ಹೈದರಾಬಾದ್: ಐಪಿಎಲ್ ಕ್ರಿಕೆಟ್ನಲ್ಲಿ ಟಾಕ್ ಆಫ್ ಟೌನ್ ಆಗಿರುವ ಬಲಗೈ ಯುವ ವೇಗದ ಬೌಲರ್ ಮಯಾಂಕ್ ಯಾದವ್ ಮಂಗಳವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಮಿಂಚಿನ ದಾಳಿಯ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮತ್ತೊಂದು ಗೆಲುವಿಗೆ ನೆರವಾದರು. ಶರವೇಗದ ಬೌಲಿಂಗ್ ನಡೆಸಿ ಆರ್‌ಸಿಬಿಯ ಮೂರು ನಿರ್ಣಾಯಕ ವಿಕೆಟ್‌ಗಳನ್ನು ಪಡೆದರು. ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್ (2) ಮತ್ತು ಕ್ಯಾಮರೂನ್ ಗ್ರೀನ್ (1) ವಿಕೆಟ್‌ಗಳನ್ನು ತ್ವರಿತವಾಗಿ ಕಬಳಿಸಿ ಎಲ್‌ಎಸ್‌ಜಿಯು ಬೆಂಗಳೂರಿನಲ್ಲಿ 28 ರನ್‌ಗಳ ಜಯ ದಾಖಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಕೇವಲ ಎರಡನೇ ಐಪಿಎಲ್ ಪಂದ್ಯದಲ್ಲಿಯೇ 21 ವರ್ಷದ ಮಯಾಂಕ್ ತಮ್ಮ ಎರಡನೇ 'ಪ್ಲೇಯರ್ ಆಫ್ ದಿ ಮ್ಯಾಚ್' ಪ್ರಶಸ್ತಿ ಪಡೆದರು. ಪಂದ್ಯಾವಳಿಯ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಕ್ರಿಕೆಟಿಗರಾದರು. ವೇಗ ಮತ್ತು ನಿಖರತೆಗೆ ಫಿದಾ ಆಗಿರುವ ಅನೇಕ ಮಾಜಿ ಕ್ರಿಕೆಟಿಗರು ಶೀಘ್ರದಲ್ಲೇ ಮಯಾಂಕ್ ಭಾರತ ತಂಡದಲ್ಲಿ ಆಡುವುದನ್ನು ನೋಡಲು ಉತ್ಸುಕರಾಗಿದ್ದಾರೆ.
ಮಯಾಂಕ್ ಯಾದವ್ ತಮ್ಮ ಮೊದಲ ಎರಡು ಐಪಿಎಲ್ ಪಂದ್ಯಗಳಲ್ಲಿ ಆರು ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಪ್ರಸ್ತುತ ಪರ್ಪಲ್ ಕ್ಯಾಪ್ ಹೊಂದಿರುವವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಹಣಾಹಣಿಯಲ್ಲಿ ಮಯಾಂಕ್ 156.7 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುವ ಮೂಲಕ ಐಪಿಎಲ್ನಲ್ಲಿ ತಮ್ಮದೇ ದಾಖಲೆಯನ್ನು ಮುರಿದರು. ಸದ್ಯ ಯಾದವ್ 2024 ಐಪಿಎಲ್ನಲ್ಲಿ ಅತಿ ವೇಗದ ಬಾಲ್ ಎಸೆದ ದಾಖಲೆಗೆ ಪಾತ್ರರಾಗಿದ್ದಾರೆ.
ಸತತ ಎರಡನೇ ಪಂದ್ಯ ವಿಜೇತ ಪ್ರದರ್ಶನದ ಬಳಿಕ ಈ ವರ್ಷದ ಜೂನ್‌ನಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ತಂಡಕ್ಕೆ ಮಯಾಂಕ್ ಅವರನ್ನು ಸೇರ್ಪಡೆ ಮಾಡಿಕೊಳ್ಳುವಂತೆ ಅಭಿಮಾನಿಗಳು ಆಗ್ರಹ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಾವಿರಾರು ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮೂಲಕ ಒತ್ತಾಯಿಸಿದ್ದಾರೆ.
