ಮುಂಬೈ(ಮಹಾರಾಷ್ಟ್ರ): ಟಿ-20 ವಿಶ್ವಕಪ್ ಗೆದ್ದ ಟೀಂ ಇಂಡಿಯಾದ ಭವ್ಯ ಮೆರವಣಿಗೆ ಗುರುವಾರ ಸಂಜೆ ಮುಂಬೈ ನಗರಿಯ ಅರಬ್ಬೀ ಸಮುದ್ರ ತೀರದ ಮರೀನ್ ಡ್ರೈವ್ನಲ್ಲಿ ಅದ್ಧೂರಿಯಾಗಿ ನಡೆಯಿತು. ತಮ್ಮ ನೆಚ್ಚಿನ ಕ್ರಿಕೆಟಿಗರನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಅಭಿಮಾನಿಗಳು ಜಮಾಯಿಸಿದ್ದರು. ಈ ಸಂದರ್ಭದಲ್ಲಿ ನೂಕುನುಗ್ಗಲು ಉಂಟಾಗಿ ಹಲವರು ಗಾಯಗೊಂಡಿದ್ದಾರೆ. ಕೆಲವರು ಉಸಿರಾಟದ ತೊಂದರೆ ಅನುಭವಿಸಿದರು ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
AN UNFORGETTABLE DAY 💙
— BCCI (@BCCI) July 4, 2024
𝐂𝐇𝐀𝐌𝐏𝐈𝐎𝐍𝐒 🏆#TeamIndia | #T20WorldCup | #Champions pic.twitter.com/FeT7VNV5lB
ಪ್ರತ್ಯಕ್ಷದರ್ಶಿ ರವಿ ಸೋಲಂಕಿ ಎಂಬವರು ಮಾತನಾಡಿ, "ನಾನು ಕಚೇರಿಯಿಂದ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದೆ. ಈ ವೇಳೆ ಭಾರತ ಕ್ರಿಕೆಟ್ ತಂಡದ ಆಟಗಾರರು ಸಂಜೆ 5-6 ಗಂಟೆಯ ವೇಳೆಗೆ ಮೆರವಣಿಗೆಯಲ್ಲಿ ಭಾಗವಹಿಸುತ್ತಾರೆ ಎಂದು ತಿಳಿಯಿತು. ಆದರೆ, ನಿಗದಿತ ಸಮಯಕ್ಕೆ ಮೆರವಣಿಗೆ ಆರಂಭವಾಗಲಿಲ್ಲ. ಜನಸಂದಣಿ ಮಾತ್ರ ಹೆಚ್ಚುತ್ತಲೇ ಇತ್ತು. ದೊಡ್ಡ ಸಂಖ್ಯೆಯಲ್ಲಿ ಪೊಲೀಸರಿದ್ದರೂ ಪರಿಸ್ಥಿತಿಯನ್ನು ನಿಭಾಯಿಸುತ್ತಿರಲಿಲ್ಲ. ನೂಕುನುಗ್ಗಲಿನಲ್ಲಿ ಒಬ್ಬರ ಮೇಲೊಬ್ಬರು ಬೀಳುತ್ತಿದ್ದರು. ಜನರು ಜೋರಾಗಿ ಕಿರುಚುತ್ತಿದ್ದರು" ಎಂದರು.
ವಿಜಯೋತ್ಸವ ಮೆರವಣಿಗೆ ವೇಳೆ ಪ್ರಜ್ಞೆ ತಪ್ಪಿ ಬಿದ್ದ ಸಂತ್ರಸ್ತ ರಿಷಬ್ ಮಹೇಶ್ ಯಾದವ್ ಮಾತನಾಡಿ, "ಜನರ ಮಧ್ಯೆ ಸಿಲುಕಿ ನನಗೆ ಉಸಿರುಗಟ್ಟಿದಂತಾಯಿತು. ನಾನು ಪ್ರಜ್ಞೆ ಕಳೆದುಕೊಂಡು ಬಿದ್ದೆ. ನನ್ನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು. ಚಿಕಿತ್ಸೆ ಪಡೆದು ಈಗ ಚೇತರಿಸಿಕೊಂಡಿದ್ದೇನೆ. ಅಗತ್ಯಕ್ಕಿಂತ ಹೆಚ್ಚು ಜನಸಂದಣಿ ಇತ್ತು. ನಿರ್ವಹಣೆ ಸರಿಯಾಗಿರಲಿಲ್ಲ. ಪೊಲೀಸರೂ ಎಚ್ಚೆತ್ತುಕೊಂಡಿರಲಿಲ್ಲ. ಹಾಗಾಗಿ ಸಮಸ್ಯೆಯಾಯಿತು" ಎಂದು ವಿವರಿಸಿದರು.
This Day. This Celebration. This Reception 💙#TeamIndia | #T20WorldCup | #Champions pic.twitter.com/nhdoqqVUzU
— BCCI (@BCCI) July 4, 2024
ರೋಹಿತ್ ಶರ್ಮಾ ನಾಯಕತ್ವದ ಭಾರತೀಯ ಕ್ರಿಕೆಟ್ ತಂಡ ಮರೀನ್ ಡ್ರೈವ್‌ನಿಂದ ತೆರೆದ ಬಸ್ಸಿನ ಮೇಲ್ಛಾವಣಿಯಲ್ಲಿ ನಿಂತು ಭವ್ಯ ಮೆರವಣಿಗೆಯಲ್ಲಿ ಸಾಗಿದರು. ಐತಿಹಾಸಿಕ ಕ್ಷಣವನ್ನು ಸಂಭ್ರಮಿಸಲು ಲಕ್ಷಾಂತರ ಕ್ರಿಕೆಟ್ ಅಭಿಮಾನಿಗಳು ನೆರೆದಿದ್ದರು. ಮೆರವಣಿಗೆಯುದ್ದಕ್ಕೂ ಆಟಗಾರರು ಟ್ರೋಫಿಯನ್ನು ಎತ್ತಿ ಹಿಡಿದು ಅಭಿಮಾನಿಗಳ ಬೆಂಬಲಕ್ಕೆ ಧನ್ಯವಾದ ಅರ್ಪಿಸುತ್ತಿದ್ದರು.
ಮರೀನ್ ಡ್ರೈವ್ನಲ್ಲಿ ಆರಂಭವಾದ ವಿಜಯೋತ್ಸವ ವಾಂಖೆಡೆ ಕ್ರೀಡಾಂಗಣದಲ್ಲಿ ಕೊನೆಗೊಂಡಿತು. ಕ್ರೀಡಾಂಗಣದಲ್ಲಿ ಇಡೀ ತಂಡವನ್ನು ಸನ್ಮಾನಿಸಲಾಯಿತು. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಪದಾಧಿಕಾರಿಗಳು ವಿಶ್ವಕಪ್ ಗೆದ್ದ ತಂಡಕ್ಕೆ 125 ಕೋಟಿ ರೂಪಾಯಿಗಳ ಚೆಕ್ ವಿತರಿಸಿದರು.