ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್ ಜುಲೈ 26 ರಿಂದ ಪ್ರಾರಂಭವಾಗಲಿದ್ದು, ಆಗಸ್ಟ್ 11 ರಂದು ಮುಕ್ತಾಯಗೊಳ್ಳಲಿದೆ. ಇದು 33ನೇ ಬೇಸಿಗೆ ಒಲಿಂಪಿಕ್ ಕ್ರೀಡಾಕೂಟವಾಗಿದ್ದು ಮೂರನೇ ಬಾರಿಗೆ ಪ್ಯಾರಿಸ್ ಆತಿಥ್ಯವಹಿಸಿದೆ. ಕ್ರೀಡಾ ಮಹಾಕುಂಭದಲ್ಲಿ 10,000ಕ್ಕೂ ಹೆಚ್ಚು ಕ್ರೀಡಾಪಟುಗಳು ಪದಕಕ್ಕಾಗಿ ಸ್ಪರ್ಧಿಸಲಿದ್ದು, ಈ ಪೈಕಿ ಭಾರತದಿಂದ 117 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಇದರಲ್ಲಿ ಅತ್ಯಂತ ಹಿರಿಯ ಮತ್ತು ಕಿರಿಯ ಕ್ರೀಡಾಪಟುಗಳೂ ಇದ್ದಾರೆ. ಅವರ ಕುರಿತಾದ ಮಾಹಿತಿ ಈ ಸುದ್ದಿಯಲ್ಲಿದೆ.
ರೋಹನ್ ಬೋಪಣ್ಣ: ಕರ್ನಾಟಕ ಮೂಲದ ಟೆನಿಸ್ ತಾರೆ ರೋಹನ್ ಬೋಪಣ್ಣ ಅವರು ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಅತ್ಯಂತ ಹಿರಿಯ ಕ್ರೀಡಾಪಟು ಆಗಿದ್ದಾರೆ. 44 ವರ್ಷದ ಇವರು ಮೂರನೇ ಬಾರಿಗೆ ಒಲಿಂಪಿಕ್ ಕ್ರೀಡಾ ಕೂಟದಲ್ಲಿ ಭಾಗವಹಿಸಿದ್ದಾರೆ. ಒಲಿಂಪಿಕ್ ಭಾಗವಹಿಸಿದ ಅತ್ಯಂತ ಹಿರಿಯ ವ್ಯಕ್ತಿ ಎಂಬ ದಾಖಲೆ ಕೆನಡಾದ ಅಥ್ಲೀಟ್ ಜಿಲ್ ಇರ್ವಿಂಗ್ ಹೆಸರಲ್ಲಿದೆ. ಇವರು ತಮ್ಮ 61ನೇ ವಯಸ್ಸಿನಲ್ಲೂ ಒಲಿಂಪಿಕ್ ಆಡಿ ಗಮನ ಸೆಳೆದಿದ್ದರು.
ಸ್ಕೇಟ್‌ಬೋರ್ಡರ್ ಝೆಂಗ್: ಪ್ಯಾರಿಸ್ ಕ್ರೀಡಾಕೂಟದಲ್ಲಿ ಭಾಗಹಿಸಿರುವ ಅತ್ಯಂತ ಕಿರಿಯ ಸ್ಪರ್ಧಿಯಾಗಿ ಸ್ಕೇಟ್‌ಬೋರ್ಡರ್ ಝೆಂಗ್ ದಾಖಲೆ ಬರೆಯಲಿದ್ದಾರೆ. ಇವರು 11 ವರ್ಷ 11 ತಿಂಗಳ ವಯಸ್ಸಿನವರಾಗಿದ್ದು ಪ್ರಸಕ್ತ ಋತುವಿನ ಅತ್ಯಂತ ಕಿರಿಯ ಕ್ರೀಡಾಪಟುವಾಗಿದ್ದಾರೆ. ಈ ಹಿಂದೆ 1896ರ ಒಲಿಂಪಿಕ್ನಲ್ಲಿ 10 ವರ್ಷದ ಗ್ರೀಕ್ ಜಿಮ್ನಾಸ್ಟ್ರ ಒಲಿಂಪಿಕ್ನಲ್ಲಿ ಭಾಗವಹಿಸಿದ್ದರು. ಇದೂ ಒಲಿಂಪಿಕ್ನಲ್ಲಿ ಭಾಗಿಯಾದ ಈವರೆಗಿ ಅತ್ಯಂತ ಕಿರಿಯ ವ್ಯಕ್ತಿ ಎಂಬ ದಾಖಲೆ ಆಗಿದೆ.
ಧಿನಿಧಿ: ಭಾರತದ ಧಿನಿಧಿ ದೇಸಿಂಗು ಕಿರಿಯ ಅಥ್ಲೀಟ್ ಪಟ್ಟಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಬೆಂಗಳೂರಿನ 14 ವರ್ಷದ ಈಜುಗಾರ್ತಿ ಧಿನಿಧಿ 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಭಾರತದ ಅತ್ಯಂತ ಕಿರಿಯ ಅಥ್ಲೀಟ್ ಎಂಬ ಇತಿಹಾಸವನ್ನು ಸೃಷ್ಟಿಸಲು ಸಿದ್ಧರಾಗಿದ್ದಾರೆ. ಇತ್ತೀಚೆಗೆ ಡಿಸಿಎಂ ಡಿಕೆ ಶಿವಕುಮಾರ್ ಕೂಡ ತಮ್ಮ ಎಕ್ಸ್ ಖಾತೆಯಲ್ಲಿ ಧಿನಿಧಿಗೆ ಶುಭಕೋರಿದ್ದರು. "ಕನ್ನಡ ನೆಲದ ಪ್ರತಿಭೆಗಳು ಭಾರತವನ್ನು ಪ್ರತಿನಿಸುತ್ತಿದ್ದಾರೆ. ಇವರು ಗೆಲುವು ಸಾಧಿಸಿ ದೇಶಕ್ಕೆ ಕೀರ್ತಿ ತರಲಿ ಎಂದು ಶುಭ ಹಾರೈಸುತ್ತೇನೆ ಎಂದು ತಿಳಿಸಿದ್ದರು.