"ಮಯಾಂಕ್ ಯಾದವ್ ಆರ್‌ಸಿಬಿ ವಿರುದ್ಧ 4-14-3 ಬೌಲಿಂಗ್ ಸ್ಪೆಲ್ ಮಾಡಿದ್ದಾರೆ. ನೀವು T20 ವಿಶ್ವಕಪ್ ತಂಡದಲ್ಲಿ ಫಾಸ್ಟ್ ಮತ್ತು ಫ್ಯೂರಿಯಸ್ ಮಯಾಂಕ್ ಯಾದವ್ ಅವರನ್ನು ನೋಡಲು ಬಯಸುವಿರಾ" ಎಂದು ಅಭಿಮಾನಿಯೊಬ್ಬ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
"ನೀವು ಮಯಾಂಕ್ ಯಾದವ್ ಅವರನ್ನು ಗಂಭೀರವಾಗಿ ಪರಿಗಣಿಸಬೇಕು. ಮೊದಲ ಪಂದ್ಯದ ಪ್ರದರ್ಶನವನ್ನು ಸಾಮಾನ್ಯ ಎಂದು ನೀವು ಹೇಳಬಹುದು. ಆದರೆ, ಈಗ ಚಿನ್ನಸ್ವಾಮಿಯಲ್ಲಿಯೂ ಉತ್ತಮ ಪ್ರದರ್ಶನ ನೀಡಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣವು ಬೌಲರ್ಗಳ ಪಾಲಿನ ಸ್ಮಶಾನ, ಆದರೆ, ಅವರು ಅದನ್ನು ಬ್ಯಾಟ್ಸ್‌ಮನ್‌ಗಳ ಸ್ಮಶಾನವನ್ನಾಗಿಸಿದ್ದಾರೆ. ನಮಗೆ ಟಿ20 ವಿಶ್ವಕಪ್‌ನಲ್ಲಿ ಅವರು ಬೇಕು. ಅವರೊಂದು ದೊಡ್ಡ ಅಸ್ತ್ರವಾಗಬಹುದು. ವೇಗದ ಜೊತೆಗೆ ಲಯ ಹಾಗೂ ನಿಖರತೆಯು ಅನನ್ಯವಾಗಿದೆ. ಅವರೊಬ್ಬ ಗಂಭೀರ ಆಟಗಾರ ಮತ್ತು ಅವರ ಅಗತ್ಯತೆಯು ಬಹಳಷ್ಟಿದೆ" ಎಂದು ಇನ್ನೊಬ್ಬ ಎಕ್ಸ್ ಬಳಕೆದಾರರು ಬರೆದುಕೊಂಡಿದ್ದಾರೆ.
"ಮಯಾಂಕ್ ಯಾದವ್ರನ್ನು ಟಿ20 ವಿಶ್ವಕಪ್ ಹಾಗೂ ತದನಂತರ ಆಸ್ಟ್ರೇಲಿಯಾ ಪ್ರವಾಸಕ್ಕೆ ಕರೆದೊಯ್ಯಿರಿ. ಮಯಾಂಕ್ ಅವರು ಬುಮ್ರಾ ಬಳಿಕ ಭಾರತದಿಂದ ಮೂಡಿಬಂದ ಅತ್ಯಂತ ರೋಮಾಂಚನಕಾರಿ ವೇಗಿ'' ಎಂದು ಇನ್ನೊಬ್ಬ ಅಭಿಮಾನಿ ಪೋಸ್ಟ್ ಮಾಡಿದ್ದಾರೆ.
''ಇಂದಿನ ಐಪಿಎಲ್ ಸೆನ್ಸೇಷನ್ ಆಗುವತ್ತ ಮಯಾಂಕ್ ಯಾದವ್ ಪಯಣಕ್ಕೆ ಸಾಕ್ಷಿಯಾಗಲು ನನಗೆ ಅಪಾರ ಹೆಮ್ಮೆ ಇದೆ. ಇದಲ್ಲದೆ, ಇಶಾಂತ್ ಮತ್ತು ನವದೀಪ್ ಅವರ ಹೆಜ್ಜೆಗಳನ್ನು ಅನುಸರಿಸುತ್ತಿರುವ ಹರ್ಷಿತ್ ರಾಣಾ ಮತ್ತು ಮಯಾಂಕ್ ಅವರಂತಹ ಪ್ರತಿಭೆಗಳೊಂದಿಗೆ ದೆಹಲಿಯು ವೇಗದ ಬೌಲರ್‌ಗಳನ್ನು ಬೆಳೆಸುವ ಮೈದಾನವಾಗಿ ಹೊರಹೊಮ್ಮುತ್ತಿರುವುದನ್ನು ನೋಡುವುದು ಸಂತಸಕರವಾಗಿದೆ. ಮುಂದೆ ಇನ್ನಷ್ಟು ಉಜ್ವಲ ಭವಿಷ್ಯಕ್ಕಾಗಿ ಮಯಾಂಕ್‌ಗೆ ನನ್ನ ಶುಭ ಹಾರೈಕೆಗಳು" ಎಂದು ಆರ್‌ಸಿಬಿ ವಿರುದ್ಧ ಮಯಾಂಕ್ ಯಾದವ್ ಅವರ ಪ್ರಭಾವಶಾಲಿ ಪ್ರದರ್ಶನದ ಬಳಿಕ ಡಿಡಿಸಿಎ ಕಾರ್ಯದರ್ಶಿ ಸಿದ್ಧಾರ್ಥ್ ಸಾಹಿಬ್ ಸಿಂಗ್ ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: 'ಮಯಾಂಕ್ ಯಾದವ್ ರಾಕೆಟ್ ವೇಗದ ಬೌಲಿಂಗ್': ಯುವ ವೇಗಿಗೆ ಮೆಚ್ಚುಗೆಯ ಮಹಾಪೂರ - Mayank Yadav