ನವದೆಹಲಿ: ಇತ್ತೀಚೆಗೆ ಮುಕ್ತಾಯಗೊಂಡ ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಬೆಳ್ಳಿ ಪದಕ ಜಯಿಸುವುದರೊಂದಿಗೆ, 'ಗೋಲ್ಡನ್ ಬಾಯ್' ನೀರಜ್ ಚೋಪ್ರಾ ಸತತ ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಪದಕ ಗೆದ್ದ ಭಾರತದ ಮೊದಲ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್ನ ಜಾವೆಲಿನ್ ಎಸೆತ ಕ್ರೀಡಾಕೂಟದಲ್ಲಿ 89.45 ಮೀಟರ್ ದೂರಕ್ಕೆ ಭರ್ಜಿ ಎಸೆಯುವ ಮೂಲಕ ನೀರಜ್ ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದಾರೆ. ಈ ಐತಿಹಾಸಿಕ ಸಾಧನೆಯು ನೀರಜ್ ಅವರ ಸ್ಥಾನಮಾನವನ್ನು ಹೆಚ್ಚಿಸುವದರೆ ಜೊತೆಗೆ ಅವರ ಬ್ರ್ಯಾಂಡ್ ಮೌಲ್ಯವನ್ನು ಗಮನಾರ್ಹವಾಗಿ ಹೆಚ್ಚಿಸಿದೆ. ಜೊತೆಗೆ ಭಾರತೀಯ ಕ್ರೀಡಾ ಐಕಾನ್‌ಗಳಲ್ಲಿ ಒಬ್ಬರಾಗಿದ್ದಾರೆ. ಏಷ್ಯನ್ ಗೇಮ್ಸ್, ವಿಶ್ವ ಚಾಂಪಿಯನ್‌ಶಿಪ್, ಕಾಮನ್‌ವೆಲ್ತ್ ಗೇಮ್ಸ್ ಮತ್ತು ಡೈಮಂಡ್ ಲೀಗ್‌ನಲ್ಲಿ ಗೆಲುವು ಪದಕಗಳನ್ನು ಗೆದ್ದಿರುವ ನೀರಜ್ ಒಲಿಂಪಿಕ್ಸ್ನಲ್ಲೂ ಉತ್ತಮ ಸಾಧನೆ ಮಾಡಿದ್ದಾರೆ. ಈ ಸಾಧನೆ ಅವರನ್ನು ವಿವಿಧ ಕಂಪನಿಗಳೊಂದಿಗೆ ಸಂಬಂಧ ಬೆಳೆಸುವಂತೆ ಮಾಡಿದೆ. ಜಾಗತಿಕವಾಗಿ ಹೆಸರಾಂತ ಬ್ರಾಂಡ್‌ಗಳಾದ ವೀಸಾ, ಸ್ಯಾಮ್‌ಸಂಗ್, ಒಮೆಗಾ, ಅಂಡರ್ ಆರ್ಮರ್‌ಗಳಿಗೆ ಉನ್ನತ ಶ್ರೇಣಿಯ ರಾಯಭಾರಿಯಾಗಿದ್ದಾರೆ. ಕೋಕಾ-ಕೋಲಾ, ಬ್ರಿಟಾನಿಯಾ ಮತ್ತು ಭಾರತ್ ಪೆಟ್ರೋಲಿಯಂ ಕೂಟ ಈ ಪಟ್ಟಿಗೆ ಸೇರಿವೆ.
ಪ್ಯಾರಿಸ್‌ನಲ್ಲಿ ನೀರಜ್ ಪದಕ ಗೆಲ್ಲುತ್ತಿದ್ದಂತೆ ಅವರ ಬ್ರ್ಯಾಂಡ್ ಮೌಲ್ಯವು ಗಣನೀಯವಾಗಿ 40 ರಿಂದ 50% ಹೆಚ್ಚಳ ಗೊಂಡಿದೆ. ಆಟೋಮೊಬೈಲ್, ಬ್ಯಾಂಕಿಂಗ್, ಲಾಜಿಸ್ಟಿಕ್ಸ್, ರಿಯಲ್ ಎಸ್ಟೇಟ್ ಮತ್ತು ಕ್ವಿಕ್ ಕಾಮರ್ಸ್ ಸೇರಿದಂತೆ ವಿವಿಧ ವಲಯಗಳ ಪ್ರಮುಖ ಬ್ರ್ಯಾಂಡ್‌ಗಳು ನೀರಜ್ ಜೊತೆ ಪಾಲುದಾರಿಕೆ ಹೊಂದಲು ಉತ್ಸುಕವಾಗಿವೆ.
ಪ್ಯಾರಿಸ್ ಬಳಿಕ ನೀರಜ್ ಅವರ ಬ್ರ್ಯಾಂಡ್ ಮೌಲ್ಯದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡ ಜೆಎಸ್‌ಡಬ್ಲ್ಯು ಸ್ಪೋರ್ಟ್ಸ್‌ನ ಮುಖ್ಯ ವಾಣಿಜ್ಯ ಅಧಿಕಾರಿ ಕರಣ್ ಯಾದವ್, "ನೀರಜ್ ಭಾರತದ ಅಪ್ರತಿಮ ಕ್ರೀಡಾಪಟು. ಬ್ಯಾಕ್ ಟು ಬ್ಯಾಕ್ ಒಲಿಂಪಿಕ್ಸ್‌ನಲ್ಲಿ ಅವರ ಚಿನ್ನ ಮತ್ತು ಬೆಳ್ಳಿ ಪದಕಗಳು ಗೆದ್ದು ದೇಶಕ್ಕೆ ಸ್ಪೂರ್ತಿಯಾಗಿದ್ದಾರೆ. ಇದರಿಂದಾಗಿ ನೀರಜ್ ಅವರು ಜಾಗತಿಕ ಮಟ್ಟದಲ್ಲಿ ಪ್ರಚಾರದಲ್ಲಿದ್ದು ಅವರ ವಾಣಿಜ್ಯ ಮೌಲ್ಯವೂ ಮತ್ತಷ್ಟು ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಅವರೊಂದಿಗೆ ಪ್ರಮುಖ ಡೀಲ್ಗಳನ್ನು ಮಾಡಿಕೊಳ್ಳಲು ನಾವು ನಿರೀಕ್ಷಿಸುತ್ತಿದ್ದೇವೆ" ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಕ್ರಿಕೆಟ್ನಲ್ಲಿ ಹೇಗೆಲ್ಲಾ OUT ಮಾಡಬಹುದು ಗೊತ್ತೇ?: ನೀವು ತಿಳಿದಿರೋದು 5 ಮಾತ್ರ! - Types Of Dismissals In Cricket