಟುಗಳಿಗೆ ನೆರವಿನ ಅಗತ್ಯವಿದ್ದು, ಇದರಿಂದ ಅವರ ಪ್ರದರ್ಶನವನ್ನು ಸುಧಾರಿಸಲು ಸಹಾಯ ಆಗುತ್ತದೆ ಎಂದು ಒಲಿಂಪಿಕ್ ಕಂಚಿನ ಪದಕ ವಿಜೇತ ಶೂಟರ್ ಸ್ವಪ್ನಿಲ್ ಕುಸಾಲೆ ಅವರು ಒತ್ತಿ ಹೇಳಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಶೂಟಿಂಗ್ ಕ್ರೀಡೆಯಲ್ಲಿ ತೊಡಗಿರುವ ಕ್ರೀಡಾಪಟುಗಳು ಒಲಿಂಪಿಕ್ಸ್ನಂತಹ ಸ್ಪರ್ಧೆಗಳಿಗೆ ಹೋಗಲು ಸರಿಯಾದ ಉಪಕರಣಗಳು, ಮದ್ದುಗುಂಡುಗಳು ಮತ್ತು ಪ್ರಯಾಣಕ್ಕಾಗಿ ಸಾಕಷ್ಟು ಖರ್ಚು ಮಾಡಬೇಕಾಗುತ್ತದೆ. ಹಾಗಾಗಿ ಸಕಾಲದಲ್ಲಿ ನೆರವಿನ ಅಗತ್ಯವಿದೆ. ಇದು ಕ್ರೀಡಾಪಟುವಿನ ಕಾರ್ಯಕ್ಷಮತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ತಿಳಿಸಿದ್ದಾರೆ.
ಗುರುವಾರದಂದು ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಿಸಲಾಯಿತು. ಈ ವೇಳೆ ಕ್ರೀಡಾಪಟುಗಳಿಗೆ ಏನು ಸಂದೇಶ ನೀಡುತ್ತೀರಿ ಎಂದು ಕುಸಾಲೆ ಅವರಿಗೆ ಮಾಧ್ಯಮವೊಂದರಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, 'ಕ್ರೀಡಾಪಟುಗಳು ಸದಾ ಪೌಷ್ಟಿಕತೆ ಹಾಗೂ ಫಿಟ್ನೆಸ್ ಬಗ್ಗೆ ಗಮನ ಹರಿಸಬೇಕು. ಶ್ರದ್ಧೆ ಮತ್ತು ಪರಿಶ್ರಮದಿಂದ ಮಾತ್ರ ಶ್ರೇಷ್ಠ ಸಾಧನೆ ಮಾಡಲು ಸಾಧ್ಯ ಎಂಬುದನ್ನು ನೆನಪಿನಲ್ಲಿಡಬೇಕು' ಎಂದರು.
ಮುಂದುವರೆದು ಮಾತನಾಡಿದ ಅವರು 2024ರ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಶೂಟಿಂಗ್ನಲ್ಲಿ ಗೆದ್ದಿರುವ ಕಂಚಿನ ಪದಕದಿಂದ ಕುಸಾಲೆ ತೃಪ್ತರಾಗಿಲ್ಲ. 2028ರ ಲಾಸ್ ಏಂಜಲೀಸ್‌ನಲ್ಲಿ ನಡೆಯಲಿರುವ ಮುಂದಿನ ಆವೃತ್ತಿಯ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆಲ್ಲುವ ಭರವಸೆಯನ್ನು ಹೊಂದಿರುವುದಾಗಿ ತಿಳಿಸಿದ್ದಾರೆ. ನಾಸಿಕ್ ಮತ್ತು ಪುಣೆಯಲ್ಲಿ ತರಬೇತಿ ಪಡೆದಿರುವ ಈ ಅನುಭವಿ ಶೂಟರ್, ಪುಣೆ ಮೂಲದ ರಿಯಲ್ ಎಸ್ಟೇಟ್ ಉದ್ಯಮ ಕಂಪನಿಯ ಅಧ್ಯಕ್ಷ ಅಮೋಲ್ ರಾವೆಟ್ಕರ್ ಅವರನ್ನು ಭೇಟಿ ಮಾಡಿದರು. ಈ ವೇಳೆ ರಾವೆಟ್ಕರ್ ಅವರು ಸ್ವಪ್ನಿಲ್ ಕುಸಾಲೆ ಅವರ ಮುಂದಿನ ತರಬೇತಿಗಾಗಿ 5 ಲಕ್ಷ ರೂಪಾಯಿಗಳ ಅನುದಾನ ಘೋಷಿಸಿದರು.
ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ, ಮಹಾರಾಷ್ಟ್ರದ ಶೂಟರ್ ಸ್ವಪ್ನಿಲ್ ಕುಸಾಲೆ ಇತಿಹಾಸ ನಿರ್ಮಿಸಿದ್ದಾರೆ. 50 ಮೀಟರ್ ರೈಫಲ್ ತ್ರಿ ಪೊಸಿಷನ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಸ್ವಪ್ನೀಲ್ ಈ ವಿಭಾಗದಲ್ಲಿ ಒಟ್ಟು 451.4 ಅಂಕ ಗಳಿಸಿ ಪದಕ ಗೆದ್ದುಕೊಂಡಿದ್ದರು. ಇದಕ್ಕೂ ಮುನ್ನ ಈಜಿಪ್ಟ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್ 2022ರಲ್ಲಿ ನಾಲ್ಕನೇ ಸ್ಥಾನ ಪಡೆಯುವ ಮೂಲಕ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಂಡಿದ್ದರು.